ಶ್ರೀಮಂಗಲ, ಏ. ೨೨: ಕಾಫಿ ವ್ಯಾಪಾರಿಯ ಮಳಿಗೆಗೆ ನುಗ್ಗಿ ಡ್ರಾಯರ್ ಮುರಿದು, ಡ್ರಾಯರ್‌ನಲ್ಲಿ ಇರಿಸಿದ್ದ ರೂ.೩೦ ಸಾವಿರ ಕಳವು ಮಾಡಿರುವ ಪ್ರಕರಣ ಹುದಿಕೇರಿಯಲ್ಲಿ ಹಾಡಹಗಲೇ ನಡೆದಿದೆ.
ಹುದಿಕೇರಿಯ ಮುಖ್ಯ ರಸ್ತೆಯಲ್ಲಿರುವ ಬೊಜ್ಜಂಗಡ ಸೋನಿ ಅವರ ಕಾಫಿ, ಕಾಳುಮೆಣಸು, ಅಡಿಕೆ ವ್ಯಾಪಾರ ಮಳಿಗೆಯಲ್ಲಿ ಮಧ್ಯಾಹ್ನ ೩ ಗಂಟೆ ವೇಳೆಯಲ್ಲಿ ಕಳವು ನಡೆದಿದೆ. ವ್ಯಾಪಾರಿ ಸೋನಿ ಅವರು ಮಳಿಗೆ ಬಿಟ್ಟು ಸಮೀಪದ ಗ್ರಾಮ ಹೈಸೊಡ್ಲೂರುವಿನಲ್ಲಿರುವ ತಮ್ಮ ಮನೆಗೆ ತೆರಳಿದ್ದರು. ಈ ಸಂದರ್ಭ ಡ್ರಾಯರ್ ಲಾಕ್ ಮಾಡಿದ್ದರು. ಸ್ವಲ್ಪ ಹೊತ್ತಿನಲ್ಲಿ ಹಿಂತಿರುಗಿ ಬಂದು ನೋಡಿದಾಗ ಡ್ರಾಯರ್ ಮುರಿದು ಹಣ ಕಳವಾಗಿರುವುದು ಗೊತ್ತಾಗಿದೆ.
ಸಿ.ಸಿ.ಕ್ಯಾಮೆರಾದಲ್ಲಿ ಅಪರಿಚಿತ ಇಬ್ಬರು ಮಳಿಗೆಗೆ ನುಗ್ಗಿದ್ದು, ಒಬ್ಬ ಮಳಿಗೆಯ ಹೊರಗೆ ನಿಂತು ಯಾರಾದರೂ ಬರುವುದನ್ನು ನೋಡಿಕೊಳ್ಳುತ್ತಿರುವುದು, ಮತ್ತೊಬ್ಬ ಮಳಿಗೆ ಒಳಗೆ ನುಗ್ಗಿ ಕೆಲವು ನಿಮಿಷದಲ್ಲಿ ಹೊರಬಂದು ಇಬ್ಬರು ಅಲ್ಲಿಂದ ತೆರಳಿರುವುದು ಸೆರೆಯಾಗಿದೆ. ಡ್ರಾಯರ್‌ನಲ್ಲಿದ್ದ ರೂ.೩೦ ಸಾವಿರದ ಕಟ್ಟಿನ ಹಣ ಕಳವು ಮಾಡಿ, ಉಳಿದ ಸ್ವಲ್ಪ ಚಿಲ್ಲರೆ ಹಣ ಅಲ್ಲಿಯೇ ಬಿಟ್ಟಿದ್ದಾರೆ.
ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ಮಾಡಿದರು.