ಕುಶಾಲನಗರ, ಏ. ೧೮: ಪ್ರವಾಸಿ ಕೇಂದ್ರದಲ್ಲಿ ವೃದ್ಧ ಮಹಿಳೆಯೊಬ್ಬರು ಕುಸಿದು ಬಿದ್ದ ವೇಳೆ ಅಲ್ಲಿನ ವರ್ತಕರು ವೃದ್ಧೆಗೆ ಉಪಚರಿಸಿ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದ ಘಟನೆ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಕೇಂದ್ರದಲ್ಲಿ ನಡೆದಿದೆ.
ವೃದ್ಧೆಯೋರ್ವರು ತನ್ನ ಪುತ್ರನೊಂದಿಗೆ ಬೆಂಗಳೂರಿನಿAದ ಜಿಲ್ಲೆಗೆ ಪ್ರವಾಸಕ್ಕೆಂದು ಆಗಮಿಸಿದ್ದು, ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ ಪುತ್ರ ಸತೀಶ ಹಾಗೂ ಸೊಸೆ ವೃದ್ಧೆಯನ್ನು ಬಿಟ್ಟು ಕಾವೇರಿ ನಿಸರ್ಗಧಾಮ ಸುತ್ತಾಡಲು ತೆರಳಿದ್ದಾರೆ. ಈ ಸಂದರ್ಭ ಹೊರ ಆವರಣದಲ್ಲಿದ್ದ ವೃದ್ಧೆ ರಸ್ತೆಯಲ್ಲಿ ಕುಸಿದು ಬಿದ್ದಿದ್ದಾರೆ. ಇದನ್ನು ಕಂಡ ಎನ್.ಟಿ.ಸಿ. ವರ್ತಕ ಮೈಸಿ ಹಾಗೂ ಅವರ ಸ್ನೇಹಿತರು, ವೃದ್ಧೆಯನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಿದ್ದಾರೆ.
ಮಗ ಹಾಗೂ ಸೊಸೆ ನನ್ನನ್ನು ಬಿಟ್ಟು ಸುತ್ತಾಡಲು ತೆರಳಿದ್ದಾರೆ ಎಂದು ವೃದ್ಧೆ ಜಾನಕಿ ಮಾಹಿತಿ ನೀಡಿದ್ದಾರೆ. ನಂತರ ವೃದ್ಧೆಯ ಬಳಿಯಿದ್ದ ಮೊಬೈಲ್ ಫೋನ್ ಪಡೆದು ಆಕೆಯ ಮಗನನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಪತ್ನಿಯೊಂದಿಗೆ ಸುತ್ತಾಡುವ ಭರದಲ್ಲಿ ತಾಯಿಯನ್ನು ಮರೆತು ಹೋದ ಬಗ್ಗೆ ವರ್ತಕರು ಬುದ್ಧಿವಾದ ಹೇಳಿದ ಹಿನ್ನೆಲೆ ಕ್ಷಮೆ ಕೇಳಿದ ಪುತ್ರ ಸಹಾಯ ಮಾಡಿದ ವರ್ತಕರಿಗೆ ಕೃತಜ್ಞತೆ ಸಲ್ಲಿಸಿ ತಾಯಿಯನ್ನು ಕರೆದುಕೊಂಡು ಹೋಗಿದ್ದಾರೆ.