ಮಡಿಕೇರಿ, ಏ. ೨೨ : ಭಾರತದಲ್ಲಿಯೇ ಕೊಡಗು ಜಿಲ್ಲಾ ಸಹಕಾರಿ ಕ್ಷೇತ್ರಕ್ಕೆ ಮಹತ್ವದ ಇತಿಹಾಸವಿದೆ. ದೇಶದಲ್ಲಿ ಮೊದಲ ಸಹಕಾರ ಸಂಸ್ಥೆ ೧೯೦೫ ಮೇ ೮ ರಂದು ಗದಗ ಜಿಲ್ಲೆಯ ಕಣಗಿನ ಹಾಳ್ ಎಂಬಲ್ಲಿ ಸಿದ್ಧನಗೌಡ ಸಣ್ಣರಾಮನ ಗೌಡ ಪಾಟೀಲ್ ಎಂಬವರ ನೇತೃತ್ವದಲ್ಲಿ ಸ್ಥಾಪನೆಯಾದರೆ, ಈ ಸಂಘ ಪ್ರಾರಂಭವಾಗಿ ಕೇವಲ ೧೪ ದಿನಗಳ ಅಂತರದಲ್ಲಿಯೇ ಕೊಡಗಿನ ತಲ್ತೆರೆಶೆಟ್ಟಳ್ಳಿಯಲ್ಲಿ ೧೯೦೫ ಮೇ ೨೨ ರಂದು ಕುರಾದಗೌಡ್ನಮನೆ ಪಿ. ದೊಡ್ಡಯ್ಯ ಎಂಬ ಸಹಕಾರಿಯವರ ಮುಂದಾಳತ್ವದಲ್ಲಿ ಸಹಕಾರ ಸಂಘ ರಚನೆಯಾಗಿರುವುದು ಕೊಡಗಿನ ಸಹಕಾರಿ ಕ್ಷೇತ್ರಕ್ಕೆ ಹೆಗ್ಗಳಿಕೆಯ ವಿಚಾರ. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸೇರಿದಂತೆ ಕೆಲವು ಊರುಗಳಲ್ಲಿ ಕೂಡ ೧೯೧೦ ರ ತರುವಾಯ ವಿವಿಧ ಸಹಕಾರ ಸಂಸ್ಥೆಗಳು ಪ್ರಾರಂಭವಾದವು. ಕೊಡಗು ಜಿಲ್ಲೆ ದೇಶದಲ್ಲಿಯೇ ಪ್ರಾರಂಭಿಕವಾಗಿ ಅತೀ ಹೆಚ್ಚಿನ ಸಹಕಾರ ಸಂಸ್ಥೆ ಪ್ರಾರಂಭಕ್ಕೆ ಕಾರಣವಾದ ಜಿಲ್ಲೆಯಾಗಿಯೂ ಖ್ಯಾತವಾಯಿತು. ಇಂಥ ಸಹಕಾರ ಸಂಸ್ಥೆಗಳಲ್ಲಿ ಸೋಮವಾರಪೇಟೆ ಕೃಷಿ ಪತ್ತಿನ ಸಹಕಾರ ಸಂಘ ಕೂಡ ಒಂದಾಗಿದ್ದು ಇಂದು ಶತಮಾನೋತ್ಸವ ಆಚರಿಸುತ್ತಿದೆ.

ಸೋಮವಾರಪೇಟೆ ವ್ಯಾಪ್ತಿಯ ಜನತೆಯ ಬಹುವರ್ಷಗಳ ಬೇಡಿಕೆಯಾಗಿದ್ದ ಸಹಕಾರ ಸಂಸ್ಥೆಯ ಕನಸು ನನಸಾಗಿದ್ದು ೧೯೧೯ ರಲ್ಲಿ. ಸೋಮವಾರಪೇಟೆಯಲ್ಲಿ ಸಹಕಾರ ಸಂಘದ ಸ್ಥಾಪನೆಗೆ ಮುಂದಾದ ನಾರಾಯಣಶೆಟ್ಟಿ ಅವರು ೧೯೧೯ ರಲ್ಲಿ ನಾನ್ ಅಗ್ರಿಕಲ್ಚರ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟೆಯನ್ನು ಹುಟ್ಟು ಹಾಕಿದರು. ಪ್ರಾರಂಭಿಕ ದಿನಗಳಲ್ಲಿ ಕೆಲವೊಂದು ಸಮಸ್ಯೆ ಎದುರಾಯಿತಾದರೂ ಅಂದಿನ ಹಿರಿಯ ಸಹಕಾರಿಗಳ ಅವಿರತ ಹಾಗೂ ನಿಸ್ವಾರ್ಥ ಸೇವೆಯಿಂದಾಗಿ ಸಂಘಕ್ಕೆ ಜೀವಕಳೆ ಬಂದಿತ್ತು. ಹೀಗಾಗಿಯೇ ೧೯೩೯ ರಲ್ಲಿ ಕೆ.ಎಸ್. ನಾಗರಾಜು ಅವರ ಶ್ರದ್ಧೆಯಿಂದಾಗಿ ಸಂಘ ಕಾಯಕಲ್ಪ ಪಡೆದುಕೊಂಡಿತು.

೧೯೪೩ ರಲ್ಲಿ ಶ್ರೀ ಹೆಚ್.ಸಿ. ರಾಜಾರಾಯರ ಅಧ್ಯಕ್ಷತೆಯಲ್ಲಿದ್ದ ಸಂಘವು ಸೋಮವಾರಪೇಟೆ ಟೌನ್ ಸಹಕಾರ ಸಂಘ ಎಂಬ ಹೆಸರು ಪಡೆಯಿತಲ್ಲದೇ, ೧೯೪೯ ರಲ್ಲಿ ಇದು ಸೋಮವಾರಪೇಟೆ ಸಹಕಾರ ಬ್ಯಾಂಕ್ ಆಗಿ ಪರಿವರ್ತನೆಗೊಂಡಿತು.

೧೯೬೦ - ಬ್ಯಾಂಕ್ ಚರಿತ್ರೆಯಲ್ಲಿ ದಾಖಲಾರ್ಹ ವರ್ಷ. ಅಂದಿನ ಅಧ್ಯಕ್ಷರಾಗಿದ್ದ ಶ್ರೀ ಬಿ.ಎಸ್. ಸಿದ್ದಪ್ಪ ಮತ್ತು ನಿರ್ದೇಶಕರು ರೂ. ೪೦ ಸಾವಿರ ವೆಚ್ಚದಲ್ಲಿ ಸ್ವಂತ ಕಟ್ಟಡ ನಿರ್ಮಿಸಿದರು. ಅಂದಿನ ಜನಪ್ರಿಯ ಡೆಪ್ಯೂಟಿ ಕಮೀಷನರ್ ಐ.ಸಿ. ಸುಬ್ಬಯ್ಯ ಅವರು ಈ ಕಟ್ಟಡವನ್ನು ಉದ್ಘಾಟಿಸಿದರು.