ಮಡಿಕೇರಿ, ಏ. ೨೨: ಜಿಲ್ಲೆಯಲ್ಲಿ ಸಾಹಿತ್ಯ ಪರಿಷತ್ತು ಭವನ ನಿರ್ಮಾಣಕ್ಕೆ ರೂ. ೧೦ ಲಕ್ಷ ಅನುದಾನ ನೀಡುವುದಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಭರವಸೆ ನೀಡಿದ್ದಾರೆ.
ಕಾಸರಗೋಡಿಗೆ ತೆರಳುತ್ತಿದ್ದ ಸಂದರ್ಭ ಮಡಿಕೇರಿಯ ಸುದರ್ಶನ ಅತಿಥಿ ಗೃಹದಲ್ಲಿ ತಂಗಿದ್ದಾಗ ಅವರನ್ನು ಕೊಡಗು ಲೇಖಕ ಮತ್ತು ಕಲಾವಿದರ ಬಳಗ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂಪಿ.ಕೇಶವ ಕಾಮತ್ ಮತ್ತು ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮತ್ತು ಪದಾಧಿಕಾರಿಗಳಾದ ಮುನೀರ್ ಅಹಮದ್, ಅಂಬೆಕಲ್ ನವೀನ್, ಕಡ್ಲೇರ ತುಳಸಿ ಮೋಹನ್ ಭೇಟಿಯಾಗಿ ಗಡಿ ಉತ್ಸವದ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಸಾಹಿತ್ಯ ಭವನಕ್ಕೆ ಅನುದಾನ ಕೋರಿದಾಗ ರೂ. ಹತ್ತು ಲಕ್ಷ ಭವನ ನಿರ್ಮಾಣಕ್ಕೆ ನೀಡುವುದಾಗಿ ಭರವಸೆ ನೀಡಿದರು. ಸದ್ಯದಲ್ಲೇ ಕೊಡಗು ಜಿಲ್ಲೆಗೆ ಪ್ರವಾಸ ಬರಲಿದ್ದು ಮಡಿಕೇರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕನ್ನಡ ಭವನವನ್ನು ಪರಿಶೀಲಿಸುವದಲ್ಲದೆ, ಮುಂದಿನ ತಿಂಗಳುಗಳಲ್ಲಿ ಜಿಲ್ಲಾ ಗಡಿ ಉತ್ಸವಕ್ಕೆ ಅನುದಾನ ನೀಡುವುದಾಗಿ ತಿಳಿಸಿದರು.