ಸಿದ್ದಾಪುರ, ಏ. ೧೭: ಇತ್ತೀಚೆಗೆ ಮಕ್ಕಳು ಶೈಕ್ಷಣಿಕ ಕ್ಷೇತ್ರದ ಸಾಧನೆ ಯೊಂದಿಗೆ ಕ್ರೀಡಾ ಕ್ಷೇತ್ರದಲ್ಲೂ ಗಣನೀಯ ಸಾಧನೆಗೈಯ್ಯುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಕ್ಷೇತ್ರದ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದಲ್ಲೇ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಅವಶ್ಯಕ ತರಬೇತಿಯನ್ನು ಸರಕಾರವು ಆಯಾ ಶಾಲಾ ವ್ಯಾಪ್ತಿಯಲ್ಲಿ ಕಲ್ಪಿಸಿದೆ. ಆದರೆ ದುರಾದೃಷ್ಟವಶಾತ್ ವೀರಾಜಪೇಟೆ ತಾಲೂಕಿನ ಮಾಲ್ದಾರೆ ಪ್ರಾಥಮಿಕ ಹಾಗೂ ಪ್ರೌಡ ಶಾಲೆಯ ಮಕ್ಕಳಿಗೆ ಆಟದ ಮೈದಾನವೇ ಇಲ್ಲದಂತಾಗಿದೆ.
ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಸೇರಿ ಮುನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯ ಪರಿಶಿಷ್ಟ ಜಾತಿ, ಪಂಗಡಗಳ ಹಾಡಿಗಳ, ಲೈನ್ ಮನೆಗಳ ಬಡ ಕೂಲಿಕಾರ್ಮಿಕರ ಮಕ್ಕಳೇ ಅತೀ ಹೆಚ್ಚು ಸರಕಾರಿ ಶಾಲೆಗೆ ಆಗಮಿ ಸುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸೀಮಿತವಾಗಿದ್ದರೂ ವಿದ್ಯಾರ್ಥಿಗಳು ಮಾತ್ರ ಕಲೆ, ಕ್ರೀಡೆ ಗಳಿಂದ ಹೆಸರುವಾಸಿ ಯಾಗುತ್ತಿರುವುದು ಕಾಣಬಹುದು. ಆದರೆ ಮಾಲ್ದಾರೆ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಸೂಕ್ತ ಮೈದಾನದ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿನ ಕ್ರೀಡಾ ಪ್ರತಿಭೆಗಳು ಇಂದಿಗೂ ಸೌಲಭ್ಯ ವಂಚಿತರಾಗಿರುವುದು ಕಂಡು ಬರುತ್ತಿದೆ. ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಕಟ್ಟಡದ ಎದುರು ಸಣ್ಣದಾದ ಜಾಗವಿದ್ದು ಅದರಲ್ಲೇ ವಿದ್ಯಾರ್ಥಿಗಳನ್ನು ಕೊಕೊ, ವಾಲಿ ಬಾಲ್, ಕಬಡ್ಡಿ ಆಟಗಳಲ್ಲಿ ಪಳಗಿಸಿ ಜಿಲ್ಲಾಮಟ್ಟ, ರಾಜ್ಯಮಟ್ಟದ ಕ್ರೀಡಾ ಪಟುಗಳು ಸೃಷ್ಟಿಯಾಗಿದ್ದಾರೆ. ಆದರೆ ಇತ್ತೀಚೆಗೆ ಪ್ರತಿಯೊಂದು ಗ್ರಾಮದ ಶಾಲಾ ವ್ಯಾಪ್ತಿಯಲ್ಲಿ ಉದ್ಯಾನವನ್ನು ನಿರ್ಮಿಸುವ ಯೋಜನೆಯನ್ನು ಜಾರಿಗೊಳಿಸ ಲಾಗಿದೆ. ಈ ಹಿನ್ನೆಲೆಯಲ್ಲಿ ಅವ್ಯವಸ್ಥಿತ ಯೋಜನೆಯ ಹಿನ್ನೆಲೆಯಲ್ಲಿ ಇದ್ದ ಮೂರಡಿ ಜಾಗವನ್ನು ಉದ್ಯಾನ ನಿರ್ಮಾಣ ಮಾಡಿ ವಿದ್ಯಾರ್ಥಿಗಳಿಗೆ ನಡೆದಾಡಲು ಕೂಡ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಶ್ವತ ಮೈದಾನಕ್ಕೆ ಒತ್ತಾಯಿಸಿ ಹಲವಾರು ಬಾರಿ ಪ್ರತಿಭಟನೆ ನಡೆಸಿದರೂ ಫಲ ಶೂನ್ಯ. ಮಾಲ್ದಾರೆ ವ್ಯಾಪ್ತಿಯಲ್ಲಿ ಕ್ರೀಡಾಪಟುಗಳು ಹೆಚ್ಚಾಗಿದ್ದರೂ ಕೂಡ ಸೂಕ್ತ ತರಬೇತಿ ನಡೆಸಲು ಮೈದಾನದ ಕೊರತೆ ಇರುವ ಹಿನ್ನೆಲೆ ಇಲ್ಲಿನ ಸ್ಥಳೀಯ ಕ್ರೀಡಾಪಟುಗಳು ಎಲೆ ಮರೆಯ ಕಾಯಿಯಂತೆ ಇಂದಿಗೂ ಮಾಲ್ದಾರೆ ವ್ಯಾಪ್ತಿಗೆ ಸೀಮಿತವಾಗಿರುವುದು ವಿಷಾಧನೀಯ.
ಮರಕೋತಿ ಆಟಕ್ಕೆ ಮಾತ್ರ ಸೀಮಿತವಾಗಿರುವ ತಾತ್ಕಾಲಿಕ ಮೈದಾನ : ಮಾಲ್ದಾರೆ ಸರಕಾರಿ ಶಾಲೆಯ ಎದುರು ಅರಣ್ಯ ಇಲಾಖೆಗೆ ಸೇರಿದ ಜಾಗವಿದ್ದು, ಆ ಜಾಗದಲ್ಲಿ ಹಲವಾರು ವರ್ಷಗಳಿಂದ ಶಾಲಾ ವಿದ್ಯಾರ್ಥಿಗಳು, ಸ್ಥಳೀಯ ಕ್ರೀಡಾ ಪಟುಗಳು ಕ್ರೀಡೆಯಲ್ಲಿ ತೊಡಗಿದ್ದಾರೆ. ಆದರೆ ಅರಣ್ಯ ಇಲಾಖೆಯ ಆ ಸಣ್ಣ ಜಾಗದಲ್ಲಿ ಮರಗಳೇ ಹೆಚ್ಚಾಗಿದ್ದು, ಹಲವಾರು ಬಾರಿ ಮರ ತೆರವು ಗೊಳಿಸಿಕೊಡಿ ಎಂದು ಅರಣ್ಯ ಇಲಾಖೆಯ ಬಳಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಅಲ್ಲಿ ಕ್ರೀಡಾಕೂಟ ಆಯೋಜನೆ ಸಾಹಸಮಯ. ಮರಗಳ ನಡುವೆ ಮರಕೋತಿ ಆಟವಲ್ಲದೆ ಇನ್ನೇನು ತಾನೆ ಆಡಬಹುದು ಎಂಬದು ಕ್ರೀಡಾಪಟುಗಳ ಅಳಲು.
ಪ್ರತಿಯೊಂದು ಗ್ರಾಮ ಸಭೆಯಲ್ಲಿ ಪ್ರತಿಧ್ವನಿಸುತ್ತಿರುವ ಮೈದಾನ ಕೂಗು: ಮಾಲ್ದಾರೆ ಗ್ರಾಮ ಪಂಚಾಯಿತಿಯ ಗ್ರಾಮಸಭೆಗಳಲ್ಲಿ ಶಾಶ್ವತವಾದ ಆಟದ ಮೈದಾನಕ್ಕೆ ಒತ್ತಾಯಿಸಿದ ಘಟನೆಗಳೇ ಹೆಚ್ಚು. ಸ್ಥಳೀಯ ಜನಪರ ಸಂಘ ಮೈದಾನಕ್ಕಾಗಿ ಜನಪ್ರತಿನಿಧಿಗಳ ಬಳಿ ವಾಗ್ವಾದ ಮಾಡಿರುವ ಘಟನೆಗಳೂ ನಡೆದಿದೆ.
ಮೈದಾನಕ್ಕಾಗಿ ಮತದಾನ ಬಹಿಷ್ಕಾರ ಮಾಡಿದ ಯುವಕರು : ಮಾಲ್ದಾರೆ ವ್ಯಾಪ್ತಿಯಲ್ಲಿ ಮೈದಾನದ ಕೂಗು ದಶಕಗಳಿಂದ ಕಂಡು ಬಂದರೂ ಇಂದಿಗೂ ಕೂಡ ಆಟದ ಮೈದಾನದ ಕೊರತೆ ಜೀವಂತ ವಾಗಿರುವ ಹಿನ್ನೆಲೆ ಸ್ಥಳೀಯ ಯುವಕರು ಮತದಾನದ ಬಹಿಷ್ಕಾರಕ್ಕೆ ಮುಂದಾಗಿದ್ದರು.
ತದನಂತರ ಜನಪ್ರತಿನಿಧಿಗಳ ಭರವಸೆಗೆ ಮತದಾನ ಬಹಿಷ್ಕಾರ ಕೈಬಿಟ್ಟಿದ್ದರು. ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಶಾಶ್ವತ ಮೈದಾನಕ್ಕೆ ಆಗ್ರಹಿಸಿದ ಯುವಕರು ಮತದಾನ ಬಹಿಷ್ಕಾರ, ರಾಜಕಾರಣಿಗಳಿಗೆ ಬಹಿಷ್ಕಾರ ದಂತಹ ದಿಟ್ಟ ಹೋರಾಟಕ್ಕೆ ಮುಂದಾದ ಸಂದರ್ಭ ಸ್ಥಳೀಯ ವಿವಿಧ ಪಕ್ಷದ ಮುಖಂಡ ರುಗಳು ಯುವಕರ ಮನವೊಲಿಸಿ ಯುವಕರ ಹೋರಾಟದ ಹಾದಿ ತಪ್ಪಿಸುತ್ತಿದ್ದಾರೆ ಎಂದು ಕ್ರೀಡಾಭಿ ಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
- ಎ.ಎನ್. ವಾಸು