ಕೂಡಿಗೆ, ಏ. ೨೦: ಇಂದಿನ ಜಾಗತಿಕ ಬದಲಾವಣೆಯಿಂದ ಫಾಸಿಲ್ ಇಂಧನಗಳು ಮುಗಿದು ಹೋಗುತ್ತಿರುವುದರಿಂದ ಭವಿಷ್ಯದಲ್ಲಿ ಎದುರಾಗಬಹುದಾದ ಇಂಧನ ಕೊರತೆ ನೀಗಿಸಲು ನಾವು ಪರಿಸರ ಸ್ನೇಹಿ ಸೌರಶಕ್ತಿ ಮತ್ತಿತರ ಪರ್ಯಾಯ ಇಂಧನ ಬಳಕೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಪಣ ತೊಡಬೇಕು ಎಂದು ರಾಷ್ಟಿçÃಯ ಹಸಿರು ಪಡೆಯ ಇಕೋ ಕ್ಲಬ್ ಘಟಕದ ಕೊಡಗು ಜಿಲ್ಲಾ ನೋಡಲ್ ಅಧಿಕಾರಿಯೂ ಆದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಹೇಳಿದರು.

ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ವಿವಿಧ ಅಂಗ ಸಂಸ್ಥೆಗಳ ಆಶ್ರಯದಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಧನ ಉಳಿತಾಯ ಜನ ಜಾಗೃತಿ ಜಾಥಾ ಅಭಿಯಾನ ಆಯೋಜಿಸಲಾಗಿತ್ತು. ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ರಾಷ್ಟಿçÃಯ ಹಸಿರು ಪಡೆ, ಶಾಲೆಯ ಇಕೋ ಕ್ಲಬ್, ಎನ್.ಎಸ್.ಎಸ್. ಘಟಕ, ವಿಜ್ಞಾನ ಸಂಘ ಹಾಗೂ ಎಸ್.ಡಿ.ಎಂ.ಸಿ. ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ, ಶಾಲೆಯ ಸಹಯೋಗದೊಂದಿಗೆ ಕೂಡ್ಲೂರು ಗ್ರಾಮದಲ್ಲಿ ಏರ್ಪಡಿಸಿದ್ದ ಇಂಧನ ಉಳಿತಾಯದ ಕಾಲ್ನಡಿಗೆ ಜಾಗೃತಿ ಜಾಥಾದಲ್ಲಿ ವಿದ್ಯಾರ್ಥಿಗಳು ಇಂಧನ ಉಳಿತಾಯ ಕುರಿತ ಭಿತ್ತಿಫಲಕಗಳನ್ನು ಹಿಡಿದು ಪ್ರಚಾರ ನಡೆಸಿದರು.

ನಮ್ಮ ನಡಿಗೆ ಹಸಿರೆಡೆಗೆ, ಹಸಿರು ಇಂಧನ ಬಳಸಿ ಮಾಲಿನ್ಯ ತಡೆಯಿರಿ, ಜಾಗತಿಕ ತಾಪಮಾನ ತಡೆಗಟ್ಟೋಣ ಬನ್ನಿ, ಭೂಗ್ರಹದ ರಕ್ಷಣೆಗೆ ಹಸಿರು ಇಂಧನ ಬಳಸಿ, ಭೂಮಿಯ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಹಸಿರು ಇಂಧನ ಪರಿಸರ ಸ್ನೇಹಿ ಇಂಧನ, ಹಸಿರು ಇಂಧನ ಮಾಲಿನ್ಯ ರಹಿತ ಇಂಧನ, ಹಸಿರು ಇಂಧನ ಪರ್ಯಾಯ ಇಂಧನ, ಸೌರಶಕ್ತಿ ಬಳಸಿ ಭವಿಷ್ಯ ಉಳಿಸಿ ಎಂಬಿತ್ಯಾದಿ ಪರಿಸರ ಪೂರಕ ಘೋಷಣೆಗಳನ್ನು ಕೂಗುವ ಮೂಲಕ ಜನರಲ್ಲಿ ಇಂಧನ ಉಳಿತಾಯದ ಕುರಿತು ಜನಜಾಗೃತಿ ಮೂಡಿಸ ಲಾಯಿತು. ಎನ್.ಎಸ್.ಎಸ್. ಅಧಿಕಾರಿ ಡಿ.ರಮೇಶ್, ಕೂಡ್ಲೂರು ಅಂಗನವಾಡಿ ಕೇಂದ್ರದ ಸಹಾಯಕಿ ತ್ರಿಪುರ ಸುಂದರಿ, ಆಶಾ ಕಾರ್ಯಕರ್ತೆ ನೇತ್ರಾವತಿ, ಸಿಬ್ಬಂದಿಗಳಾದ ಎಂ.ಉಷಾ, ಚಂದ್ರಮ್ಮ ಇದ್ದರು.