ಕೂಡಿಗೆ, ಏ. ೧೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕು ಹಾಡಿಗಳಲ್ಲಿ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಸಹಯೋಗದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು. ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀತಾ ಕಾಲೋನಿ, ಗಂಧದ ಹಾಡಿ ಹುಣಸೆಪಾರೆ, ಬ್ಯಾಡಗೊಟ್ಟ ಹಾಡಿಯ ಪ್ರದೇಶಗಳಲ್ಲಿ ಹಾಡಿಯ ಜನರಿಗೆ ಸರಕಾರದ ಯೋಜನೆ ಮತ್ತು ವಿವಿಧ ಸವಲತ್ತುಗಳನ್ನು ಪಡೆಯಲು ಬೇಕಾಗುವ ಆಹಾರ ಪಡಿತರ ಚೀಟಿ, ಆಧಾರ್ ಕಾರ್ಡ್ ಸೇರಿದಂತೆ ವಿವಿಧ ಗುರುತಿನ ಚೀಟಿಗಳನ್ನು ಪಡೆಯಲು ಬೇಕಾಗುವ ವಿಷಯಗಳ ಸಮಗ್ರವಾದ ಮಾಹಿತಿ ನೀಡಲಾಯಿತು.
ಜಿಲ್ಲಾಧಿಕಾರಿಗಳ ಸೂಚನೆಯಂತೆ ಕಂದಾಯ ಇಲಾಖೆ, ಆಹಾರ ಇಲಾಖೆ ಸಮಾಜ ಕಲ್ಯಾಣ ಇಲಾಖೆ, ಸೇರಿದಂತೆ ಗ್ರಾಮ ಪಂಚಾಯಿತಿ ಅಧಿಕಾರಿ ವರ್ಗದವರು ಆಯಾ ವ್ಯಾಪ್ತಿಯ ಹಾಡಿಗಳಿಗೆ ತೆರಳಿ ಸರಕಾರದ ಯೋಜನೆಗಳ ವಿಸ್ತಾರ ವಾದ ಮಾಹಿತಿ ನೀಡಿ, ಕುಟುಂಬದ ಸಮಗ್ರವಾದ ಮಾಹಿತಿಯನ್ನು ಪಡೆದು ಸರಕಾರದ ಯೋಜನೆ ವಿವಿಧ ಬಗೆಯ ಗುರುತಿನ ಚೀಟಿಯನ್ನು ನೀಡ ಲಾಯಿತು. ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಟಿ.ಪಿ. ಹಮೀದ್, ರವಿ, ರತ್ನಮ್ಮ, ಕಂದಾಯ ಇಲಾಖೆ ಕೂಡಿಗೆ ವಿಭಾಗದ ಲೆಕ್ಕಾಧಿಕಾರಿ ಗುರುದರ್ಶನ್, ಆಹಾರ ಇಲಾಖೆಯ ಸ್ವಾತಿ, ಸಮಾಜ ಕಲ್ಯಾಣ ಇಲಾಖೆಯ ರಂಜಿನಿಕಾAತ್, ಕೂಡಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಕೆ. ಆಯಿಷಾ, ಕಂದಾಯ ಇಲಾಖೆ ಸಿಬ್ಬಂದಿ ವರ್ಗದವರು ಮತ್ತು ನಾಲ್ಕು ಹಾಡಿಗಳ ಮುಖ್ಯಸ್ಥರು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.