ಗೋಣಿಕೊಪ್ಪಲು, ಏ. ೧೭: ಕಾನೂರು ಮುಖ್ಯ ರಸ್ತೆಯ ದುಸ್ಥಿತಿ, ನಿರಂತರ ವಿದ್ಯುತ್ ಸಮಸ್ಯೆ, ಕಂದಾಯ ಇಲಾಖೆಯಲ್ಲಿ ಕಡತ ವಿಳಂಬ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ತಮ್ಮ ಮನವಿಯನ್ನು ತಹಶೀಲ್ದಾರರ ಮುಂದಿಟ್ಟರು.
ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮದ ಪ್ರಯುಕ್ತ ಪೊನ್ನಂಪೇಟೆ ತಹಶೀಲ್ದಾರ್ ಪ್ರಶಾಂತ್ ಅಧ್ಯಕ್ಷತೆಯಲ್ಲಿ ಪೊನ್ನಂಪೇಟೆ ಹೋಬಳಿಯ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ತಾಲೂಕು ಮಟ್ಟದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ದಲ್ಲಿ ಸಾರ್ವಜನಿಕರು ತಮ್ಮ ಅಹವಾಲನ್ನು ಸಭೆಯ ಮುಂದಿಟ್ಟರು.
ಕಾನೂರು ಮುಖ್ಯ ರಸ್ತೆಯು ಅತ್ಯಂತ ದುಸ್ಥಿತಿಯಲ್ಲಿದ್ದು ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಲೋಕೋಪಯೋಗಿ ಇಲಾಖೆಯೊಂದಿಗೆ ಚರ್ಚೆ ನಡೆಸಿದ್ದರೂ ಪ್ರಯೋಜನವಾಗಿಲ್ಲ ಆದ್ದರಿಂದ ಈ ರಸ್ತೆಯನ್ನು ಕೂಡಲೇ ದುರಸ್ಥಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು. ಈ ಸಂದರ್ಭ ತಹಶೀಲ್ದಾರ್ ಪ್ರಶಾಂತ್ ಸಭೆಯಲ್ಲಿ ಹಾಜರಿದ್ದ ಪಿಡಬ್ಲೂö್ಯಡಿ ಇಲಾಖೆಯ ಅಧಿಕಾರಿಗಳು ಉತ್ತರಿಸುವಂತೆ ಸೂಚನೆ ನೀಡಿದರು. ಆದರೆ ಸಭೆಗೆ ಲೋಕೋಪಯೋಗಿ ಇಲಾಖೆಯ ಯಾವುದೇ ಅಧಿಕಾರಿಗಳು ಆಗಮಿಸದೆ ಇದ್ದದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಈ ವೇಳೆ ಸಭೆಯಲ್ಲಿದ್ದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷÀ ವಿವೇಕ್ ಮಾತನಾಡಿ ಮುಖ್ಯ ರಸ್ತೆಯ ಅಭಿವೃದ್ಧಿಗೆ ಕಳೆದ ಎರಡು ವರ್ಷಗಳ ಹಿಂದೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಆದರೆ ಕೆಲಸ ನಿರ್ವಹಿಸಬೇಕಾದ ಗುತ್ತಿಗೆದಾರ ಈ ಬಗ್ಗೆ ಕಾರ್ಯೋನ್ಮುಖವಾಗಿಲ್ಲ. ಈತನನ್ನು ಕಪ್ಪು ಪಟ್ಟಿಗೆ ಸೇರಿಸಿರುವುದಾಗಿ ಮಾತುಗಳು ಕೇಳಿ ಬಂದಿವೆ. ಗುತ್ತಿಗೆದಾರರನ್ನು ಬದಲಾಯಿಸಿ ಕೂಡಲೇ ರಸ್ತೆ ಕಾಮಗಾರಿ ನಡೆಸುವಂತೆ ಒತ್ತಾಯಿಸಿದರು.
ಕಾನೂರು ವ್ಯಾಪ್ತಿಯಲ್ಲಿ ನಿರಂತರ ಹುಲಿ, ಕರಡಿ, ಆನೆಗಳ ಕಾಟ ಇರುವು ದರಿಂದ ಸಮಸ್ಯೆ ಗಂಭೀರವಾಗಿದೆ. ರಾತ್ರಿ ಹೊತ್ತಿನಲ್ಲಿ ವಿದ್ಯುತ್ ಇಲ್ಲದೇ ಇರುವುದರಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಕಾರ್ಮಿಕರು ವಾಸಿಸುವ ಲೈನ್ ಮನೆಗಳಿಗೆ ಇಲಾಖೆಯು ಉಚಿತ ವಿದ್ಯುತ್ ನೀಡಲು ಮುಂದಾಗಬೇಕೆAದು ಗ್ರಾಮದ ಪ್ರಮುಖ ಕಾಡ್ಯಮಾಡ ಮಧು ಸಭೆಯ ಗಮನ ಸೆಳೆದರು. ಚೆಸ್ಕಾಂ ಇಲಾಖೆಗೆ ನಿಗದಿತ ಸಮಯದಲ್ಲಿ ಬಿಲ್ ಪಾವತಿಸುತ್ತಿದ್ದೇವೆ. ಇಲ್ಲಿಯ ಲೈನ್ಮ್ಯಾನ್ಗಳು ಗ್ರಾಹಕರಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬಂತು. ಸಭೆಯಲ್ಲಿ ಉಪಸ್ಥಿತರಿದ್ದ ಚೆಸ್ಕಾನ ಎಇಇ ಡಿ.ಎನ್. ನೀಲಶೆಟ್ಟಿ ಮಾತನಾಡಿ, ಈ ಭಾಗದಲ್ಲಿ ಮೂರು ಲೈನ್ ಮ್ಯಾನ್ಗಳನ್ನು ನಿಯೋಜಿಸಿದ್ದೇವೆ. ಆದರೆ ಇವರುಗಳು ಅಧಿಕಾರಿಗಳ ಮಾತಿಗೆ ಮನ್ನಣೆ ನೀಡುತ್ತಿಲ್ಲ. ರಜೆಯಲ್ಲಿ ತೆರಳಿದವರು ಇನ್ನೂ ಕೂಡ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ತಹಶೀಲ್ದಾರ್ ಅಧಿಕಾರಿಗಳಾಗಿ ತಾವುಗಳು ತಮ್ಮ ಸಿಬ್ಬಂದಿಗಳನ್ನು ಹದ್ದು ಬಸ್ತಿನಲ್ಲಿಟ್ಟು ಕೊಳ್ಳಬೇಕು. ಜನರಿಗೆ ಸರಿಯಾದ ರೀತಿಯಲ್ಲಿ ವಿದ್ಯುತ್ ನೀಡಲು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.
ಕಂದಾಯ ಇಲಾಖೆಯಲ್ಲಿ ಇರುವ ಕಡತಗಳು ವೀರಾಜಪೇಟೆ ಕೇಂದ್ರದಲ್ಲಿದೆ ಇವುಗಳನ್ನು ಪೊನ್ನಂಪೇಟೆ ಕೇಂದ್ರಕ್ಕೆ ಸಂಪೂರ್ಣವಾಗಿ ತರಿಸಿಕೊಳ್ಳುವಂತೆ ಗ್ರಾಮಸ್ಥರು ಹೇಳಿದರು. ಹಲವು ಕಡತಗಳಿಗಾಗಿ ಕಚೇರಿಗೆ ಅಲೆದಾಟ ನಡೆಸಿ ಸಾಕಾಗಿದೆ. ಕಚೇರಿಯಲ್ಲಿ ಜಗಳವಾಡಿದರಷ್ಟೆ ನಮ್ಮ ಕಡತಗಳು ಸಿಗುತ್ತಿವೆ. ಇಲ್ಲದಿದ್ದಲ್ಲಿ ಯಾವುದೇ ಕಡತಗಳು ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ ಈ ಬಗ್ಗೆ ಇಲಾಖೆಯ ಸಿಬ್ಬಂದಿಗಳಿಗೆ ಕಠಿಣ ಸೂಚನೆ ನೀಡಬೇಕು ಸಾರ್ವಜನಿಕರ ಕಡತಗಳು ಹಾಳಾಗದಂತೆ ಎಚ್ಚರವಹಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ತಹಶೀಲ್ದಾರ್ ಅವರಿಗೆ ಮನವಿ ಮಾಡಿದರು.
ಕಾನೂರಿನಲ್ಲಿರುವ ಆಸ್ಪತ್ರೆಯು ಉತ್ತಮ ಸೇವೆ ನೀಡುತ್ತಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಸಹಾಯವಾಗುತ್ತಿದೆ. ಇಲ್ಲಿಗೆ ಅವಶ್ಯವಿರುವ ಎಕ್ಸರೇ ಮೆಷಿನ್ ಅವಶ್ಯಕತೆಯಿದ್ದು ಇದನ್ನು ತರಿಸಿಕೊಡುವಂತೆ ಕಾಡ್ಯಮಾಡ ಮಧು ಅಧಿಕಾರಿಗಳ ಗಮನ ಸೆಳೆದರು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ವ್ಯವಹರಿಸುವುದಾಗಿ ತಹಶೀಲ್ದಾರ್ ಭರವಸೆ ನೀಡಿದರು.
ಪೊಲೀಸ್ ಇಲಾಖೆಯ ಅಧಿಕಾರಿಗಳು ಇತ್ತೀಚೆಗೆ ಗಸ್ತು ಕಾರ್ಯ ನಿಲ್ಲಿಸಿದ್ದಾರೆ. ಇದರಿಂದ ಸಮಸ್ಯೆ ಎದುರಾಗುತ್ತಿದೆ ಎಂದು ಕಾನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಮಾಡ ರಶ್ಮಿ ಅಧಿಕಾರಿಗಳ ಗಮನಕ್ಕೆ ತಂದರು. ಮರಳು ದಂಧೆ ಹೆಚ್ಚಾಗದಂತೆ ಕ್ರಮ ವಹಿಸಬೇಕು. ರಾತ್ರಿ ಗಸ್ತು ಕಾರ್ಯ ಮುಂದುವರೆಸುವAತೆ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಕಡ್ಲೆ ಕಟ್ಟಲು ಕೊಡಿ!
ಕಂದಾಯ ಇಲಾಖೆ ವತಿಯಿಂದ ಆರ್.ಟಿ.ಸಿ. ಸೇರಿದಂತೆ ಇನ್ನಿತರ ದಾಖಲೆಗಳನ್ನು ರೈತರ ಮನೆಗಳಿಗೆ ಉಚಿತವಾಗಿ ನೀಡಲಾಗಿದೆ. ಆದರೆ ಈ ದಾಖಲೆಗಳು ಸಂಪೂರ್ಣ ತಪ್ಪಾಗಿವೆ. ಆದ್ದರಿಂದ ಇಂತಹ ಕಡತಗಳನ್ನು ನಮ್ಮ ದಿನಸಿ ಅಂಗಡಿಗೆ ನೀಡಿದರೆ ಕಡ್ಲೆ ಕಟ್ಟಲು ಪ್ರಯೋಜನವಾಗುತ್ತದೆ ಇಂತಹ ಉಚಿತ ಸೇವೆಯಿಂದ ನೀಡುವ ಕಡತಗಳು ಪ್ರಯೋಜನಕ್ಕೆ ಬರುತ್ತಿಲ್ಲ. ಕಚೇರಿಗೆ ರೈತರು ಆಗಮಿಸಿದ ಸಂದರ್ಭ ನ್ಯಾಯ ಸಮ್ಮತ ಕಡತಗಳನ್ನು ನೀಡಬೇಕು ಎಂದು ಗ್ರಾಮಸ್ಥರು ಹೇಳಿದರು.
ಬಿದ್ದ ಮನೆ ಸರಿಪಡಿಸಿ
೨೦೧೯ರಲ್ಲಿ ಮಳೆಹಾನಿ ಸಂದರ್ಭ ಕಾರ್ಮಿಕರ ಮೂರು ಮನೆಗಳು ಬಿದ್ದು ಹಾಳಾಗಿವೆ. ಈ ಬಗ್ಗೆ ಆರಂಭದಲ್ಲಿ ನೀಡಿದ ತಾತ್ಕಾಲಿಕ ಪರಿಹಾರ ಹೊರತುಪಡಿಸಿ ಇಲ್ಲಿಯ ತನಕ ಯಾವುದೇ ಪರಿಹಾರ ಲಭಿಸಿಲ್ಲ. ಅಧಿಕಾರಿಗಳ ಬಳಿ ತೆರಳಿದರೆ ಮನೆಯ ದಾಖಲಾತಿ ನೀಡಿ ಎಂದು ಪ್ರಶ್ನಿಸುತ್ತಾರೆ. ಈ ಭಾಗದ ಕಾರ್ಮಿಕರು ವಾಸಿಸುವ ಮನೆಗಳಿಗೆ ದಾಖಲೆಗಳಿಲ್ಲ. ಹಾಗಾಗಿ ಬಿದ್ದ ಮನೆಗಳಿಗೆ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಎಂ.ಜಿ. ಸುನಿಲ್ ಅಧಿಕಾರಿಗಳ ಗಮನ ಸೆಳೆದರು.
ಕಾನೂರು, ನಿಡುಗುಂಬ, ಬೆಕ್ಕೆಸುಡ್ಲೂರು ಗ್ರಾಮಗಳಿಗೆ ಸಂಬAಧಿಸಿದ ಪಹಣಿಯಲ್ಲಿನ ಲೋಪದೋಷಗಳ ತಿದ್ದುಪಡಿಗಳನ್ನು ತಹಶೀಲ್ದಾರರ ಮೂಲಕ ಸರಿಪಡಿಸಲಾಗುವುದು ಆದ್ದರಿಂದ ತಾಲೂಕು ಕಚೇರಿಯಲ್ಲಿ ಈ ಬಗ್ಗೆ ವ್ಯವಹರಿಸುವಂತೆ ತಹಶೀಲ್ದಾರ ಪ್ರಶಾಂತ್ ಸಾರ್ವಜನಿಕರಿಗೆ ತಿಳಿಸಿದರು. ಈ ವೇಳೆ ಗ್ರಾಮಸ್ಥರು ಕಂದಾಯ ಇಲಾಖೆಯಲ್ಲಿ ಎಲ್ಲಾ ಕಡತಗಳು ರವಾನೆ ಆಗಬೇಕಾದರೆ ಲಂಚ ಬೇಕೆಂದು ಹಠಕ್ಕೆ ಬೀಳುತ್ತಾರೆ. ನೀಡದಿದ್ದಲ್ಲಿ ಕಡತವು ನಾಪತ್ತೆಯಾಗುತ್ತಿವೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಯಾರಿಗೂ ಕೂಡ ಲಂಚ ನೀqಬೇಡಿ ಲಂಚ ಕೇಳುವವರ ಬಗ್ಗೆ ನನ್ನ ಗಮನಕ್ಕೆ ತನ್ನಿ ಎಂದರು.
ಸಭೆಯಲ್ಲಿ ಕಾನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೇಚಮಾಡ ಸಚಿನ್ ಸೋಮಣ್ಣ, ಗ್ರಾಮದ ಹಿರಿಯರಾದ ಮಚ್ಚಮಾಡ ಕಂದಾ ಸುಬ್ಬಯ್ಯ ಸೇರಿದಂತೆ ಇನ್ನಿತರ ಪ್ರಮುಖ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮದ ಜನತೆ ತಮ್ಮ ಸಮಸ್ಯೆಗಳ ಬಗ್ಗೆ ಲಿಖಿತ ಅರ್ಜಿಯನ್ನು ನೀಡಿದರು. ಬಾನಂಡ ಅರುಣ್ ಸ್ವಾಗತಿಸಿ ವಂದಿಸಿದರು. ಕಂದಾಯ ಅಧಿಕಾರಿಗಳಾದ ಸುಧೀಂದ್ರ, ಪೂಣಚ್ಚ, ಸರ್ವೆ ಅಧಿಕಾರಿ ಬಾನಂಡ ಅರುಣ್, ಕೃಷಿ ಅಧಿಕಾರಿ ರೀನಾ, ಅಬಕಾರಿ ನಿರೀಕ್ಷಕ ಸತ್ಯ ಪ್ರಕಾಶ್, ಜಿಲ್ಲಾ ಪಂಚಾಯಿತಿ ಇಂಜಿನಿಯರಿAಗ್ ವಿಭಾಗದ ಎಇಇ ವಿ.ಕೆ. ಮಹಾದೇವ್, ಪಂಚಾಯಿತಿ ಪಿಡಿಒ ಪುಟ್ಟರಾಜು, ಸಿಬ್ಬಂದಿಗಳಾದ ಮಾಳಪ್ಪ, ನಾಗರಾಜು, ಸುನಿಲ್ ಚಂದ್ರ, ಉಮೇಶ್ ಸೇರಿದಂತೆ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.