ಶನಿವಾರಸಂತೆ, ಏ. ೧೯: ಸಮೀಪದ ತಪೋವನ ಕ್ಷೇತ್ರ ಮನೆಹಳ್ಳಿ ಮಠದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಗುರುಸಿದ್ಧವೀರೇಶ್ವರ ಸ್ವಾಮಿಯ ಮಹಾರಥೋತ್ಸವ ಶ್ರದ್ಧಾಭಕ್ತಿಯೊಂದಿಗೆ ನೆರವೇರಿತು.
ಕಳೆದ ೩ ದಿನಗಳಿಂದ ನಡೆಯುತ್ತಿರುವ ವಾರ್ಷಿಕ ಜಾತ್ರೆ ಸೋಮವಾರ ರಾತ್ರಿ ನಡೆದ ರಥೋತ್ಸವದೊಂದಿಗೆ ತೆರೆಕಂಡಿತು. ಮನೆಹಳ್ಳಿ ಮಠಾಧೀಶ ಮಹಾಂತ ಶಿವಲಿಂಗ ಸ್ವಾಮೀಜಿಗಳ ನೇತೃತ್ವದಲ್ಲಿ ೩ ದಿನಗಳ ಕಾಲ ವಿವಿಧ ಪೂಜೆ, ಸೇವೆಗಳು ನೆರವೇರಿದವು. ರಥೋತ್ಸವ ದಿನವಾದ ಸೋಮವಾರ ಮುಂಜಾನೆ ಕ್ಷೇತ್ರನಾಥ ವೀರಭದ್ರ ಸ್ವಾಮಿಗೆ ದುಗ್ಗಳ ಹಾಗೂ ಅಗ್ನಿಕೆಂಡೋತ್ಸವ, ಸಣ್ಣ ಚಂದ್ರ ಮಂಡಲೋತ್ಸವ, ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು.
ಮಧ್ಯಾಹ್ನ ತಪೋವನೇಶ್ವರಿ ದೇವಿಯ ಸನ್ನಿಧಿಯಲ್ಲಿ ಸುಮಂಗಲಿಯರಿಗೆ ಮಡಿಲು ತುಂಬುವ ಪೂಜೆ ನಡೆಯಿತು. ನಂತರ ಗುರುಸಿದ್ಧವೀರೇಶ್ವರ ಸ್ವಾಮಿಗೆ ದೊಡ್ಡಚಂದ್ರ ಮಂಡಲೋತ್ಸವ, ಪ್ರಾಕಾರ ಪಲ್ಲಕ್ಕಿ ಉತ್ಸವ ನಡೆಯಿತು.
ರಾತ್ರಿ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಜ್ಯೋತಿ ಬೆಳಗಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ತುಂತುರು ಮಳೆಯ ನಡುವೆಯೇ ಮಂಗಳ ವಾದ್ಯಘೋಷ, ವೀರಗಾಸೆ, ನೆರೆದಿದ್ದ ಭಕ್ತರ ‘ಓಂ ನಮಃ ಶಿವಾಯ’ ಘೋಷಗಳೊಂದಿಗೆ ಗುರುಸಿದ್ಧವೀರೇಶ್ವರ ರಥೋತ್ಸವ ಸಾಂಗವಾಗಿ ಸಾಗಿತು.
ನಂತರ ಕ್ಷೇತ್ರದ ವೃಷಭಲಿಂಗೇಶ್ವರ ಸನ್ನಿಧಾನದಲ್ಲಿ ಮಹಾಮಂಗಳಾರತಿ ನಂತರ ದಾಸೋಹದೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬಿತ್ತು. ಈ ಸಂದರ್ಭ ಕೆಸವತ್ತೂರು ಮಠದ ಬಸವರಾಜೇಂದ್ರ ಸ್ವಾಮೀಜಿ, ಅರಕಲಗೂಡು ಚಿಲುಮೆ ಮಠದ ಜಯದೇವ ಸ್ವಾಮೀಜಿ, ಸರಗೂರು ಮಠದ ಬಸವಲಿಂಗ ಸ್ವಾಮೀಜಿ, ತಪೋವನ ಕ್ಷೇತ್ರ ಸೇವಾ ಟ್ರಸ್ಟ್ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.