ಪಾಲಿಬೆಟ್ಟ, ಏ. ೧೮: ಪಾಲಿಬೆಟ್ಟ ಗ್ರಾಮದ ಪೈಸಾರಿ ಜಾಗವೊಂದರಲ್ಲಿ ೫೦ ಕ್ಕೂ ಹೆಚ್ಚು ಸಂತ್ರಸ್ತ ಕುಟುಂಬದವರು ಗುಡಿಸಲು ಕಟ್ಟಿ ಶಾಶ್ವತವಾಗಿ ಜಾಗ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ವೀರಾಜಪೇಟೆ ತಹಶೀಲ್ದಾರ್ ಯೋಗಾನಂದ ಹಾಗೂ ಉಪವಿಭಾಗಾಧಿಕಾರಿ ಸತೀಶ್ ಉಳ್ಳಾಲ್ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದರು.
ಹಲವು ವರ್ಷಗಳಿಂದ ನಿವೇಶನಕ್ಕಾಗಿ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸದ ಕಾರಣ ಇಲ್ಲಿನ ಪೈಸಾರಿ ಜಾಗದಲ್ಲಿ ವಾಸ ಇರುವುದಾಗಿ ಸಂತ್ರಸ್ತರು ಅಳಲು ತೋಡಿಕೊಂಡರು. ಶಾಶ್ವತ ಸೂರು ಸಿಗುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ತಹಶೀಲ್ದಾರ್ ಯೋಗಾನಂದ ಸಂತ್ರಸ್ತರೊAದಿಗೆ ಮಾತುಕತೆ ನಡೆಸಿದರು. ಈಗಾಗಲೇ ವೀರಾಜಪೇಟೆ ತಾಲೂಕಿನಲ್ಲಿದ್ದ ಪೈಸಾರಿ ಜಾಗದಲ್ಲಿ ಸಾವಿರಾರು ಮಂದಿಗೆ ನಿವೇಶನ ನೀಡಲಾಗಿದ್ದು ಮತ್ತಷ್ಟು ಮಂದಿಗೆ ಜಾಗ ಗುರುತಿಸಲಾಗಿದೆ. ಪಾಲಿಬೆಟ್ಟ ವ್ಯಾಪ್ತಿಯಲ್ಲಿ ಪೈಸಾರಿ ಜಾಗಗಳನ್ನು ಗುರುತಿಸಲಾಗುತ್ತಿದ್ದು, ಜೂನ್ ೩೦ ರವರೆಗೆ ಕಾಲಾವಕಾಶ ನೀಡಿದಲ್ಲಿ ಶಾಶ್ವತವಾಗಿ ನಿವೇಶನ ಗುರುತಿಸಿ ಮೂಲಸೌಕರ್ಯ ಕಲ್ಪಿಸುವ ಭರವಸೆ ನೀಡಿದರು. ಸಂತ್ರಸ್ತರು ತಹಶೀಲ್ದಾರ್ ಅವರ ಭರವಸೆಗೆ ಮಣಿದು ಪ್ರತಿಭಟನೆ ಕೈಬಿಟ್ಟರು. ಬಳಿಕ ಗುಡಿಸಲುಗಳನ್ನು ತೆರವು ಮಾಡಲಾಯಿತು.
ಈ ಸಂದರ್ಭ ಕಂದಾಯ ಪರಿವೀಕ್ಷಕ ಅನೀಲ್ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾ, ಉಪಾಧ್ಯಕ್ಷೆ ಮಾಳೇಟಿರ ಪವಿತ್ರ, ಮಾಜಿ ಜಿ.ಪಂ. ಸದಸ್ಯ ವಿಜು ಸುಬ್ರಮಣಿ, ಮಾಜಿ ತಾ.ಪಂ. ಸದಸ್ಯ ಅಜಿತ್ ಕರುಂಬಯ್ಯ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಅನಿತ, ರೇಖಾ, ನಾಸಿರ್, ಮಾಜಿ ಸದಸ್ಯ ಕಾಳಪ್ಪ, ರವೂಫ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ತಹಶೀಲ್ದಾರ್ ಕಾಲಿಗೆ ಬಿದ್ದ ಸಂತ್ರಸ್ತೆ
೪೦ವರ್ಷಗಳಿಂದ ಮಕ್ಕಳೊಂದಿಗೆ ಸ್ವಂತ ಸೂರಿಲ್ಲದೆ ಸಂಕಷ್ಟದ ಜೀವನ ನಡೆಸುತ್ತಿದ್ದು ನಿವೇಶನಕ್ಕಾಗಿ ವರ್ಷವಿಡೀ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ವಂತ ಮನೆಯಿಲ್ಲದೆ ಮಕ್ಕಳಿಗೆ ಮದುವೆಯಾಗುತ್ತಿಲ್ಲ.
ಲೈನ್ಮನೆಗಳಲ್ಲಿ ವಾಸವಾಗಿದ್ದುಕೊಂಡು ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿದೇವೆ ಹೇಗಾದರೂ ಮಾಡಿ ಶಾಶ್ವತವಾದ ಸೂರು ಕಲ್ಪಿಸಿಕೊಡಿ ಎಂದು ತಹಶೀಲ್ದಾರ್ ಯೋಗಾನಂದ ಅವರ ಕಾಲಿಗೆ ಮಹಿಳೆಯೊಬ್ಬರು ಬಿದ್ದ ಘಟನೆ ನಡೆಯಿತು. ಮಹಿಳೆಯನ್ನು ಸಮಾಧಾನಪಡಿಸಿದ ತಹಶೀಲ್ದಾರ್ ನಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ಭರವಸೆಯಿತ್ತರು. ಪಾಲಿಬೆಟ್ಟ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಹಲವೆಡೆ ಪೈಸಾರಿ ಜಾಗ ಇದ್ದು ಸಂತ್ರಸ್ತರಿಗೆ ಹಂಚಬೇಕೆAದು ತಾ.ಪಂ. ಮಾಜಿ ಸದಸ್ಯ ಅಜಿತ್ ಕರುಂಬಯ್ಯ ತಹಶೀಲ್ದಾರ್ ಬಳಿ ಮನವಿ ಮಾಡಿದರು.