ವೀರಾಜಪೇಟೆ, ಏ. ೨೨: ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಮೇರಿ ಗ್ರಾಮದ ಪನ್ನಂಗಾಲತಮ್ಮೆ ದೇವಾಲಯದ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಲಕ್ಷಾಂತರ ರೂ ನಷ್ಟ ಉಂಟಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಬಾಚಿರ ಉತ್ತಯ್ಯ ತಿಳಿಸಿದ್ದಾರೆ.

ಗುರುವಾರ ಪೂರ್ವಾಹ್ನ ೯ ಗಂಟೆಗೆ ಮರ ಬುಡ ಸಹಿತ ಉರುಳಿ ದೇವಾಲಯ ಮೇಲೆ ಬಿದ್ದಿದೆ. ಮರದಲ್ಲಿ ಕೋತಿಗಳು ಜಿಗಿದಾಡುತ್ತಿದ್ದವು. ಅದನ್ನು ವೀಕ್ಷಿಸುತ್ತಿದ್ದ ಸಂದರ್ಭ ಮರ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

(ಮೊದಲ ಪುಟದಿಂದ) ಕಳೆದ ಒಂದು ತಿಂಗಳ ಹಿಂದೆ ದೇವಾಲಯವನ್ನು ಅಂದಾಜು ೩ ಲಕ್ಷದಲ್ಲಿ ನವೀಕರಿಸಿ ತಾ. ೧೨ ಮತ್ತು ೧೩ ರಂದು ವಾರ್ಷಿಕ ಹಬ್ಬ ನಡೆಸಲಾಗಿತ್ತು. ಘಟನಾ ಸ್ಥಳಕ್ಕೆ ಅರಣ್ಯ ಇಲಾಖಾ ಅಧಿಕಾರಿಗಳು, ತಾಲೂಕು ಗ್ರೇಡ್ ೨ ತಹಶೀಲ್ದಾರ್ ಪ್ರದೀಪ್ ಕುಮಾರ್, ಶಿರಸ್ತೆದಾರ್ ಪೊನ್ನು ಆರ್. ಐ ಹರೀಶ್ ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದರು.