ಅನಿಲ್ ಎಚ್.ಟಿ. ಮಡಿಕೇರಿ, ಏ. ೧೯ : ಮೂರು ನಾಲ್ಕು ದಿನಗಳ ಸತತ ರಜೆ.. ಪ್ರವಾಸಿ ಜಿಲ್ಲೆ ಕೊಡಗಿಗೆ ಸಾಲು ಸಾಲಾಗಿ ವಾಹನಗಳಲ್ಲಿ ಬಂದ ಸಾವಿರಾರು ಪ್ರವಾಸಿಗರು.. ಮಡಿಕೇರಿಯ ಕಿರಿದಾದ ರಸ್ತೆಗಳಲ್ಲಿ ವಾಹನ ದಟ್ಟಣೆ.. ಮಹಾನಗರಗಳಂತೆ ಕೆಲ ಗಂಟೆಗಳ ಕಾಲ ಮಂಜಿನ ಮಡಿಕೇರಿಯಲ್ಲಿಯೂ ಟ್ರಾಫಿಕ್ ಜಾಂ..

ಮಡಿಕೇರಿ ಸೇರಿದಂತೆ ಈ ವ್ಯಾಪ್ತಿಯ ಪ್ರವಾಸಿ ತಾಣಗಳಲ್ಲಿಯೂ ಕಾಲಿಡಲೂ ಜಾಗವಿಲ್ಲದಂತೆ ಜನರೋ ಜನ.. ಫೋಟೋ ಕ್ಲಿಕ್ಕಿಸುತ್ತಾ.. ಸೆಲ್ಫಿ ಹೊಡೆಯುತ್ತಾ.. ಮಕ್ಕಳು.. ಹಿರಿಯರ ಸಂಭ್ರಮ ಎಲ್ಲೆಲ್ಲೂ ಕಾಣುತ್ತಿದ್ದದ್ದು ಕಳೆದ ವಾರಾಂತ್ಯದ ಸಾಮಾನ್ಯ ನೋಟ..

ರೆಸ್ಟೋರೆಂಟ್‌ಗಳಲ್ಲಿಯೂ ಪ್ರವಾಸಿಗರೇ.. ಅನೇಕ ಹೊಟೇಲ್‌ಗಳಲ್ಲಿ ಊಟವೂ ಸಿಗದ ಪರಿಸ್ಥಿತಿ. ಮಕ್ಕಳಿಗೂ ಹಾಲು ಕೂಡ ಇಲ್ಲದ ದುಸ್ಥಿತಿ.. ಪ್ರವಾಸಿಗರು ಮಡಿಕೇರಿಗೆ ಬಂದಾಗ ಸ್ಥಳೀಯ ವಿಶೇಷ ತಿನಿಸು ಆಸ್ವಾದಿಸಲು ಬಯಸುವುದು ಸ್ವಾಭಾವಿಕ. ಆದರೆ ಹೊಟೇಲ್‌ಗÀಳಲ್ಲಿ ಸ್ಥಳೀಯ ವಿಶೇಷ ತಿನಿಸು ಹೋಗಲಿ.. ಗ್ರಾಹಕರಿಗೆ ತಿಂಡಿ. ಊಟವನ್ನೇ ಸರಿಯಾಗಿ ನೀಡಲು ಸಾಧ್ಯವಿಲ್ಲದ ಸಮಸ್ಯೆ ಎದುರಾಗಿತ್ತು. ಇದರ ಜತೆಗೇ ಸ್ಥಳೀಯರೇನಾದರೂ ರೆಸ್ಟೋರೆಂಟ್‌ಗಳಿಗೆ ಹೋದ ಸಂದರ್ಭ ತಾತ್ಸಾರದಿಂದ ನೋಡಿ ನೀವು ಇಲ್ಲಿಯವರೇಕೆ ಈಗ ಬಂದಿರಿ. ಟೂರಿಸ್ಟ್ ಬಂದಾಗಲೇ ನೀವೂ ಬರಬೇಕಾ ಎಂದು ಮೂದಲಿಸಿದ ಉದಾಹರಣೆಯೂ ಇವೆ.

ಪ್ರವಾಸಿ ತಾಣಗಳಲ್ಲಿ ಶೌಚಾಲಯ ಇಲ್ಲ. ಇರುವ ಶೌಚಾಲಯ ಶುಚಿಯಾಗಿಡಲೂ ಜನರಿಲ್ಲ. ವಾಹನ ದಟ್ಟಣೆ ನಿಯಂತ್ರಿಸಲು ಸಂಚಾರಿ ಪೊಲೀಸರು ಇರುವ ಅಲ್ಪಸ್ವಲ್ಪ ಸಿಬ್ಬಂದಿಗಳೊAದಿಗೆ ಹೆಣಗಾಡಿದರೆ, ದುಬಾರೆ, ನಿಸರ್ಗಧಾಮ, ತಲಕಾವೇರಿ, ಭಾಗಮಂಡಲಗಳಲ್ಲಿ ಪ್ರವಾಸಿಗರಿಗೆ ಸೂಕ್ತ ಮಾರ್ಗದರ್ಶನವಿಲ್ಲದೇ ವಾಹನಗಳ ಜತೆ ಜನರು ಕೂಡ ಬೇಕಾಬಿಟ್ಟಿಯಾಗಿ ಸುತ್ತಾಡಿದ್ದು ಕಂಡುಬAತು.

ಛೇ.. ಯಾಕಾಗಿ ಕೊಡಗಿಗೆ ಬಂದೆವೋ.. ಮಡಿಕೇರಿ ಹೀಗೆಯಾ.. ಟೂರಿಸ್ಟ್ ಪ್ಲೇಸ್ ಅಂಥ ಕೂರ್ಗಿಗೆ ಬಂದರೆ ಇಲ್ಲಿ ಏನೇನೂ ವ್ಯವಸ್ಥೆಯೇ ಇಲ್ಲ ಎಂಬ ದೂರುಗಳು ಪ್ರವಾಸಿಗರಿಂದ ವ್ಯಾಪಕವಾಗಿ ಕೇಳಿಬಂದವು. ಇದು ದಕ್ಷಿಣ ಕಾಶ್ಮೀರ ಎಂಬ ಹೆಗ್ಗಳಿಕೆಯ ಕೊಡಗು ಜಿಲ್ಲೆಗೆ ಕಪ್ಪುಚುಕ್ಕೆಯೇ ಹೌದು.

ಯಾಕೆ ಹೀಗಾಯಿತು.. ಯಾಕೆ ಹೀಗಾಗುತ್ತಿದೆ. ?

ಕೊಡಗಿಗೆ ಏಪ್ರಿಲ್ ೧೪ ರಿಂದ ೧೭ ರವರೆಗೆ ಪ್ರವಾಸಿಗರು ದಿಢೀರ್ ಎಂದು ಬಂದದ್ದೇನಲ್ಲ. ಕೋವಿಡ್‌ನಿಂದ ಎರಡು ವರ್ಷ ನಲುಗಿದ್ದ ಪ್ರವಾಸೋದ್ಯಮಕ್ಕೆ ಈ ನಾಲ್ಕೂ ದಿನಗಳು ಖಂಡಿತವಾಗಿಯೂ ಚೇತರಿಕೆಯ ದಿನಗಳಾಗಿದ್ದವು. ಲಾಕ್‌ಡೌನ್‌ನಿಂದಾಗಿ ಎರಡು ವರ್ಷಗಳಿಂದ ಬಹುತೇಕ ಮನೆಯಲ್ಲಿಯೇ ಕಾಲ ಕಳೆದಿದ್ದ ಜನರು ಪ್ರವಾಸದ ನೆಪದಲ್ಲಿ ಕೊಡಗೂ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರವಾಸಿ ತಾಣಗಳಿಗೆ ತೆರಳಿದ್ದರು. ಅನೇಕ ಜಿಲ್ಲೆಗಳಲ್ಲಿ ಪ್ರವಾಸಿಗರಿಗೆ ಸೂಕ್ತ ವ್ಯವಸ್ಥೆಯನ್ನು ದೂರದೃಷ್ಟಿ ಹಿನ್ನೆಲೆ ಕಲ್ಪಿಸಲಾಗಿತ್ತು. ಉದಾ. ಮೈಸೂರು. ಇಲ್ಲಿ ಹಿಂದೆAದೂ ಕಂಡುಕೇಳರಿಯದಷ್ಟು

(ಮೊದಲ ಪುಟದಿಂದ) ಪ್ರವಾಸಿಗರು ಈ ಬಾರಿ ಬಂದರೂ ಯಾವುದೇ ಸಮಸ್ಯೆಯಾಗಲೇ ಇಲ್ಲ.

ಆದರೆ, ಕೊಡಗಿನಲ್ಲಿ ಮಾತ್ರ ಪ್ರವಾಸಿಗರಿಗೆ ಕಹಿ ಅನುಭವ..

ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎಂಬುದು ಗೊತ್ತಿತ್ತು. ಆದರೆ ವ್ಯವಸ್ಥಿತ ನಿರ್ವಹಣೆಗೆ ಮಾತ್ರ ಯಾವುದೇ ಸಿದ್ಧತೆ ನಡೆಯಲೇ ಇಲ್ಲ. ಪ್ರವಾಸಿಗರ ದಟ್ಟಣೆಯನ್ನು ಅತ್ಯಂತ ಸಮರ್ಪಕ ರೀತಿಯಲ್ಲಿ ಕೊಡಗಿನ ಪ್ರವಾಸೋದ್ಯಮಕ್ಕಾಗಿ ಬಳಸಿಕೊಳ್ಳುವ ಸುವರ್ಣವಕಾಶ ತಪ್ಪಿ ಹೋಯಿತು. ಯಾಕಾಗಿ ಕೊಡಗಿಗೆ ಬಂದೆವು ಎಂಬ ತಪ್ಪು ಅಭಿಪ್ರಾಯವೇ ವ್ಯಾಪಕವಾಗಿ ಕೇಳಿಬರುವಂತಾಯಿತು.

೧. ಪ್ರವಾಸಿಗರು ಬರುತ್ತಾರೆ ಎಂದು ಗೊತ್ತಿದ್ದಾಗ ವಾಹನಗಳಿಗೆ ಸೂಕ್ತ ನಿಲುಗಡೆ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕಾಗಿತ್ತು. ಮಡಿಕೇರಿ ನಗರಸಭೆ, ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಎಡವಿತು. ದಸರಾ ಸಂದರ್ಭ ಮಾಡುವಂತೆ ವಿಶಾಲವಾದ ಜಾಗದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿ ಮಿನಿ ಬಸ್‌ಗಳ ಮೂಲಕ ಪ್ರವಾಸಿಗರನ್ನು ಆಯಾಯ ಪ್ರವಾಸಿ ತಾಣಗಳಿಗೆ ಕರೆದೊಯ್ಯುವ ವ್ಯವಸ್ಥೆ ಖಂಡಿತಾ ಸಾಧ್ಯವಿತ್ತು. ಈ ಮೂಲಕ ವಾಹನ ನಿಲುಗಡೆಗೆ ಸಮಸ್ಯೆಯಾಗದಂತೆ ಗಮನ ಹರಿಸಬಹುದಿತ್ತು.

೨. ಕೊಡಗಿನ ಪ್ರವಾಸೋದ್ಯಮ, ಆಹಾರ ಶೈಲಿ ಪರಿಚಯಿಸುವ ನಿಟ್ಟಿನಲ್ಲಿ ಜತೆಗೆ ರೆಸ್ಟೋರೆಂಟ್‌ಗಳಲ್ಲಿ ಊಟ, ತಿಂಡಿಯೇ ದೊರಕದಂತೆ ಆಗುವ ಹೀನಾಯ ಸ್ಥಿತಿ ತಪ್ಪಿಸಲು ಪ್ರವಾಸೋದ್ಯಮ ಇಲಾಖೆ ಗಾಂಧಿ ಮೈದಾನದಲ್ಲಿ ಆಹಾರ ಉತ್ಸವ ಆಯೋಜಿಸಬಹುದಿತ್ತು. ಕೊಡಗಿನ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮ ಆಯೋಜಿಸಬಹುದಿತ್ತು. ಸಂಜೆಯಾದ ಬಳಿಕ ಮಡಿಕೇರಿ ಸೇರಿದಂತೆ ಕೊಡಗಿನ ಪ್ರವಾಸೀ ತಾಣಗಳಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳೇ ಇಲ್ಲ. ಸಂಜೆಯಾದರೆ ಕೊಡಗು ಬೋರ್ ಎಂಬ ಅನಿಸಿಕೆ ತಪ್ಪಿಸುವ ಅವಕಾಶವಿತ್ತು. ಕೊಡಗಿನ ವೈವಿಧ್ಯತೆಯನ್ನು ಸಾವಿರಾರು ಪ್ರವಾಸಿಗರಿಗೆ ಪರಿಚಯಿಸುವ ಎಲ್ಲಾ ಸಾಧ್ಯತೆಗಳಿತ್ತು.

೩. ಕೊಡಗಿನ ಪ್ರವಾಸಿ ತಾಣಗಳಿಗೆ ಮಡಿಕೇರಿ, ಕುಶಾಲನಗರಗಳಿಂದ ಸೂಕ್ತ ರೀತಿಯಲ್ಲಿ ಬಾಡಿಗೆ ವಾಹನಗಳನ್ನು ವ್ಯವಸ್ತೆಗೊಳಿಸಿದ್ದರೆ ಹೊರಜಿಲ್ಲೆಯ ವಾಹನಗಳು ವಿಧಿಸುತ್ತಿದ್ದ ಅತಿಯಾದ ಬಾಡಿಗೆಯಿಂದ ಪ್ರವಾಸಿಗರಿಗೆ ಹೊರೆಯಾಗದಂತೆ ನೋಡಿಕೊಳ್ಳಬಹುದಿತ್ತು.

೪. ಕೊಡಗಿನಲ್ಲಿ ಪ್ರವಾಸೋದ್ಯಮ ಸಂಬAಧಿತ ಸಂಘಸAಸ್ಥೆಗಳು ಕೂಡ ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕಾಗಿತ್ತು. ಪ್ರವಾಹವಾದಾಗ, ಲಾಕ್ ಡೌನ್ ಉಂಟಾದಾಗ ನಷ್ಟದ ಸುಳಿಯಲ್ಲಿದ್ದೇವೆ ಎಂದು ಅಳಲು ತೋಡಿಕೊಳ್ಳುತ್ತಿದ್ದ ಇಂಥ ಸಂಘಟನೆಗಳು ಪ್ರವಾಸಿಗರು ಅತ್ಯಧಿಕ ಸಂಖ್ಯೆಯಲ್ಲಿ ಕೊಡಗಿಗೆ ಭೇಟಿ ನೀಡಿದಾಗ ಪ್ರವಾಸಿಗರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಮುಂದಾಗಲೇ ಇಲ್ಲ. ಹೊಟೇಲ್, ಹೋಂಸ್ಟೇ ಸೇರಿದಂತೆ ಇತರ ಸಂಘಟನೆಗಳು ತೀರಾ ನಿರ್ಲಕ್ಷö್ಯ ವಹಿಸಿದ್ದವು. ಪ್ರವಾಸಿಗರು ಬಂದರೂ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಮುತುವರ್ಜಿ ವಹಿಸದ ಸಂಘಸAಸ್ಥೆಗಳು ಕೇವಲ ದೂರು ತೋಡಿಕೊಳ್ಳಲು ಮಾತ್ರ ಸೀಮಿತವಾಗಬಾರದು. ಜಿಲ್ಲಾಡಳಿತದೊಂದಿಗೆ ಇಂಥ ಸಂಘಗಳು ಕೂಡ ಕೈಜೋಡಿಸಿ ಸರಿಯಾದ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು.

೫. ಪ್ರವಾಸಿಗರ ದಟ್ಟಣೆಯಿಂದ ಪ್ರವಾಸೋದ್ಯಮ ಚೇತರಿಕೆ ಕಂಡಿದೆ. ಖಂಡಿತಾ ಸತ್ಯ. ಆದರೆ ಈ ನಿಟ್ಟಿನಲ್ಲಿ ಎಲ್ಲರೂ ಎಷ್ಟು ಹೊಣೆಗಾರಿಕೆಯಿಂದ ನಡೆದುಕೊಂಡಿದ್ದಾರೆ. ನಿಜಕ್ಕೂ ಪ್ರವಾಸಿಗರು ಕೊಡಗು ಭೇಟಿಯಿಂದ ಸಂತೋಷದಿAದ ಮರಳಿದ್ದಾರೆಯೇ, ಕೊಡಗಿನ ಬಗ್ಗೆ ಇಂಥ ಪ್ರವಾಸಿಗರಿಗೆ ಉಂಟಾಗಿರುವ ಅಭಿಪ್ರಾಯವೇನು ಎಂದು ಯೋಚಿಸಿದರೆ ನಿರಾಶೆಯ ಉತ್ತರವೇ ಲಭಿಸೀತು.

೬. ಪ್ರವಾಸಿಗರು ಹೆಚ್ಚಾಗಿರುವ ವಾರಾಂತ್ಯಗಳಲ್ಲಿ ಸರ್ಕಾರಿ ರಜೆ ದಿನಗಳಲ್ಲಿ ಗ್ರಾಮಪಂಚಾಯತ್, ನಗರಸಭೆ, ಪ.ಪಂ. ಸಹಯೋಗದಲ್ಲಿ ವಿವಿಧ ಸಂಘಸAಸ್ಥೆಗಳ ನೆರವಿನಿಂದ ಜಿಲ್ಲಾಡಳಿತ ಪ್ರವಾಸಿ ಕಾರ್ಯಪಡೆ ರಚಿಸಬೇಕು. ಇಂಥ ಕಾರ್ಯಪಡೆ ಸದಸ್ಯರು ಪ್ರವಾಸಿಗರಿಗೆ ಮಾಹಿತಿ, ವಾಹನ ಸಂಚಾರ ನಿರ್ವಹಣೆಗೆ ಪೊಲೀಸರಿಗೆ ಸಹಾಯ ನೀಡಬೇಕು. ಶುಚಿತ್ವದ ಬಗ್ಗೆ ಗಮನ ಹರಿಸಲು ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ಪ್ರವಾಸಿ ತಾಣಗಳಲ್ಲಿ ನಿಯೋಜಿಸಬೇಕು. ಆಗ, ವ್ಯವಸ್ಥಿತ ಪ್ರವಾಸೋದ್ಯಮ ಸಾಧ್ಯವಾಗಲಿದೆ.

೭. ದರ ಏರಿಕೆಯ ಮೇಲೆ ನಿಗಾ ವಹಿಸುವ ಅಗತ್ಯವೂ ಇದೆ. ಪ್ರವಾಸಿಗರು ಬಂದರೆAದು ಏಕಾಏಕಿ ಬೆಲೆ ಹೆಚ್ಚಳ, ಕೊಡಗಿನ ಸಾಂಬಾರ ಪದಾರ್ಥಗಳೆಂದು ಬೇರೆ ಜಿಲ್ಲೆ, ರಾಜ್ಯದಿಂದ ತರಿಸಿದ ಸಂಬಾರ ಪದಾರ್ಥಗಳನ್ನು ದುಪ್ಪಟ್ಟು ದರಕ್ಕೆ ಪ್ರವಾಸಿಗರಿಗೆ ಮಾರಿ ಕೊಡಗಿನ ಮರ್ಯಾದೆ ಕಳೆಯುವ ಪ್ರಯತ್ನಕ್ಕೆ ಕಡಿವಾಣ ಅನಿವಾರ್ಯ.

ಒಂದಕ್ಕೆರಡು ಬೆಲೆ ಏರಿಸಿ ದಿಡೀರ್ ಲಾಭಗಳಿಸುವ ಯತ್ನಕ್ಕೂ ಜಿಲ್ಲಾಡಳಿತ ತಡೆಯೊಡ್ಡದೇ ಹೋದಲ್ಲಿ ಕೊಡಗಿನ ಹೆಸರಿಗೆ ಕಳಂಕ ಖಂಡಿತಾ. ದರ ಪಟ್ಟಿ ಮಾಹಿತಿಯನ್ನು ನೀಡುವಂತಾಗಬೇಕು.

೮ ಕೊಡಗಿನ ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕಿಸಲು ಇದು ಸಕಾಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಮುತುವರ್ಜಿ ವಹಿಸಲೇಬೇಕಾಗಿದೆ. ಪರ ಜಿಲ್ಲೆ, ರಾಜ್ಯಗಳಿಂದ ಪದಾರ್ಥ ತಂದು ಕೊಡಗಿನಲ್ಲಿ ಕೂರ್ಗ್ ಪ್ರಾಡಕ್ಟ್ ಎಂದು ಮಾರಾಟ ಮಾಡುವ ಜಾಲಕ್ಕೆ ಕಡಿವಾಣ ಹಾಕಿ ಕೊಡಗಿನವರೇ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರೋತ್ಸಾಹ ನೀಡಬೇಕು. ಸರ್ಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಆಸಕ್ತಿ ವಹಿಸಲೇಬೇಕಾಗಿದೆ.

೯. ಪ್ರವಾಸಿಗರಿಂದ ಬಂದ ಪ್ರವಾಸಿ ತಾಣಗಳ ಪ್ರವೇಶ ಶುಲ್ಕದಲ್ಲಿ ಆಯಾ ಪ್ರವಾಸಿ ತಾಣಗಳ ಪ್ರಗತಿಗೆ ಅನುದಾನ ನೀಡಬೇಕು. ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಬೇಕು.

೧೦. ಹೊಟೇಲ್ ಅಥವಾ ಇತರ ಪ್ರವಾಸೋದ್ಯಮಿಗಳಿಗೆ ಸಿಬ್ಬಂದಿಗಳ ಸಮಸ್ಯೆ ಬೃಹದಾಕಾರವಾಗಿ ಕಾಡಿದೆ. ಕೋವಿಡ್ ತರುವಾಯದ ದಿನಗಳಲ್ಲಿ ಕಾರ್ಮಿಕ, ಸಿಬ್ಬಂದಿಗಳ ಅಭಾವ ತಲೆದೋರಿದೆ. ಈ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ, ಉದ್ಯೋಗ ವಿನಿಯಮ ಇಲಾಖೆಗಳು ಜಂಟಿಯಾಗಿ ಸ್ಥಳೀಯರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಸ್ಥಳೀಯರಿಗೆ ಉದ್ಯೋಗ ಒಂದೆಡೆಯಾದಲ್ಲಿ, ಸಿಬ್ಬಂದಿ ಕೊರತೆ ನಿವಾರಣೆಯೂ ಕೂಡ ಪರಿಹಾರವಾಗುತ್ತದೆ. ಆಸಕ್ತರು ಏಕಗವಾಕ್ಷಿ ವ್ಯವಸ್ಥೆಯಲ್ಲಿ ಉದ್ಯೋಗವನ್ನು ಸುಲಭವಾಗಿ ಪಡೆಯುವಂತಾಗಬೇಕು. ಈ ನಿಟ್ಟಿನಲ್ಲಿಯೂ ಜಿಲ್ಲಾಡಳಿತ ಚಿಂತಿಸಬೇಕು. ಇಷ್ಟಕ್ಕೂ ಪ್ರವಾಸಿಗರು ಕೊಡಗಿಗೆ ಭೇಟಿ ನೀಡಿದ್ದರಿಂದಾಗಿ ಕೊಡಗು ಮಾಲಿನ್ಯವಾಗಿದೆಯೇ? ಕೊಡಗಿನ ಸಂಸ್ಕೃತಿಗೆ ಧಕ್ಕೆಯಾಗಿದೆಯೇ? ಪ್ರವಾಸಿಗರನ್ನು ಕೊಡಗಿನಿಂದ ದೂರ ಇಡಬೇಕೇ?ದೇಶದ ಕಾನೂನಿನಂತೆ ಯಾರನ್ನೂ ಎಲ್ಲಿಗೂ ತೆರಳದಂತೆ ನಿರ್ಬಂಧಿಸುವುದು ಅಸಾಧ್ಯ. ಜನರು ಯಾವ ಪ್ರದೇಶದಿಂದ ಮತ್ತೆಯಾವುದೇ ಪ್ರದೇಶಕ್ಕೂ ತೆರಳಲು ಸ್ವತಂತ್ರರು. ಹೀಗಿರುವಾಗ ಕೊಡಗಿಗೆ ಬರಬೇಡಿ ಎಂದು ಕಾನೂನು ತರಲಾಗದು. ಬದಲಾದ ಇತ್ತೀಚಿನ ವರ್ಷಗಳ ಪರಿಸ್ಥಿತಿಯಲ್ಲಿ ಬೀಡಾ ಮಾರುವವನಿಂದ ಮೊದಲ್ಗೊಂಡು ರೆಸಾರ್ಟ್ ಮಾಲೀಕನವರೆಗೂ ಕೊಡಗಿನಲ್ಲಿ ಪ್ರವಾಸೋದ್ಯಮವನ್ನೇ ನಂಬಿದ್ದಾನೆ. ಪ್ರವಾಸೋದ್ಯಮ ಬಹುತೇಕರಿಗೆ ಪರ್ಯಾಯ ಆರ್ಥಿಕ ಉದ್ಯಮವಾಗಿದೆ.

ಹೀಗಿರುವಾಗ ನೀವು ಬರಬೇಡಿ ಎನ್ನಲು ಸಾಧ್ಯವಿಲ್ಲ. ಕೊಡಗಿನವರು ಕೂಡ ಹೊರಜಿಲ್ಲೆಗೆ ತೆರಳಿದಾಗ ಇಲ್ಲಿನವರು ಅಲ್ಲಿನವರ ಪಾಲಿಗೆ ಪ್ರವಾಸಿಗರೇ ಆಗಿರುತ್ತಾರೆ ಎಂಬುದನ್ನು ಮರೆಯಬಾರದು. ಇಂಥ ಪರಿಸ್ಥಿತಿಯಲ್ಲಿ ಜಿಲ್ಲೆಗೆ ಬಂದAಥ ಪ್ರವಾಸಿಗರಿಗೆ ಅಥವಾ ಪ್ರವಾಸಿ ಅತಿಥಿಗಳಿಗೆ ಸೂಕ್ತವಾದ ವ್ಯವಸ್ಥೆಯನ್ನು ಕಲ್ಪಿಸುವುದು ಎಲ್ಲರ ಹೊಣೆಯಾಗಿರುತ್ತದೆ ವಿನಾ ಪ್ರವಾಸಿಗರಿಂದಲೇ ಎಲ್ಲ ಸಮಸ್ಯೆಯಾಯಿತು ಎಂದು ದೂರುವುದರಲ್ಲಿ ಅರ್ಥವಿಲ್ಲ. ಕೊಡಗಿಗೆ ಬನ್ನಿ ಎಂದು ಆಹ್ವಾನಿಸಿ ಇಲ್ಲಿ ಸೂಕ್ತ ವ್ಯವಸ್ಥೆಯನ್ನೇ ಮಾಡಿಕೊಳ್ಳದೇ ಊಟ, ತಿಂಡಿ, ಹಾಲಿಗೂ ಪರದಾಡುವಂಥ ಸ್ಥಿತಿ ನಿರ್ಮಾಣ ಮಾಡಿಕೊಂಡು ವಾಹನ ದಟ್ಟಣೆಗೂ ಕಾರಣವಾಗಿ, ಪ್ರವಾಸಿ ತಾಣಗಳನ್ನೂ ಶುಚಿಯಾಗಿರಿಸಿಕೊಳ್ಳದೇ ನಮ್ಮ ಜಿಲ್ಲೆಗೆ ನಾವೇ ಕಪ್ಪು ಚುಕ್ಕೆ ತಂದಿಡುವAಥ ಪರಿಸ್ಥಿತಿ ಸರಿಯೇ? ಯೋಚಿಸಿ,..

ಮುಂದಿನ ದಿನಗಳಲ್ಲಿಯೂ ಸಾವಿರಗಟ್ಟಲೆ ಸಂಖ್ಯೆಯಲ್ಲಿ ಪ್ರವಾಸಿಗರು ಕೊಡಗಿಗೆ ಬರುತ್ತಾರೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಪ್ರವಾಸೋದ್ಯಮ ಸಂಬAಧಿತ ಸಂಘ ಸಂಸ್ಥೆಗಳು, ಪೊಲೀಸ್ ಇಲಾಖೆ, ಪ್ರವಾಸಿ ತಾಣಗಳಿಗೆ ಒಳಪಡುವ ಪಂಚಾಯತ್ ಅಧಿಕಾರಿಗಳು, ಅರಣ್ಯ ಇಲಾಖೆ ಸಭೆ ನಡೆಸಿ ವ್ಯವಸ್ಥಿತ ರೀತಿಯಲ್ಲಿ ಸಿದ್ಧತೆ ನಡೆಸಿಕೊಳ್ಳುವ ಅಗತ್ಯ ಅನಿವಾರ್ಯವಾಗಿದೆ.

ಇಲ್ಲದಿದ್ದಲ್ಲಿ, ಕೊಡಗು ಜಿಲ್ಲೆಯ ಮಾನ ಮರ್ಯಾದೆ ನಾವೇ ಆಹ್ವಾನಿಸಿದ ಪ್ರವಾಸಿಗರಿಂದ ಮೂರಾಮುಟ್ಟೆಯಾಗುವುದು ಖಂಡಿತಾ. ಇಂಥ ಪರಿಸ್ಥಿತಿ ಮತ್ತೆ ಬಾರದಿರಲಿ.