ಸೋಮವಾರಪೇಟೆ, ಏ.೨೧: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು, ಐಗೂರು, ಕೋವರ್‌ಕೊಲ್ಲಿ, ಯಡವಾರೆ, ಸಜ್ಜಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಅರಣ್ಯ ಇಲಾಖೆಯವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹಗಲಿನಲ್ಲಿಯೇ ಕಾಡಾನೆಗಳು ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದು, ವಾಹನ ಸವಾರರು ಹಾಗೂ ಕಾರ್ಮಿಕರು ಭಯದಲ್ಲಿಯೇ ಸಂಚರಿಸುವAತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಟಾಟಾ ಕಾಫಿ ಸಂಸ್ಥೆಗೆ ಸೇರಿದ ಕಾಫಿ ತೋಟದಲ್ಲಿ ಹೆಚ್ಚಿನ ಹಾನಿಮಾಡಿದ್ದು, ತೋಟಕ್ಕೆ ಹೊಂದಿಕೊAಡAತಿರುವ ಗೇಟ್‌ಗಳನ್ನು ಸಂಪೂರ್ಣ ಹಾನಿಗೊಳಿಸಿದೆ. ಅರಣ್ಯಕ್ಕೆ ಟ್ರಂಚ್ ಮತ್ತು ಸೋಲಾರ್ ಬೇಲಿಯನ್ನು ಅಳವಡಿಸಲಾಗಿದೆ. ಆದರೂ ಆನೆಗಳು ಎಗ್ಗಿಲ್ಲದೆ ಸಂಚರಿಸುತ್ತಿವೆ. ಕಾಫಿ ತೋಟ, ಕೃಷಿ ಜಮೀನಿಗೆ ಧಾಳಿ ಇಡುತ್ತಿರುವ ಆನೆಗಳು ಸಾಕಷ್ಟು ನಷ್ಟಪಡಿಸುತ್ತಿವೆ ಎಂದು ಕೃಷಿಕರಾದ ಎಸ್.ಎಲ್. ರಮೇಶ್ ದೂರಿದ್ದಾರೆ.

ಕಾಫಿ ತೋಟಗಳಲ್ಲಿ ಹಗಲು ರಾತ್ರಿಯೆನ್ನದೆ ೪ ಕಾಡಾನೆಗಳು ಸಂಚರಿಸುತ್ತಿದ್ದು, ತೋಟದಲ್ಲಿ ಕಾರ್ಮಿಕರು ಕೆಲಸ ಮಾಡಲು ಹೆದರುವಂತಹ ಪರಿಸ್ಥಿತಿ ಇದೆ. ಈಗಾಗಲೇ ಕಾಡಾನೆಗಳ ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್‌ಗಳನ್ನು ಕಾಡಿನಲ್ಲಿ ಅಳವಡಿಸುವ ಕೆಲಸ ಪ್ರಾರಂಭವಾಗಿದೆ. ಆದರೆ, ಆನೆಗಳು ಸಂಚರಿಸುವ ಸ್ಥಳ ಬಿಟ್ಟು ಬೇರೆಡೆಗಳಲ್ಲಿ ಅಳವಡಿಸುತ್ತಿದ್ದಾರೆ ಎಂದು ಟಾಟಾ ಕಾಫಿ ಸಂಸ್ಥೆಯ ಮಹೇಶ್ ಆರೋಪಿಸಿದ್ದಾರೆ.

ಜನವಸತಿ ಹಾಗೂ ಕೃಷಿ ಪ್ರದೇಶಗಳಲ್ಲಿ ಹಾನಿ ಮಾಡುತ್ತಿರುವ ಕಾಡಾನೆಗಳನ್ನು ದೂರದ ಅರಣ್ಯಕ್ಕೆ ಅಟ್ಟುವ ಕಾರ್ಯವನ್ನು ಅರಣ್ಯ ಇಲಾಖೆ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.