ಸೋಮವಾರಪೇಟೆ, ಏ. ೧೮: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ ಕಾಜೂರು ಗ್ರಾಮದ ಚೆನ್ನಿಗರಾಯಸ್ವಾಮಿ ಕ್ಷೇತ್ರದ ಪುನರ್ ಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ತಾ. ೨೦ ರಿಂದ (ನಾಳೆಯಿಂದ) ತಾ. ೨೪ರ ವರೆಗೆ ನಡೆಯಲಿದೆ.

ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಮಚ್ಚಂಡ ಪ್ರಕಾಶ್ ಬೆಳ್ಯಪ್ಪ ಮಾತನಾಡಿ, ಕ್ಷೇತ್ರ ತಂತ್ರಿಗಳಾದ ಚಾಲಕುನ್ನತಿಲ್ಲಂ ಗೋಪಾಲಕೃಷ್ಣ ನಂಬೂದರಿಯವರ ಪೌರೋಹಿತ್ಯದಲ್ಲಿ ಐದು ದಿನಗಳ ಕಾಲ ಪೂಜಾ ಕೈಂಕರ್ಯ ನಡೆಯಲಿದೆ ಎಂದರು.

೧೫೦೦ ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡಿದ್ದು, ಈಗಾಗಲೇ ಕ್ಷೇತ್ರದ ಶಾಸಕರಾದ ಅಪ್ಪಚ್ಚು ರಂಜನ್, ಸಂಸದ ಪ್ರತಾಪ್ ಸಿಂಹ ಅವರ ನಿಧಿಯಿಂದ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಗ್ರಾಮಸ್ಥರ ಸಹಕಾರದಿಂದ ಸುಮಾರು ೫೦ ಲಕ್ಷ ವೆಚ್ಚದಲ್ಲಿ ನೂತನ ದೇವಾಲಯ ನಿರ್ಮಾಣ ಆಗಿದೆ ಎಂದರು.

ದೇವರ ವಿಗ್ರಹ ಮತ್ತು ಗುಡಿಯನ್ನು ಬೀಟಿಕಟ್ಟೆಯ ಮಂಜುನಾಥ್ ಆಚಾರ್ಯ ನಿರ್ಮಿಸಿದ್ದಾರೆ. ಸುಮಾರು ೩೦೦ ವರ್ಷದ ಕಾಲದಿಂದಲೂ ಹಿರಿಯರು ಆರಾಧಿಸಿಕೊಂಡು ಬಂದಿರುವ ದೇವಾಲಯಕ್ಕೆ ಇನ್ನೂ ಹೆಚ್ಚಿನ ಕಾಯಕಲ್ಪದ ಅಗತ್ಯವಿದ್ದು ದಾನಿಗಳು, ಭಕ್ತಾದಿಗಳು ಧನ ಸಹಾಯ ನೀಡಬಹುದಾಗಿದೆ.ಆಸಕ್ತರು ಐಗೂರು ಗ್ರಾಮದ ಬ್ಯಾಂಕ್ ಆಫ್ ಬರೋಡಾದ ಖಾತೆ ಸಂಖ್ಯೆ ೬೪೧೨೦೧೦೦೦೦೦೯೮೧ (ಐಎಫ್‌ಎಸ್‌ಸಿ ಕೋಡ್ ಬಿಎಆರ್‌ಬಿ೦ವಿಜೆಎಐಜಿಓ)ಗೆ ಧನಸಹಾಯ ಮಾಡಬೇಕೆಂದು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ೯೪೪೯೩೩೯೮೦೭ ಅಥವಾ ೯೪೮೧೮೦೬೧೦೬ನ್ನು ಸಂಪರ್ಕಿ ಸಬಹುದಾಗಿದೆ. ಗೋಷ್ಠಿಯಲ್ಲಿ ದೇವಸ್ಥಾನ ಸಮಿತಿಯ ಪದಾಧಿಕಾರಿಗಳಾದ ಮೂಲೆಮಜಲು ಪೊನ್ನಪ್ಪ, ಬಾರನ ಭರತ್ ಕುಮಾರ್ ಹಾಗೂ ಮೂಲೆಮಜಲು ಗಣೇಶ್ ಉಪಸ್ಥಿತರಿದ್ದರು.