ನಮ್ಮನ್ನೆಲ್ಲಾ ಹೊತ್ತು ನಿಂತು ಸಲಹುತ್ತಿರುವ ಭೂಮಿ ತಾಯಿಯೇ ನಿನಗೆ ನಮ್ಮ ನಮನ.
ನೈಸರ್ಗಿಕ ಸಂಪತ್ತುಗಳಾದ ಗಾಳಿ, ನೀರು, ಆಹಾರ, ಭೂಮಿಯನ್ನು ನಾವು ದಿನೇ ದಿನೇ ಹಾಳುಮಾಡುತ್ತಿರುವುದರಿಂದಾಗಿ ಪ್ರಕೃತಿ ನಮಗೆ ಈ ಹಿಂದೆ ಒಳ್ಳೆಯ ಪಾಠವನ್ನೇ ಕಲಿಸಿದೆ.
ಅಂದರೆ ಮಾರಕವಾದ ಪ್ಲಾಸ್ಟಿಕ್‌ಗಳನ್ನು ನನ್ನ ಮೇಲೆ ಸುರಿದು ಸುರಿದು ನನ್ನನ್ನು ಬೆತ್ತಲೆ ಮಾಡುತ್ತಿರುವ ಮನುಜನೇ ನಿನ್ನನ್ನು ನಾನಿನ್ನು ಸಹಿಸಲಾರೆ ಎಂದು ಮುನಿದ ಹೊತ್ತಿಗೆ ಕೊರೊನಾ ಎಂಬ ಮಾರಕ ರೋಗ ಮನುಷ್ಯರನ್ನಾವರಿಸಿತು.
ಆವಾಗ ಭೂಮಿಗೆ ಮನಬಂದAತೆ ಅವ್ಯಾಹತವಾಗಿ ಪ್ಲಾಸ್ಟಿಕ್ ಎಸೆದು ಹೊದಿಕೆಯಾಗಿಸಿದ್ದ ಮನುಷ್ಯನನ್ನು ಕೊರೊನಾ ಎಂಬ ಮಾರಣಾಂತಿಕ ರೋಗ ಆತನನ್ನು ಕೂಡ ಪ್ಲಾಸ್ಟಿಕ್ ಹೊದಿಕೆಯಿಂದಲೇ ತನ್ನೊಳಗೆ ಲೀನವಾಗಿಸಿಕೊಂಡಿತ್ತು.
ಅAದರೆ ಮಾಡಿದ್ದುಣ್ಣೋ ಮಹರಾಯ ಎಂಬAತೆ ನಾವು ಭೂಮಿಗೆ ಮಾಡಿದ ಕಳಂಕಕ್ಕೆ ಕೊನೆಗೆ ನಾವುಗಳೇ ಗುರಿಯಾದೆವು ಅಷ್ಟೆ.
ಇರುವುದೊಂದೇ ಭೂಮಿ. ಹಾಗಾಗಿ ಅದನ್ನು ನಾವು ಜತನದಿಂದ ಹಾಗೂ ಜೋಪಾನದಿಂದ ಸಂರಕ್ಷಿಸಿಕೊಳ್ಳದಿದ್ದರೆ ಭೂಮಿಯ ಮೇಲಿನ ಕೋಟ್ಯಾನುಕೋಟಿ ಜೀವಿಗಳ ಸ್ಥಿತಿ ಏನಾದೀತು....?
ಕಾಲ ಬದಲಾಗುತ್ತಿದ್ದಂತೆಯೇ ಜನರ ‘ಮನ' ಸ್ಥಿತಿ ಹಾಗೂ ‘ಮನಿ' ಸ್ಥಿತಿಗಳು ಬದಲಾಗುತ್ತಿವೆ.
ಅಂದರೆ ಬುದ್ಧಿಜೀವಿ ಮಾನವ ತನ್ನ ಇರುವಿಕೆಗಾಗಿ ಹಾಗೂ ತಾನು ಐಷಾರಾಮಿಯಾಗಿ ಬದುಕುವ ಭರದಲ್ಲಿ ಭೂಮಿಯನ್ನು ಮನಸೋ ಇಚ್ಛೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನಾ....?
ಹೌದು ಹೌದು ಎನ್ನುತ್ತವೆ ವರದಿಗಳು.
ಇಡೀ ಭೂಮಂಡಲ ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್ ಹೊದಿಕೆಗಳಿಂದ ತುಂಬಿ ಹೋಗುತ್ತಿದೆ.
ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿನ ರಸ್ತೆ, ಚರಂಡಿ ಬದಿಗಳಲ್ಲಿ ಎಲ್ಲಿ ನೋಡಿದರೂ ಕೂಡ ಪ್ಲಾಸ್ಟಿಕ್‌ಗಳು ರಾರಾಜಿಸುತ್ತಿವೆ.
ಇನ್ನೂ ಹಳ್ಳಿಗಳಿಗೂ ಈ ಪ್ಲಾಸ್ಟಿಕ್ ಪೆಡಂಭೂತ ಕಾಲಿರಿಸಿ ದಶಕಗಳೇ ಕಳೆದಿವೆ.
ಇತ್ತೀಚಿನ ವರ್ಷಗಳಲ್ಲಿನ ಆಧುನಿಕ ಕೃಷಿ ಪದ್ಧತಿಗಳು ಕೂಡ ಭೂಮಿಯನ್ನು ಪ್ಲಾಸ್ಟಿಕ್ ಹೊದಿಕೆಗಳಿಂದ ದಿನೇ ದಿನೇ ಕೃಷವಾಗಿಸುತ್ತಿವೆ.
ರೈತರು ಬೆಳೆ ಬೆಳೆಯೋ ಆತುರದಲ್ಲಿ ಮಣ್ಣಿಗೆ ವಿಷಕಾರಿ ಅಂಶಗಳನ್ನು ಸುರಿಯದೇ ಯಾವ ಮಣ್ಣಿನಲ್ಲಿ ನಾವು ದವಸ ಧಾನ್ಯಗಳನ್ನು ಬೆಳೆದು ಉಪಯೋಗಿಸುವ ಮೂಲಕ ದೇಹದ ಆರೋಗ್ಯವನ್ನು ಸದೃಢಗೊಳಿಸಿಕೊಂಡಿದ್ದೆವೋ....ಯಾವ ಮಣ್ಣನ್ನು ನಂಬಿ ಹಿಂದಿನವರು ನಿರೋಗಿಗಳಾಗಿ ಹಾಗೂ ಶತಾಯುಷಿಗಳಾಗಿ ಬದುಕು ಕಟ್ಟಿದ್ದರೋ ಆ ಮಣ್ಣು, ಗಾಳಿ ಅಷ್ಟೇ ಏಕೆ ನೀರು ಇಂದು ವಿಷಮಯವಾಗಿದೆ.
ಕೃಷಿಕ ಯಾವ ಬೆಳೆ ಬೆಳೆಯ ಹೊರಟರೂ ಕೂಡ ಬೆಳೆಯುವ ಪೂರ್ವದಲ್ಲಿ ಭೂಮಿಯನ್ನು ಉಳುಮೆ ಮಾಡಿ ಹದಗೊಳಿಸಲು ಹಾಗೂ ಬಿತ್ತನೆ ರಸಗೊಬ್ಬರಗಳನ್ನು ಅಳವಡಿಸಲು ಖರ್ಚು ಮಾಡುವ ಹಣದಷ್ಟೇ ಬೆಳೆಗಳನ್ನು ಕಾಡುವ ಕಳೆ ನಿಯಂತ್ರಿಸಲು ಕಳೆನಾಶಕ ಖರೀದಿಗೆ ಹಣ ಸುರಿಯಬೇಕಾಗಿದೆ.
ಹಾಗಾಗಿ ಹಲವು ರೈತರು ಭೂಮಿಯಲ್ಲಿ ತಾವು ಕೈಗೊಳ್ಳುತ್ತಿರುವ ಬೆಳೆಗಳಾದ ಬಾಳೆ, ಕಲ್ಲಂಗಡಿ ಮೊದಲಾದ ತರಕಾರಿ ಕಾಯಿ ಪಲ್ಯೆಗಳನ್ನು ಬೆಳೆಯುವ ಸಲುವಾಗಿ ಭೂಮಿಗೆ ಮಾರಕವಾದ ಪ್ಲಾಸ್ಟಿಕ್‌ಗಳನ್ನು ಯಥೇಚ್ಛವಾಗಿ ಬಳಸುತ್ತಿದ್ದಾನೆ.
ಎಲ್ಲೆಲ್ಲೂ ಮತ್ತು ಎಲ್ಲವೂ ಪ್ಲಾಸ್ಟಿಕ್ ಮಯ :
ಮನುಷ್ಯ ತನ್ನ ಪ್ರತಿದಿನದ ದಿನಚರಿಯಲ್ಲಿ ಈ ಭೂಮಿಯನ್ನು ಹಾನಿ ಮಾಡುತ್ತಿರುವ ಮಾರಣಾಂತಿಕ ಪ್ಲಾಸ್ಟಿಕ್ ಲಗ್ಗೆ ಇಟ್ಟಿದೆ. ಅಂದರೆ ಮನೆಗೆ ತರಕಾರಿ ಕಾಯಿ ಪಲ್ಲೆಗಳನ್ನು ಒಯ್ಯಲು, ಮನೆಯ ಅಡುಗೆ ಮನೆಗೆ ಹಾಲು, ಅಡುಗೆ ಎಣ್ಣೆ ಹಾಗೂ ದಿನಸಿ ಸಾಮಾನುಗಳಲ್ಲಿ ಈ ಪ್ಲಾಸ್ಟಿಕ್ ಅಡಗಿದೆ.
ಕುಡಿಯುವ ನೀರಿನ ಬಾಟಲಿಗಳಿಂದ, ಪುಟ್ಟ ಹಸುಳೆ ಮಕ್ಕಳು ಕುಡಿಯುವ ಹಾಲಿನ ಬಾಟಲಿಯಲ್ಲಿ ಈ ಪ್ಲಾಸ್ಟಿಕ್ ಅಡಗಿದೆ.
ವಿಜ್ಞಾನಿಗಳ ಸಂಶೋಧನೆಗಳ ಪ್ರಕಾರ ಮನುಷ್ಯ ಪ್ಲಾಸ್ಟಿಕ್‌ಗಳನ್ನು ಹೆಚ್ಚು ಹೆಚ್ಚಾಗಿ ಬಳಸುತ್ತಿರುವ ಕಾರಣ ಮನುಷ್ಯನ ದೇಹದಲ್ಲಿ ಏನಾಗುತ್ತಿದೆ ಎಂಬುದೇ ದೊಡ್ಡ ಪ್ರಶ್ನೆ.
ಸೂಕ್ಷö್ಮ ಪ್ಲಾಸ್ಟಿಕ್ ಕಣಗಳು ದೇಹದಲ್ಲಿಯೇ ಉಳಿದುಕೊಂಡು ರಕ್ತ, ಮೆದುಳಿನ ತಡೆಗೋಡೆಗಳನ್ನು ದಾಟಿ ಅಂಗಾAಗಗಳಲ್ಲಿ ಹಾದು ಹೋಗುವ ಮೂಲಕ ದೇಹದಲ್ಲಿ ಮತ್ತಷ್ಟು ರೋಗಕಾರಕಗಳನ್ನು ಹರಡುತ್ತಿದೆ ಎಂದು ವಿಜ್ಞಾನ ಹೇಳುತ್ತದೆ.
ಹಿಮಾಲಯ ಪರ್ವತದಿಂದ ಸಮುದ್ರದ ಆಳದವರೆಗೂ ಈ ಪ್ಲಾಸ್ಟಿಕ್ ತನ್ನ ಇರುವಿಕೆ ಮೆರೆದಿದ್ದು, ನೀರು, ಗಾಳಿ ಹಾಗೂ ಆಹಾರದ ಮೂಲಕ ಪ್ಲಾಸ್ಟಿಕ್‌ನ ಸೂಕ್ಷ್ಮ ಕಣಗಳು ನಿತ್ಯವೂ ಮನುಷ್ಯನ ದೇಹ ಸೇರುತ್ತಿವೆ ಎಂಬುದು ಸಂಶೋಧನೆಗಳಿAದ ಕಂಡು ಬಂದಿದೆ.
ಅಂದರೆ ಆರೋಗ್ಯವಂತರಿAದ ಸಂಗ್ರಹಿಸಿದ ರಕ್ತದ ಮಾದರಿಯಲ್ಲಿ ಪ್ಲಾಸ್ಟಿಕ್‌ನ ಸೂಕ್ಷ್ಮ ಕಣಗಳು ಹಾಗೂ ಪಾಲಿಥಿಲೀನ್ ಟೆರೆಫ್ತಾಲೇಟ್ ಪಾಸ್ಟಿಕ್ ಕಂಡು ಬರುತ್ತಿದೆ.
ಈ ಪಾಲಿಥಿಲೀನ್ ಟೆರೆಫ್ತಾಲೇಟ್ ಅನ್ನು ಸಾಮಾನ್ಯವಾಗಿ ಕುಡಿಯುವ ನೀರಿನ ಬಾಟಲಿಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತಿದೆ.
ಆಹಾರ ಮತ್ತು ಇತರ ಉತ್ಪನ್ನಗಳ ಪ್ಯಾಕಿಂಗ್‌ನಲ್ಲೂ ಬಳಸಲಾಗುತ್ತಿದೆ.
ಮಕ್ಕಳಿಗೆ ಬಾಟಲಿಗಳಲ್ಲಿ ಹಾಲು, ನೀರು, ಟಾನಿಕ್‌ಗಳನ್ನು ಉಣಿಸುವ ಕಾರಣ ವಯಸ್ಕರಿಗಿಂತ ಮಕ್ಕಳ ಆರೋಗ್ಯದ ಮೇಲೆ ಇದು ದುಷ್ಪರಿಣಾಮ ಬೀರುತ್ತಿದೆ.
ಈ ಮೊದಲು ಹಳ್ಳಿಗಳಲ್ಲಿ ರೈತರು ಪ್ಲಾಸ್ಟಿಕ್ ಮುಕ್ತವಾಗಿ ಕೃಷಿ ಮಾಡುತ್ತಾ ಆಹಾರ ಧಾನ್ಯಗಳನ್ನು ಬೆಳೆಯುತ್ತಿದ್ದರು. ಆದರೆ ಈಗ ಅನ್ನ ಬೆಳೆವ ಮಣ್ಣಿನಿಂದ ಹಿಡಿದು ಮಾನವನ ಹೊಟ್ಟೆ ಸೇರುವತನಕವೂ ಎಲ್ಲಾ ಹಂತಗಳಲ್ಲೂ ಈ ಪ್ಲಾಸ್ಟಿಕ್ ಧಾಂಗುಡಿ ಇಡುತ್ತಿರುವ ಕಾರಣ ಮನುಷ್ಯನ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಜೊತೆಗೆ ಭೂಮಿಯ ಅಂತಸತ್ವವೂ ನಾಶವಾಗುತ್ತಿದೆ. ಭೂಮಿಯನ್ನು ಸಂರಕ್ಷಿಸುವ ಮಹಾ ಆಂದೋಲನ ಪ್ರತಿಯೊಬ್ಬರದಾಗಬೇಕಿದೆ.
ಈ ಭೂಮಿಯೊಳಗಿನ ಮಣ್ಣಿನಲ್ಲಿ ಮುಂದೊAದು ದಿನ ಮಣ್ಣಾಗಲಿರುವ ಮನುಷ್ಯರಾದ ನಾವುಗಳು ಇನ್ನಾದರೂ ನಾವು ಹೋಗಿ ಸೇರಬೇಕಾದ ಜಾಗದಲ್ಲಿ ಮಾರಕ ಪ್ಲಾಸ್ಟಿಕ್ ಇಲ್ಲದಂತಹ ಸುಂದರ ಭೂಮಿಗೆ ಮುನ್ನಡಿ ಇಡೋಣ.
ಪ್ಲಾಸ್ಟಿಕ್ ಬದಲು ಪೇಪರ್ ಅಥವಾ ಬಟ್ಟೆಗಳ ಕೈಚೀಲವನ್ನು ಬಳಸುವಂತಹ ಜಾಗೃತ ಮನಸ್ಥಿತಿಯನ್ನು ಎಲ್ಲರಲ್ಲೂ ಮೂಡಿಸುವ ಮೂಲಕ ಭೂಮಿಗೆ ಋಣಸಂದಾಯ ಮಾಡೋಣ ಬನ್ನಿ.. ಭೂಮಿಯನ್ನು ಸಂರಕ್ಷಿಸೋಣ....
(ಲೇಖನ : ಕೆ.ಎಸ್. ಮೂರ್ತಿ)