ಸೋಮವಾರಪೇಟೆ, ಏ. ೨೦: ೧೯೧೯ರಲ್ಲಿ ಸ್ಥಾಪನೆಗೊಂಡ ೨೭೫೯ನೇ ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಇದೀಗ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ವೈವಿಧ್ಯ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣ ಆಚರಣೆಗೆ ಸಿದ್ಧತೆ ಕೈಗೊಂಡಿದೆ. ತಾ. ೨೩ರಂದು ರಾಜ್ಯ ಸಹಕಾರ ಸಚಿವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಉಸ್ತುವಾರಿ ಸಚಿವರ ಉಪಸ್ಥಿತಿಯಲ್ಲಿ ಶತಮಾನೋತ್ಸವ ಸಂಭ್ರಮ ಜರುಗಲಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಹೆಚ್.ಕೆ. ಮಾದಪ್ಪ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ೧೯೧೯ರಲ್ಲಿ ಡಿ. ನಾರಾಯಣ ಶೆಟ್ಟಿ ಅವರ ಮುಂದಾಳತ್ವದಲ್ಲಿ ಸ್ಥಾಪನೆಗೊಂಡ ಸಹಕಾರ ಸಂಘಕ್ಕೆ ಇದೀಗ ೧೦೩ ವರ್ಷಗಳು ತುಂಬಿದ್ದು, ತಾ. ೨೩ರಂದು ಬೆಳಿಗ್ಗೆ ೯.೩೦ಕ್ಕೆ ಸಂಘದ ಮುಖ್ಯ ಕಚೇರಿಯಲ್ಲಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ೧೦ ಗಂಟೆಗೆ ವಿವೇಕಾನಂದ ವೃತ್ತದಿಂದ ಶತಮಾನೋತ್ಸವ ಸಮಾರಂಭ ನಡೆಯುವ ಒಕ್ಕಲಿಗರ ಸಮುದಾಯ ಭವನದವರೆಗೆ ಶೋಭಾಯಾತ್ರೆ ನಡೆಯಲಿದ್ದು, ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಉದ್ಘಾಟಿಸಲಿದ್ದಾರೆ ಎಂದರು.
ಬೆಳಿಗ್ಗೆ ೧೦.೩೦ಕ್ಕೆ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯುವ ಶತಮಾನೋತ್ಸವ ಸಮಾರಂಭವನ್ನು ರಾಜ್ಯ ಸರ್ಕಾರದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಉದ್ಘಾಟಿಸಲಿದ್ದಾರೆ. ಶತಮಾನೋತ್ಸವದ ನೆನಪಿಗಾಗಿ ಸದಸ್ಯರಿಗೆ ಬೆಳ್ಳಿ ನಾಣ್ಯ ವಿತರಿಸುವ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಚಾಲನೆ ನೀಡಲಿದ್ದಾರೆ. ಸ್ಮರಣ ಸಂಚಿಕೆಯನ್ನು ಸಂಸದ ಪ್ರತಾಪ್ ಸಿಂಹ ಬಿಡುಗಡೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಎಂಎಲ್‌ಸಿಗಳಾದ ವೀಣಾ ಅಚ್ಚಯ್ಯ, ಸುಜಾ ಕುಶಾಲಪ್ಪ, ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ, ನಿರ್ದೇಶಕರುಗಳಾದ ಬಿ.ಡಿ. ಮಂಜುನಾಥ್, ಬಿ.ಕೆ. ಚಿಣ್ಣಪ್ಪ, ಭರತ್‌ಕುಮಾರ್, ಪ.ಪಂ. ಅಧ್ಯಕ್ಷ ಪಿ.ಕೆ. ಚಂದ್ರು, ಬೇಳೂರು ಗ್ರಾ.ಪಂ. ಅಧ್ಯಕ್ಷ ಬಿ.ಎಂ. ಪ್ರಶಾಂತ್, ನೇರುಗಳಲೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪ, ಸಹಕಾರ ಸಂಘಗಳ ಜಂಟಿ ನಿಬಂಧಕ ಡಾ. ಜಿ. ಉಮೇಶ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಶತಮಾನೋತ್ಸವ ನೆನಪಿಗೆ ಸಂಘದ ಸದಸ್ಯರಿಗೆ ತಲಾ ೧೦ ಗ್ರಾಂ ತೂಕದ ಬೆಳ್ಳಿ ನಾಣ್ಯ ವಿತರಣೆ ಮಾಡಲಾಗುವುದು. ಇದರೊಂದಿಗೆ ೧೦೩ ವರ್ಷಗಳ ಸಾರ್ಥಕ ಸೇವೆಯನ್ನು ನೆನಪಿಸಿಕೊಳ್ಳುವ ಸಲುವಾಗಿ ಸ್ಮರಣ ಸಂಚಿಕೆ ‘ಸಹಕಾರ ಸಂಭ್ರಮ’ ಬಿಡುಗಡೆ ಮಾಡಲಾಗುವುದು ಎಂದರು.
ವಾಣಿಜ್ಯ ಬ್ಯಾಂಕುಗಳಿಗಿAತಲೂ ಹೆಚ್ಚಿನ ಸೇವೆಗಳನ್ನು ಸಹಕಾರ ಸಂಘ ನೀಡುತ್ತಿದ್ದು, ೨೦೦೫ರಲ್ಲಿಯೇ ಸಂಪೂರ್ಣವಾಗಿ ಕಂಪ್ಯೂಟರೀಕರಣ ಗೊಂಡಿದೆ. ಸಂಘದ ಸದಸ್ಯರಿಗೆ ವಿವಿಧ ಕೃಷಿ ಸಾಲಗಳ ಜೊತೆಗೆ ಜಾಮೀನು ಸಾಲದ ವಿಮಾ ನಿಧಿ ಯೋಜನೆ, ಪಿಗ್ಮಿ ಓವರ್ ಡ್ರಾಫ್ಟ್ ಸಾಲಕ್ಕೆ ವಿಮೆ, ಚಿನ್ನಾಭರಣ ಸಾಲ, ವಾಹನ ಖರೀದಿ ಸಾಲ, ಸಂಘದ ಸದಸ್ಯರ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಖರೀದಿ ಸಾಲ, ಚಿನ್ನಾಭರಣ ಖರೀದಿ, ಜಂಟಿ ಬಾಧ್ಯತಾ ಗುಂಪು ಸಾಲ ನೀಡಲಾಗುತ್ತಿದೆ ಎಂದರು.
೨೦೨೦-೨೧ನೇ ಸಾಲಿನಲ್ಲಿ ಸಂಘವು ೨೮೭.೩೦ ಕೋಟಿ ವ್ಯವಹಾರ ನಡೆಸಿದ್ದು, ರೂ. ೧.೦೮ ಕೋಟಿ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ ಶೇ.೨೦ರಷ್ಟು ಡಿವಿಡೆಂಡ್ ನೀಡಲಾಗಿದೆ. ೨೦೨೧-೨೨ರ ಸಾಲಿನಲ್ಲಿ ೩೬೦ ಕೋಟಿ ವ್ಯವಹಾರ ನಡೆಸಿದೆ. ಸಂಘದ ಶತಮಾನೋತ್ಸವದ ಸವಿ ನೆನಪಿಗಾಗಿ ರೂ. ೨ ಕೋಟಿ ವೆಚ್ಚದಲ್ಲಿ ಅಬ್ಬೂರುಕಟ್ಟೆಯಲ್ಲಿ ಗೋದಾಮು ಮತ್ತು ಸಮುದಾಯ ಭವನ ನಿರ್ಮಿಸಲಾಗುತ್ತಿದೆ ಎಂದು ಮಾದಪ್ಪ ತಿಳಿಸಿದರು.
ಶತಮಾನೋತ್ಸವದ ನಿಮಿತ್ತ ಈಗಾಗಲೇ ಗ್ರಾಮೀಣ ಭಾಗದಲ್ಲಿ ಉಚಿತ ಪಶು ಚಿಕಿತ್ಸಾ ಶಿಬಿರ, ರಾಸುಗಳ ಪ್ರದರ್ಶನ, ಉಚಿತ ಮಣ್ಣು ಪರೀಕ್ಷೆ, ಸ್ವಚ್ಛತಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಇದರೊಂದಿಗೆ ಸಂಘದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ, ಕೊರೊನಾ ವಾರಿಯರ್ಸ್ ಗಳಿಗೆ ಪ್ರೋತ್ಸಾಹ ಧನ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ೭೦ ಸಾವಿರ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ ಎಂದರು.
ಸAಘದ ಹಿರಿಯರು ಒಟ್ಟು ೧.೪೦ ಎಕರೆ ಜಾಗವನ್ನು ಸಂಘಕ್ಕೆ ಉಳಿಸಿಕೊಟ್ಟಿದ್ದಾರೆ. ಈ ಜಾಗದಲ್ಲಿ ಮುಖ್ಯ ಕಚೇರಿ, ಅಬ್ಬೂರುಕಟ್ಟೆ ಹಾಗೂ ಬಳಗುಂದದಲ್ಲಿ ಶಾಖೆಗಳು, ವಾಣಿಜ್ಯ ಮಳಿಗೆಗಳು, ೯೦೦ ಟನ್ ಸಾಮರ್ಥ್ಯದ ಸ್ವಂತ ಗೋದಾಮುಗಳಿವೆ. ಗೊಬ್ಬರ, ಕ್ರಿಮಿನಾಶಕ ಮತ್ತು ಕೃಷಿ ಪರಿಕರಗಳ ವಾರ್ಷಿಕ ವಹಿವಾಟು ರೂ. ೫ ಕೋಟಿಗೂ ಅಧಿಕವಿದ್ದು, ಮಾದರಿ ಸಂಘವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾದಪ್ಪ ಹೇಳಿದರು.
ಗೋಷ್ಠಿಯಲ್ಲಿದ್ದ ಸಂಘದ ಮಾಜೀ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಬಿ.ಡಿ.ಮಂಜುನಾಥ್ ಮಾತನಾಡಿ, ಕೊಡಗಿನಲ್ಲಿಯೇ ಬೃಹತ್ ಸಹಕಾರ ಸಂಘ ಎಂಬ ಹೆಗ್ಗಳಿಕೆ ನಮ್ಮ ಸಂಘಕ್ಕಿದೆ. ಎಲ್ಲಾ ಸೌಲಭ್ಯಗಳು ಒಂದೇ ಸೂರಿನಡಿ ತ್ವರಿತವಾಗಿ ಹಾಗೂ ಪಾರದರ್ಶಕವಾಗಿ ಸಿಗಬೇಕೆಂಬ ಉದ್ದೇಶದಿಂದ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಹಣಕಾಸಿಗೆ ಸಂಬAಧಿಸಿದ ವ್ಯವಹಾರಗಳ ಮಾಹಿತಿಗಳು ಸಂಬAಧಿಸಿದ ಸದಸ್ಯರ ಮೊಬೈಲ್‌ಗೆ ಸಂದೇಶದ ಮೂಲಕ ರವಾನೆಯಾಗುತ್ತಿದೆ ಎಂದರು.
ಇದರೊAದಿಗೆ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿ ಯಾಗಿ ಸದಸ್ಯರಿಗೆ ತಲುಪಿಸಲಾಗುತ್ತಿದೆ. ಓರ್ವ ಸದಸ್ಯರಿಗೆ ಗರಿಷ್ಠ ೪೦ ಲಕ್ಷದವರೆಗೆ ಸಾಲ ನೀಡಲಾಗುತ್ತಿದೆ ಎಂದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಎಂ. ಈಶ್ವರ್, ನಿರ್ದೇಶಕರಾದ ಬಿ.ಎಂ. ಸುರೇಶ್, ಜಿ.ಬಿ. ಸೋಮಯ್ಯ ಉಪಸ್ಥಿತರಿದ್ದರು.