(ವಿಶೇಷ ವರದಿ.ಹೆಚ್.ಕೆ.ಜಗದೀಶ್)

ಗೋಣಿಕೊಪ್ಪಲು, ಏ. ೨೦: ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಮುಖ್ಯ ರಸ್ತೆಯ ಬದಿಯಲ್ಲಿ ನಿರಂತರವಾಗಿ ಹಣ್ಣು ಹಂಪಲು, ತರಕಾರಿ, ಈರುಳ್ಳಿ ಟೊಮೋಟೋ ಸೇರಿದಂತೆ ಮತ್ತಿತ್ತರ ವಸ್ತುಗಳನ್ನು ವಾಹನದಲ್ಲಿಯೂ ಹಾಗೂ ರಸ್ತೆ ಬದಿಯಲ್ಲಿಯೂ ಇಟ್ಟುಕೊಂಡು ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ನಾಗರಿಕರಿಗೆ ಹಾಗೂ ವಾಹನ ಚಲಾಯಿಸುವವರಿಗೆ ನಿರಂತರ ಕಿರಿಕಿರಿ ಉಂಟಾಗುತ್ತಿದೆ. ಅಲ್ಲಲ್ಲಿ ವ್ಯಾಪಾರಗಳು ನಡೆಯುತ್ತಿರುವುದರಿಂದ ಸಹಜವಾಗಿಯೇ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಗ್ರಾಮ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಮೌನ ವಹಿಸಿದೆ.

ವಾಣಿಜ್ಯ ನಗರ ಗೋಣಿಕೊಪ್ಪ ಏಕಮುಖ ಸಂಚಾರವಿದ್ದರೂ ಇಂತಹ ವ್ಯಾಪಾರದಿಂದಾಗಿ ಟ್ರಾಫಿಕ್ ವ್ಯವಸ್ಥೆಯಲ್ಲಿ ಸುಧಾರಣೆ ಕಾಣಲು ಸಾಧ್ಯವಾಗುತ್ತಿಲ್ಲ. ಕೇವಲ ಪಂಚಾಯಿತಿಗೆ ೩೦ ರೂಪಾಯಿ ಸುಂಕ ನೀಡಿ ಬೈಪಾಸ್ ರಸ್ತೆ, ಮುಖ್ಯ ರಸ್ತೆ ಹಾಗೂ ಪೊನ್ನಂಪೇಟೆ ರಸ್ತೆಯ ಇಕ್ಕೆಲಗಳಲ್ಲಿ ಇಂತಹ ವ್ಯಾಪಾರಗಳು ನಡೆಯುತ್ತಿವೆ. ವಾಹನದಲ್ಲಿ ಸಂಚರಿಸುವವರು ಇದನ್ನು ನೋಡಿ ರಸ್ತೆಯಲ್ಲಿಯೇ ವಾಹನ ನಿಲ್ಲಿಸಿ ವಸ್ತುಗಳನ್ನು ಖರೀದಿಸುತ್ತಾರೆ. ಹಿಂಬದಿಯಿAದ ಬರುವ ವಾಹನಗಳು ಟ್ರಾಫಿಕ್ ಜಾಮ್‌ನಿಂದಾಗಿ ರಸ್ತೆ ಉದ್ದಕ್ಕೂ ವಾಹನಗಳು ಸಾಲು ಸಾಲಾಗಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ಮಾರುಕಟ್ಟೆ ಆವರಣದಲ್ಲಿ ವ್ಯಾಪಾರಕ್ಕೆ ಅವಕಾಶವಿದ್ದರೂ ಯಾರೂ ಕೂಡ ಮಾರುಕಟ್ಟೆ ಬಳಿ ವ್ಯಾಪಾರ ಮಾಡುತ್ತಿಲ್ಲ. ಹೊರ ಊರಿನಿಂದ ವಾಹನದಲ್ಲಿ ಆಗಮಿಸುವ ವ್ಯಾಪಾರಸ್ಥರು ರಸ್ತೆ ಬದಿಯಲ್ಲಿಯೇ ವ್ಯಾಪಾರ ನಡೆಸಿ ಕೊಳೆತ ಪದಾರ್ಥಗಳನ್ನು ಎಲ್ಲೆಂದರಲ್ಲಿ ಎಸೆದು ತೆರಳುತ್ತಿದ್ದಾರೆ. ಇದರಿಂದ ಪರಿಸರ ಹಾಳಾಗುತ್ತಿದೆ. ನಗರದ ಪಂಚಾಯಿತಿ ಪೌರ ಕಾರ್ಮಿಕರಿಗೆ ಇದನ್ನು ನಿರಂತರ ಶುಚಿಗೊಳಿಸುವಲ್ಲಿಯೇ ಸಮಯ ವ್ಯರ್ಥವಾಗುತ್ತಿದೆ.

ನಗರದ ಮುಖ್ಯ ರಸ್ತೆಯಲ್ಲಿ ಸಾವಿರಾರು ವಾಹನಗಳು ಪ್ರತಿನಿತ್ಯ ಸಂಚಾರ ಮಾಡುತ್ತಿದೆ. ರಸ್ತೆಯು ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಇದರ ಮಧ್ಯೆಯೇ ಇಂತಹ ವ್ಯಾಪಾರಸ್ಥರು ಟ್ರಾಫಿಕ್ ಸಮಸ್ಯೆಗೆ ಮೂಲ ಕಾರಣರಾಗುತ್ತಿದ್ದಾರೆ. ಹಲವೆಡೆ ರಸ್ತೆ ಬದಿಯ ಜಾಗವನ್ನು ಸಂಪೂರ್ಣವಾಗಿ ಅತಿಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ದೂರದ ಊರಿನಿಂದ ಆಗಮಿಸುವ ವ್ಯಾಪಾರಸ್ಥರು ಕಳಪೆ ಮಟ್ಟದ ಹಣ್ಣು ಹಂಪಲುಗಳನ್ನು ನಾಗರಿಕರಿಗೆ ಕಡಿಮೆ ದರದಲ್ಲಿ ನೀಡಿ ತೆರಳುತ್ತಿದ್ದಾರೆ. ಇದನ್ನು ಉಪಯೋಗಿಸಿದ ನಾಗರಿಕರು ನಂತರ ಆರೋಗ್ಯ ಸಮಸ್ಯೆಯನ್ನು ಎದುರಿಸಿರುವ ಉದಾಹರಣೆಗಳಿವೆ.

ನಗರದ ಬಸ್ ನಿಲ್ದಾಣದ ಸಮೀಪವಿರುವ ಸಾರ್ವಜನಿಕರ ಶೌಚಾಲಯಕ್ಕೆ ತೆರಳುವ ರಸ್ತೆಯನ್ನು ಅತಿಕ್ರಮಿಸಿಕೊಂಡಿರುವ ಹಣ್ಣಿನ ವ್ಯಾಪಾರಸ್ಥರು ರಾಜಾರೋಷವಾಗಿ ವ್ಯಾಪಾರ ಮಾಡುತ್ತಿದ್ದಾರೆ. ರಸ್ತೆಯನ್ನು ಅತಿಕ್ರಮಿಸಲು ವಾರದ ಸಂತೆ ದಿನ ಹಠಕ್ಕೆ ಬಿದ್ದು ವ್ಯಾಪಾರ ನಡೆಸುತ್ತಾರೆ. ಇದರಿಂದಾಗಿ ಈ ರಸ್ತೆಯಲ್ಲಿ ಸಾರ್ವಜನಿಕರ ಶೌಚಾಲಯಕ್ಕೆ ತೆರಳುವ ಮಹಿಳೆಯರು ವಿದ್ಯಾರ್ಥಿಗಳಿಗೆ ಕಿರಿಕಿರಿಯಾಗುತ್ತಿದೆ. ಶೌಚಾಲಯದ ಬಾಗಿಲು ಬಳಿ ಹಾಗೂ ಸುತ್ತಮುತ್ತಲಿನಲ್ಲಿ ವ್ಯಾಪಾರ ಜೋರಾಗಿ ನಡೆಯುತ್ತಿದೆ.

ನಗರದ ನಿಲ್ದಾಣ ಸಮೀಪವಿರುವ ಅರುವತ್ತೋಕ್ಲು ರಸ್ತೆ ಮಾರ್ಗವಾಗಿ ಏಕಮುಖದಲ್ಲಿ ಸಂಚರಿಸಬೇಕಾದ ವಾಹನಗಳು ಈ ರಸ್ತೆಯಲ್ಲಿ ಎರಡು ಬದಿಯಿಂದ ಸಂಚರಿಸುತ್ತಿರುವುದರಿAದ ಹಾಗೂ ಈ ರಸ್ತೆಯ ಬದಿಯಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವುದರಿಂದ ಸಮಸ್ಯೆ ಉಲ್ಬಣಿಸಿದೆ. ಈ ಮಾರ್ಗದಿಂದಲೇ ವಾಹನಗಳು ಸಂಚರಿಸಬೇಕಾಗಿರುವುದರಿAದ ರಸ್ತೆ ಬದಿಯಲ್ಲಿರುವ ವಾಹನಗಳಿಗೆ ನಿರ್ಬಂಧ ಹೇರಬೇಕಾಗಿದೆ. ಹಾಗೂ ಏಕಮುಖ ಸಂಚಾರವನ್ನು ಈ ರಸ್ತೆಯಲ್ಲಿ ಕಡ್ಡಾಯಗೊಳಿಸಬೇಕಾಗಿದೆ.