ಮಡಿಕೇರಿ, ಏ. ೧೮: ತೈಲ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ವುಮೆನ್ ಇಂಡಿಯಾ ಮೂವ್‌ಮೆಂಟ್ ವತಿಯಿಂದ ನಗರದ ಚೌಕಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಕಾರರು ದಿನ ಬಳಕೆ ವಸ್ತು ಬೆಲೆ ಇಳಿಕೆಗೆ ಒತ್ತಾಯಿಸಿದರು. ಸಂಘಟನೆಯ ಜಿಲ್ಲಾಧ್ಯಕ್ಷೆ ನಫೀಸ ಅಕ್ಬರ್ ಮಾತನಾಡಿ, ಕೋಮು ಸಂಘರ್ಷದ ನಡುವೆ ಕೇಂದ್ರ ಹಾಗೂ ರಾಜ್ಯ ಸರಕಾರ ಜನಸಾಮಾನ್ಯರನ್ನು ಮರೆತಿದೆ. ಬೆಲೆ ಏರಿಕೆಯಿಂದ ಜನರು ತೀವ್ರ ಸಮಸ್ಯೆಗೆ ಒಳಗಾಗಿದ್ದಾರೆ. ಹಿಜಾಬ್, ಅಜಾನ್‌ನಂತಹ ವಿವಾದಗಳನ್ನು ಹುಟ್ಟುಹಾಕಿ ನೈಜ ಸಮಸ್ಯೆಯನ್ನು ಸರಕಾರ ಮರೆತಿದೆ ಎಂದು ದೂರಿದರು.

ಸಂಘಟನೆ ಪ್ರಮುಖರಾದ ನಸೀಯ ಮಾತನಾಡಿ, ಹತ್ತು ಹಲವು ಭರವಸೆ ನೀಡಿ ಅಧಿಕಾರಕ್ಕೆ ಬಂದ ಸರಕಾರ ಇದೀಗ ಜನವಿರೋಧಿ ನೀತಿ ಅನುಸರಿಸುತ್ತಿದೆ. ಅಡುಗೆ ಅನಿಲ, ತೈಲ, ವಿದ್ಯುತ್ ಶುಲ್ಕ ಹಾಗೂ ದಿನಬಳಕೆ ವಸ್ತುಗಳ ಬೆಲೆ ಇಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಉಪಾಧ್ಯಕ್ಷೆ ತನುಜಾವತಿ, ಕಾರ್ಯದರ್ಶಿ ಫೌಸಿಯ, ನಗರಸಭಾ ಸದಸ್ಯರುಗಳಾದ ಮೇರಿ ವೇಗಸ್, ನೀಮಾ ಹರ್ಷದ್ ಸೇರಿದಂತೆ ಇನ್ನಿತರರು ಹಾಜರಿದ್ದರು.