ರೈತರಿಗೆ ಸ್ವಯಂ ಸರ್ವೆಗೆ ಅವಕಾಶ, ಆಸ್ತಿ ನೋಂದಣಿಗೆ ಶೇ. ೧೦ರಷ್ಟು ರಿಯಾಯಿತಿ

ಬೆಂಗಳೂರು, ಏ. ೨೧: ಆಡಳಿತದಲ್ಲಿ ಸುಧಾರಣೆ ತಂದು ನಾಗರಿಕರಿಗೆ ತಮ್ಮ ಹಕ್ಕುಗಾರಿಕೆ ಮೇಲೆ ನಿಯಂತ್ರಣ ಸಾಧಿಸಲು ಅವಶ್ಯಕ ಬದಲಾವಣೆಯನ್ನು ಮಾಡಿ ಸಶಕ್ತಗೊಳಿಸುವುದು ಸರ್ಕಾರದ ಆಡಳಿತ ಸುಧಾರಣೆಯ ಉದ್ದೇಶ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಗುರುವಾರ ಹೇಳಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ್, ಸಾರ್ವಜನಿಕರಿಗೆ ಸ್ವಯಂ ಸೇವೆಯ ಮುಖಾಂತರ ಸರ್ಕಾರದ ಸೇವಾ ಸೌಲಭ್ಯವನ್ನು ಪಡೆಯಲು ವ್ಯವಸ್ಥೆ ಸೃಷ್ಟಿಸುವುದು ಸರ್ಕಾರದ ಆದ್ಯತೆಯಾಗಿದೆ. ಕಂದಾಯ ಇಲಾಖೆಗೆ ಸಂಬAಧಪಟ್ಟAತೆ ನಾಗರಿಕರು ೧) ೧೧ಇ ಸ್ಕೆಚ್, ೨) ತತ್ಕಾಲ್ ಪೋಡಿ, ೩) ವಿಭಾಗ- ಹಾಲಿ ಹೊಂದಿರುವ ಕೃಷಿ ಜಮೀನಿನಲ್ಲಿ ತಮ್ಮ ಶಾಸನಾತ್ಮಕ ಹಕ್ಕಿನಂತೆ ವೈಯಕ್ತಿಕ ಭಾಗಾಂಶವನ್ನು ತೋರಿಸುವ ಸಂಬAಧ ಸ್ಕೆಚ್, ೪) ಭೂಪರಿವರ್ತನಾ ಪೂರ್ವ ಸ್ಕೆಚ್ ಗಳಿಗಾಗಿ ಭೂಮಾಪನ ಇಲಾಖೆಗೆ ಅವರ ಸ್ವಂತ ಜಮೀನಿನ ನಕ್ಷೆಗಾಗಿ ಅರ್ಜಿ ಸಲ್ಲಿಸುತ್ತಾರೆ. ಪ್ರಸ್ತುತ ಜನರಿಗೆ ತಮ್ಮ ಸ್ವಂತ ಖಾಸಗಿ ಜಮೀನುಗಳಲ್ಲಿ ಮೇಲ್ಕಂಡ ಸ್ಕೆಚ್‌ಗಳಿಗಾಗಿ ಸಲ್ಲಿಸುವ ಅರ್ಜಿಗಳನ್ನು ಸರ್ಕಾರಿ ಭೂಮಾಪಕರು ಅಥವಾ ಪರವಾನಗಿ ಭೂ ಮಾಪಕರುಗಳಿಂದ ಸಿದ್ಧಪಡಿಸಲಾಗುತ್ತದೆ. ಸರ್ಕಾರಿ ಭೂಮಾಪಕರು ಮತ್ತು ಪರವಾನಗಿ ಭೂಮಾಪಕರ ಸಂಖ್ಯೆಯು ಸೀಮಿತವಾಗಿದ್ದು, ಪ್ರತಿ ತಿಂಗಳು ಒಂದು ಲಕ್ಷಕ್ಕಿಂತ ಹೆಚ್ಚಿನ ಅರ್ಜಿಗಳು ನಾಗರಿಕರಿಂದ ಸ್ವೀಕೃತವಾಗುತ್ತವೆ. ಇದರೊಂದಿಗೆ ಹೆಚ್ಚುವರಿಯಾಗಿ ಆರು ಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಅಳತೆಗಾಗಿ ವಿವಿಧ ಹಂತಗಳಲ್ಲಿ ಬಾಕಿ ಇರುತ್ತವೆ. ಇದರಿಂದಾಗಿ ನಾಗರಿಕರು ತಮ್ಮ ಸ್ವಂತ ಜಮೀನಿನಲ್ಲಿ ಯಾವುದೇ ರೀತಿಯ ಕ್ರಯ ಮತ್ತು ವಿಭಾಗ ಮಾಡಿಸಿಕೊಳ್ಳಲು ಅಗತ್ಯವಿರುವ ಸ್ಕೆಚ್‌ಗಾಗಿ ಹಲವಾರು ತಿಂಗಳುಗಳು ಮತ್ತು ಕೆಲವೊಮ್ಮೆ ವರ್ಷದವರೆಗೆ ಕಾಯಬೇಕಾಗುತ್ತದೆ. ಇದೆಲ್ಲ ಸಮಸ್ಯೆಗೆ ಪರಿಹಾರ ನೀಡಲು ನಾಗರಿಕರೇ ತಮ್ಮ ಜಮೀನಿಗೆ ಸ್ವಂತ ನಕ್ಷೆ ಮಾಡಿಕೊಳ್ಳಲು ಕಂದಾಯ ಇಲಾಖೆ ಯೋಜನೆಯೊಂದನ್ನು ರೂಪಿಸಿದೆ. ೧೧ಇ ಸ್ಕೆಚ್, ತತ್ಕಾಲ ಪೋಡಿ ಇವುಗಳನ್ನು ಜನರು ಸ್ವಂತ ಜಮೀನಿಗೆ ತಾವೇ ಮಾಡಿಕೊಳ್ಳಲು ಅವಕಾಶ ನೀಡುತ್ತಿದ್ದೇವೆ. ಇದರಿಂದ ಸರ್ವೇ ವಿಳಂಬವಾಗಿ, ಸಾರ್ವಜನಿಕರಿಗೆ ಆಗುತ್ತಿದ್ದ ಸಮಸ್ಯೆ ಬಗೆಹರಿ ಯುತ್ತದೆ ಎಂದು ಅಶೋಕ್ ಅವರು ತಿಳಿಸಿದ್ದಾರೆ. ವಿವಿಧ ಸ್ಥಿರಾಸ್ತಿಗಳ ಮಾರಾಟ ಮತ್ತು ಖರೀದಿ ಮಾಡುವವರಿಗೆ ನೀಡಲಾಗಿದ್ದ ನೋಂದಣಿ ಹಾಗೂ ಮುದ್ರಾಂಕ ಶುಲ್ಕ ರಿಯಾಯಿತಿ ಮುಂದುವರಿಕೆಯಾಗಿದ್ದು, ಶೇ. ೧೦ ರಷ್ಟು ರಿಯಾಯತಿ ಮುಂದುವರೆಸುವುದಾಗಿ ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಜನವರಿ ೧, ೨೦೨೨ ರಿಂದ ಮಾರ್ಚ್ ೩೧, ೨೦೨೨ ರವರೆಗೆ ಮಾರ್ಗಸೂಚಿ ದರದಲ್ಲಿ ಶೇ. ೧೦ರಷ್ಟು ರಿಯಾಯತಿ ನೀಡಲಾಗಿತ್ತು. ಈ ರಿಯಾಯಿತಿ ಮುಂದುವರಿಸುವAತೆ ಜನರಿಂದ ಬೇಡಿಕೆ ಬಂದಿದ್ದರಿAದ ಮುಂದಿನ ಮೂರು ತಿಂಗಳು ಏಪ್ರಿಲ್ ೨೫, ೨೦೨೨ ರಿಂದ ಜುಲೈ ೨೪, ೨೦೨೨ರವರೆಗೆ ಗೈಡ್‌ಲೈನ್ಸ್ ವ್ಯಾಲ್ಯೂ ನಲ್ಲಿ ಶೇ. ೧೦ರಷ್ಟು ರಿಯಾಯಿತಿ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಸ್ಟಾಂಪ್ ರಿಜಿಸ್ಟೆçÃಷನ್ ದರ ಕಡಿಮೆ ಮಾಡಿದ್ದೆವು. ಶೇ. ೧೦ ರಷ್ಟು ಕಡಿಮೆ ಮಾಡಿದ ಕಾರಣ ಹೆಚ್ಚಿನ ನೋಂದಣಿಗಳಾಗಿವೆ. ಸರ್ಕಾರಕ್ಕೂ ಆದಾಯ ಬಂದಿದೆ. ಜನರಿಗೂ ಅನುಕೂಲವಾಗಿದೆ. ಹಾಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಎಲ್ಲ ರೀತಿಯ ಸ್ವತ್ತುಗಳ ಮಾರಾಟ ಮತ್ತು ಖರೀದಿಗೆ ಇದು ಅನ್ವಯಿಸುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚೆ ಮಾಡಿ ಆದೇಶ ಮಾಡುತ್ತಿದ್ದೇನೆ ಎಂದು ಸಚಿವರು ಹೇಳಿದ್ದಾರೆ.

ಒಮಿಕ್ರಾನ್ ಉಪ ವೆರಿಯಂಟ್ ಬಿಎ.೨.೧೨ ಪತ್ತೆ

ನವದೆಹಲಿ, ಏ. ೨೧: ಕಳೆದ ಹದಿನೈದು ದಿನಗಳಲ್ಲಿ ದೆಹಲಿಯಲ್ಲಿ ಸಂಗ್ರಹಿಸಲಾದ ಬಹುತೇಕ ಸ್ಯಾಂಪಲ್‌ಗಳಲ್ಲಿ ಒಮಿಕ್ರಾನ್ ಉಪ ವೆರಿಯಂಟ್ ಬಿಎ .೨.೧೨ ಪತ್ತೆಯಾಗಿದೆ. ನಗರದಲ್ಲಿ ಇತ್ತೀಚಿಗೆ ಹೆಚ್ಚಾಗಿರುವ ಕೋವಿಡ್-೧೯ ಸೋಂಕಿನ ಹಿಂದಿರುವ ಕಾರಣವೂ ಇದೆ ಎಂದು ಮೂಲಗಳು ಗುರುವಾರ ತಿಳಿಸಿವೆ. ದೆಹಲಿಯಲ್ಲಿ ಕೆಲ ಮಾದರಿಗಳಲ್ಲಿ ಪತ್ತೆಯಾಗಿರುವ ಬಿಎ. ೨.೧೨.೧ ಓಮಿಕ್ರಾನ್ ವೆರಿಯಂಟ್ ಇತ್ತೀಚೆಗೆ ಅಮೇರಿಕಾದಲ್ಲಿ ಸೋಂಕು ಹೆಚ್ಚಾಗುವಲ್ಲಿಯೂ ಕಾರಣವಾಗುತ್ತಿದೆ ಎಂದು ಐಎನ್ ಎಸ್ ಎಸಿಒಜಿ ಮೂಲಗಳು ಹೇಳಿವೆ. ಆದರೆ, ದೆಹಲಿಯಲ್ಲಿ ಕೆಲ ಸ್ಯಾಂಪಲ್‌ಗಳಲ್ಲಿ ಇದು ಪತ್ತೆಯಾಗಿದೆ ಎಂಬುದು ಅಧಿಕೃತ ಮೂಲಗಳಿಂದ ತಿಳಿದುಬಂದಿಲ್ಲ. ಹೊಸ ಉಪ ವೆರಿಯಂಟ್ ಬಿಎ.೨.೧೨ (ಶೇ. ೫೨ ರಷ್ಟು ಸ್ಯಾಂಪಲ್) ಮತ್ತು ಬಿಎ. ೨.೧೦ (ಶೇ. ೧೧ ರಷ್ಟು ಸ್ಯಾಂಪಲ್‌ಗಳು) ಹೆಚ್ಚಿನ ಪ್ರಸರಣವನ್ನು ತೋರಿಸುತ್ತಿವೆ. ಇತ್ತೀಚಿಗೆ ದೆಹಲಿಯಲ್ಲಿನ ಒಟ್ಟಾರೇ ಸ್ಯಾಂಪಲ್ ಗಳಲ್ಲಿ ಸುಮಾರು ಶೇ. ೬೦ ರಷ್ಟು ಪತ್ತೆಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಬಿಎ. ೨.೧೨ ವೆರಿಯಂಟ್ ಪ್ರತಿ ವಾರ ಶೇ. ೩೦ ರಿಂದ ಶೇ. ೯೦ ರಷ್ಟು ಹೆಚ್ಚಾಗುತ್ತಿದೆ. ಕಳೆದ ಹದಿನೈದು ದಿನಗಳಲ್ಲಿ ದೆಹಲಿಯಲ್ಲಿ ಸುಮಾರು ೩೦೦ ಸ್ಯಾಂಪಲ್‌ಗಳು ಜಿನೋಮ್ ಸಿಕ್ವೇನ್ಸ್ ಹೊಂದಿರುವುದಾಗಿ ಮೂಲಗಳು ಹೇಳಿವೆ. ಉತ್ತರ ಪ್ರದೇಶ ಮತ್ತು ಹರಿಯಾಣ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಇದೇ ರೀತಿಯ ಉಪ ವೆರಿಯಂಟ್ ಹೆಚ್ಚಿಗೆ ಅಥವಾ ಕಡಿಮೆ ಪ್ರಮಾಣದಲ್ಲಿ ಸ್ಯಾಂಪಲ್‌ಗಳಲ್ಲಿ ಪತ್ತೆಯಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹುಬ್ಬಳ್ಳಿ ಗಲಭೆ: ಮೌಲ್ವಿ ವಾಸೀಂ ಪಠಾಣ್ ಬಂಧನ

ಹುಬ್ಬಳ್ಳಿ, ಏ. ೨೧: ಕಳೆದ ಶನಿವಾರ ರಾತ್ರಿ ಹಳೆ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದ ಪ್ರಮುಖ ರೂವಾರಿ ಎಂದೇ ಹೇಳಲಾಗುತ್ತಿರುವ ತಲೆಮರೆಸಿಕೊಂಡಿದ್ದ ಮೌಲ್ವಿ ವಾಸೀಂ ಪಠಾಣ್‌ನನ್ನು ಹಳೆ ಹುಬ್ಬಳ್ಳಿಯ ಪೊಲೀಸರು ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. ಗಲಭೆ ಪ್ರಕರಣದ ಮಾಸ್ಟರ್ ಮೈಂಡ್ ಎಂದೇ ಬಿಂಬಿತವಾಗಿದ್ದ ವಾಸೀಂ ಪಠಾಣ್ ಬೆಂಗಳೂರು, ಬೆಳಗಾವಿ, ಮುಂಬೈ ಸೇರಿದಂತೆ ಹುಬ್ಬಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ ಎಂದು ಹೇಳಲಾಗುತ್ತಿದೆ. ಸದ್ಯ ಪೊಲೀಸ್ ಅಧಿಕಾರಿ ಅಲ್ತಾಪ್ ಮುಲ್ಲಾ ನೇತೃತ್ವದ ತಂಡ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಇಂದು ಬೆಳಗ್ಗೆಯಷ್ಟೇ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದ ವಾಸೀಂ ಪಠಾಣ್, ಘಟನೆಗೆ ನಾನು ಕಾರಣನಲ್ಲ. ನನ್ನ ಮೇಲೆ ವ್ಯವಸ್ಥಿತ ಪಿತೂರಿ ನಡೆದಿದೆ. ನಾನು ಘಟನೆಯ ಮಾಸ್ಟರ್ ಮೈಂಡ್ ಅಲ್ಲ. ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ಹುಬ್ಬಳ್ಳಿಯ ವಾತಾವರಣ ಹದಗೆಡಿಸುವ ಉದ್ದೇಶ ನನ್ನದಾಗಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದಿದ್ದಾರೆ. ನಮ್ಮ ಧರ್ಮಕ್ಕೆ ಅಪಮಾನ ಮಾಡಿದ ಬಗ್ಗೆ ಮುಸ್ಲಿಂ ಯುವಕರಲ್ಲಿ ಅಸಮಾಧಾನ ಇತ್ತು. ಈ ಕುರಿತು ದೂರು ನೀಡಲು ಹಲವಾರು ಯುವಕರು ಅಲ್ಲಿ ಜಮಾಯಿಸಿದ್ದರು. ಅವರೊಂದಿಗೆ ಮಾತನಾಡಲು ನನ್ನನ್ನು ಕರೆಸಿದ್ದರು. ಪೊಲೀಸರ ಜೊತೆಗೆ ಮಾತನಾಡಿದೆ. ಪೊಲೀಸರು ಸಹಕಾರ ಕೊಟ್ಟಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಪೊಲೀಸರೇ ಜೀಪ್ ಹತ್ತಿ ಜನರಿಗೆ ತಿಳಿ ಹೇಳಲು ಹೇಳಿದರು. ನಾನು ವಾಹನದ ಮೇಲೆ ಹತ್ತಿದಾಗ ಅಲ್ಲಿ ಮೈಕ್ ಇರಲಿಲ್ಲ. ಹೀಗಾಗಿ ಕೈ ಸನ್ನೆ ಮಾಡುವ ಮೂಲಕ ಶಾಂತಿ ಕಾಪಾಡಲು ಹೇಳಿದೆ ಎಂದು ಇಂದು ಬಿಡುಗಡೆ ಮಾಡಿದ ವೀಡಿಯೋದಲ್ಲಿ ಹೇಳಿದ್ದಾರೆ.

ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ: ಗನ್‌ಮ್ಯಾನ್ ಬಂಧನ

ಬೆAಗಳೂರು, ಏ. ೨೧: ೫೪೫ ಪೊಲೀಸ್ ಸಬ್‌ಇನ್ಸ್ಪೆಕ್ಟರ್‌ಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆ ನಡೆಸುತ್ತಿರುವ ಅಪರಾಧ ತನಿಖಾ ವಿಭಾಗದ (ಸಿಐಡಿ) ಪೊಲೀಸರು ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಶಾಸಕರೊಬ್ಬರ ಗನ್ ಮ್ಯಾನ್ ನನ್ನು ಬಂಧಿಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಗುರುವಾರ ಮಾಹಿತಿ ನೀಡಿದ್ದಾರೆ. ಸಿಐಡಿ ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ಅಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ತಪ್ಪಿತಸ್ಥರನ್ನು ಬಂಧಿಸಿ, ಕಾನೂನಿನ ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಗೃಹ ಸಚಿವರು ಹೇಳಿದ್ದಾರೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದರೂ ಹುದ್ದೆಯಿಂದ ವಂಚಿತರಾದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಸಿಐಡಿ ತನಿಖೆಗೆ ಆದೇಶಿಸಲಾಗಿದೆ. ತನಿಖೆಯು ನಿಷ್ಪಕ್ಷಪಾತವಾಗಿ ನಡೆಯುತ್ತಿದ್ದು, ಅಕ್ರಮದಲ್ಲಿ ಭಾಗಿಯಾದವರು ಎಷ್ಟೇ ದೊಡ್ಡವರಾದರೂ ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಆರಗ ಜ್ಞಾನೇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ಸಿಐಡಿ ಪೊಲೀಸರು ಇದುವರೆಗೆ ೯ ಮಂದಿಯನ್ನು ಬಂಧಿಸಿದ್ದು, ಈ ೯ ಮಂದಿ ಹಗರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗುತ್ತಿದೆ.