ಜಿಲ್ಲೆಯಾದ್ಯಂತ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ಪಾಲ್ಗೊಳ್ಳುವ ಮೂಲಕ ದಲಿತ ಸಂಘರ್ಷ ಸಮಿತಿ ಸಂಭ್ರಮಾಚರಿಸಿತು. ನಗರದ ಅಶೋಕಪುದಲ್ಲಿ ಸಂತೋಷ್ ಯುವಕ ಸಂಘದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಸಂಚಾಲಕರಾದ ಹೆಚ್.ಎಲ್. ದಿವಾಕರ್, ಈ ದೇಶದ ಸಂವಿಧಾನ ಅಂಬೇಡ್ಕರ್ ಅವರು ಕೊಟ್ಟಿರುವ ದೊಡ್ಡ ಕೊಡುಗೆಯಾಗಿದ್ದು, ಸರ್ವಕಾಲಕ್ಕೂ ಅದು ಈ ದೇಶದ ಪವಿತ್ರ ಗ್ರಂಥವಾಗಿರುತ್ತದೆ. ಸಮಾನತೆ ಸಾರುವ ಈ ಗ್ರಂಥವನ್ನು ಮತ್ತು ಅದರ ಪ್ರಮುಖರಾದ ಅಂಬೇಡ್ಕರ್ ಅವರನ್ನು ಜಯಂತಿಯ ದಿನ ಮಾತ್ರವಲ್ಲದೇ ಪ್ರತೀ ದಿನವೂ ನೆನಪಿನಲ್ಲಿರಬೇಕು ಎಂದು ಅಭಿಪ್ರಾಯಪಟ್ಟರು.
ನಗರದ ರಾಣಿಪೇಟೆಯಲ್ಲಿ ಅಂಬೇಡ್ಕರ್ ಮಹಿಳಾ ಸಂಘ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದ.ಸಂ. ಪ್ರಮುಖರು ಭಾಗಿಯಾದರು. ಮಡಿಕೇರಿ ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರ ಸಭೆಯ ಸದಸ್ಯರಾದ ಶಾರದಾ ನಾಗರಾಜ್, ಸಂತೋಷ್ ಯುವಕ ಸಂಘದ ಮುಖಂಡರು ಗಳಾದ ಅವೀನ್, ಸುನಿಲ್, ವಿದ್ಯಾರ್ಥಿ ಒಕ್ಕೂಟದ ಸಂಚಾಲಕರಾದ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.
ಕುಶಾಲನಗರ : ಸಮಾಜದಲ್ಲಿ ತುಳಿತಕ್ಕೊಳಗಾದ ಜಾತಿ, ಲಿಂಗ ಭೇದಗಳ ಬಗ್ಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಮೂಲಕ ಸಮಾನತೆಯ ಹಕ್ಕು ದೊರೆಯುವಂತಾಯಿತು. ದೀನ ದಲಿತರಿಗೆ ಮುಕ್ತ ಸ್ವಾತಂತ್ರ‍್ಯದ ಜೊತೆಗೆ ಶಿಕ್ಷಣವನ್ನು ತಲುಪುವಂತೆ ಮಾಡಿ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಒತ್ತು ನೀಡಿದರು ಎಂದು ಪತ್ರಕರ್ತ ಎನ್. ರವಿಕುಮಾರ್ ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ರವರ ೧೩೧ ನೇ ಜನ್ಮದಿನಾಚರಣೆ ಅಂಗವಾಗಿ ಮಾದಪಟ್ಟಣ ಗ್ರಾಮದ ಡಾ. ಬಿ.ಆರ್.ಅಂಬೇಡ್ಕರ್ ದಲಿತ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಅಂಬೇಡ್ಕರ್ ಸಮುದಾಯ ಭವನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು. ಅಂಬೇಡ್ಕರ್ ಅವರು ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ ಸಾಮಾಜಿಕ ಸುಧಾರಕರಾಗಿ ಶಿಕ್ಷಣ, ಆರ್ಥಿಕ ತಜ್ಞ ಮತ್ತು ಕಾನೂನು ತಜ್ಞರಾಗಿ ದೇಶದ ಸಂವಿಧಾನಕ್ಕೆ ನೀಡಿರುವ ಕೊಡುಗೆ ಅಪಾರ. ಸಮಾಜ ಜಾತಿ ಮತ್ತು ಸಮುದಾಯಗಳ ಬಗೆಗಿನ ಅವರ ಚಿಂತನೆಗಳು ರಾಜಕೀಯ ಗಡಿಗಳನ್ನು ಮೀರಿದೆ ಎಂದರು. ಅಂಬೇಡ್ಕರ್ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಸ್ವಾತಂತ್ರ‍್ಯ ಚಳವಳಿಯ ಸಮಯದಲ್ಲಿ ಶಿಕ್ಷಣ ಮುಗಿಸಿ ಭಾರತಕ್ಕೆ ಮರಳಿದ ನಂತರ ಲಿಂಗ, ಜಾತಿಗಳ ತಾರತಮ್ಯದ ವಿರುದ್ಧ ಹೋರಾಟವನ್ನು ಮುನ್ನಡೆಸಿದರು. ಅಂಬೇಡ್ಕರ್ ದೇಶದಲ್ಲಿ ಜಾತಿ ತಾರತಮ್ಯ ಹೋದರೆ ಮಾತ್ರ ಸಮಾಜ ಸುಧಾರಣೆ ಸಾಧ್ಯ ಎನ್ನುವ ಚಿಂತನೆ ಹೊಂದಿದ್ದರು ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್. ಅಪ್ಪಾಜಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಿ.ಜಯವರ್ಧನ್ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಡಾ. ಬಿ.ಆರ್.ಅಂಬೇಡ್ಕರ್ ದಲಿತ ಸೇವಾ ಸಮಿತಿ ಅಧ್ಯಕ್ಷ ಎಂ.ಸಿ.ಮAಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಶಾಲನಗರ ಡಿವೈಎಸ್‌ಪಿ ಶೈಲೇಂದ್ರ ಕುಮಾರ್, ವೃತ್ತ ನಿರೀಕ್ಷಕ ಮಹೇಶ್ ದೇವರು, ಗುಡ್ಡೆಹೊಸೂರು ಪಂಚಾಯಿತಿ ಅಧ್ಯಕ್ಷೆ ನಂದಿನಿ, ಪಿ.ಡಿ.ಒ. ಶ್ಯಾಮ್ ತಮ್ಮಯ್ಯ, ಸದಸ್ಯರಾದ ಶಿವಪ್ಪ ಪ್ರವೀಣ್ ಕುಮಾರ್, ದಾಮೋದರ್ ಹೆಚ್.ಜಿ., ದಿವಾಕರ್ ಹೆಚ್.ಎಲ್. ಮತ್ತಿತರರು ಪಾಲ್ಗೊಂಡಿ ದ್ದರು. ಇದೇ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಹೆಚ್.ಆರ್. ರಾಜು, ಎಸ್.ಟಿ.ಶ್ಯಾಮ್, ಆರ್ ರವಿ ಝೇಂಕಾರ್, ಹೆಚ್.ಎಸ್.ಭವಾನಿ, ಜಯಪ್ರಕಾಶ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಸೋಮವಾರಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಲ್ಲಿ ಸಂವಿಧಾನ ಶಿಲ್ಪಿಯ ಸ್ಮರಣೆ ಕಾರ್ಯಕ್ರಮ ನಡೆಯಿತು. ಭಾರತೀಯ ಜನತಾ ಪಾರ್ಟಿಯ ವತಿಯಿಂದ ಪಕ್ಷದ ಕಚೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸಲಾಯಿತು. ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ಬಾಣಾವರ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಲಾಯಿತು. ಈ ಸಂದರ್ಭ ಬಿಜೆಪಿ ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಎಸ್.ಎ. ಪ್ರತಾಪ್, ತಾಲೂಕು ಅಧ್ಯಕ್ಷ ರಾಮಕೃಷ್ಣ, ಪಕ್ಷದ ಮುಖಂಡರುಗಳಾದ ಅಭಿಮನ್ಯುಕುಮಾರ್, ಹೆಚ್.ಕೆ. ಮಾದಪ್ಪ, ದರ್ಶನ್ ಜೋಯಪ್ಪ, ಬಿ.ಜೆ. ದೀಪಕ್, ಮಂಜುಳಾ ಸುಬ್ರಮಣಿ, ರೂಪಾ ಸತೀಶ್, ತಂಗಮ್ಮ, ರೇಣುಕ, ಸೋಮೇಶ್, ಜ್ಯೋತಿ ಶಿವಣ್ಣ, ದಾಕ್ಷಾಯಿಣಿ, ಲೀಲಾ ನಿರ್ವಾಣಿ, ಮೋಹಿತ್ ತಿಮ್ಮಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಮಿತಿಯಿಂದ: ಇಲ್ಲಿನ ವೆಂಕಟೇಶ್ವರ ಬ್ಲಾಕ್‌ನ ಅಂಬೇಡ್ಕರ್ ಜನ್ಮ ದಿನಾಚರಣಾ ಸಮಿತಿ ವತಿಯಿಂದ ಪಟ್ಟಣದಲ್ಲಿ ವಿವಿಧ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಿತು. ಅಂಬೇಡ್ಕರ್ ಅವರ ಜೀವನ, ತತ್ವಾದರ್ಶಗಳು, ಕ್ರಾಂತಿಕಾರಕ ಘೋಷಣೆಗಳ ಭಿತ್ತಿಪತ್ರಗಳ ಪ್ರದರ್ಶನ, ವಾದ್ಯಗೋಷ್ಠಿಯೊಂದಿಗೆ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ನಂತರ ಅಂಬೇಡ್ಕರ್ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.