ಕೂಡಿಗೆ, ಏ. ೨೨: ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಘಟಕದ ಆಶ್ರಯದಲ್ಲಿ ತಾ. ೨೩ ರಂದು (ಇಂದು) ಜಿಲ್ಲಾಮಟ್ಟದ ವೀರಶೈವ ಲಿಂಗಾಯಿತ ದೊಡ್ಡವೀರ ರಾಜೇಂದ್ರ ಒಡೆಯರ್ ಕ್ರೀಡಾಕೂಟವು ಹೆಬ್ಬಾಲೆಯ ಸಂಯುಕ್ತ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯಲಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ.ಶಿವಪ್ಪ ತಿಳಿಸಿದ್ದಾರೆ.

ಬೆಳಗ್ಗೆ ೮.೩೦ ಕ್ಕೆ ಹೆಬ್ಬಾಲೆ ಬನಶಂಕರಿ ಅಮ್ಮನವರ ದೇವಸ್ಥಾನದಿಂದ ಬೈಕ್ ರ‍್ಯಾಲಿ ಮೂಲಕ ಕಾಲೇಜು ಮೈದಾನಕ್ಕೆ ಕ್ರೀಡಾಜ್ಯೋತಿ ತರಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಅನಂತರ ಗುಂಪು ಆಟಗಳಾದ ಕ್ರಿಕೆಟ್, ಹಗ್ಗಜಗ್ಗಾಟ, ಥ್ರೋಬಾಲ್, ಶಟಲ್ ಬಾಲಕ - ಬಾಲಕಿಯರಿಗೆ ಕಾಳು ಹೆಕ್ಕುವುದು, ಕಪ್ಪೆ ಜಿಗಿತ, ಓಟದ ಸ್ಪರ್ಧೆಗಳು ಮತ್ತಿತರ ಸ್ಪರ್ಧೆಗಳು, ಪುರುಷ ಮತ್ತು ಮಹಿಳೆಯರಿಗೆ ನಿಧಾನ ಬೈಕ್ ಚಾಲನೆ, ಭಾರದ ಗುಂಡು ಎಸೆತ, ರಂಗೋಲಿ, ಓಟ ಮತ್ತಿತರ ಸ್ಪರ್ಧೆಗಳು ನಡೆಯಲಿವೆ ಎಂದು ಕ್ರೀಡಾ ಸಮಿತಿಯ ಅಧ್ಯಕ್ಷ ಮೋಕ್ಷಿಕ್ ರಾಜ್ ತಿಳಿಸಿದ್ದಾರೆ.