ಸೋಮವಾರಪೇಟೆ, ಏ. ೧೭: ಸಮೀಪದ ಯಲಕನೂರು ಗ್ರಾಮದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡಿರುವ, ೬೦೦ ವರ್ಷಗಳ ಇತಿಹಾಸವಿರುವ ಬೀರೇದೇವರು ಹಾಗೂ ಮಹಾಲಿಂಗೇಶ್ವರ ದೇವಾಲಯದ ಲೋಕಾರ್ಪಣಾ ಕಾರ್ಯಕ್ರಮ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಧ್ಯುಕ್ತವಾಗಿ ನೆರವೇರಿತು.

ಕಳೆದ ೩ ವರ್ಷಗಳ ಹಿಂದೆ ರೂ. ೮೫ ಲಕ್ಷ ವೆಚ್ಚದ ದೇವಾಲಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಇದೀಗ ದೇವಾಲಯ ನಿರ್ಮಾಣ ಪೂರ್ಣಗೊಂಡಿದ್ದು, ಕಳೆದ ಮೂರು ದಿನಗಳಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮುದ್ದಿನಕಟ್ಟೆ ಮಠಾಧೀಶರಾದ ಶ್ರೀ ಅಭಿನವ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ, ದಿಂಡಿ ಗಾಡು ಬಸವಜ್ಯೋತಿ ಮಠದ ಶ್ರೀ ಅಪ್ಪಾಜಿ ಸ್ವಾಮೀಜಿಗಳ ಸಾನಿಧ್ಯದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ಗಂಗಾಪೂಜೆಯ ನಂತರ ಮಂಗಳವಾದ್ಯಘೋಷ, ವೀರಗಾಸೆಯೊಂದಿಗೆ ದೇವರ ಮೂರ್ತಿಗಳನ್ನು ಮೆರವಣಿಗೆಯಲ್ಲಿ ದೇವಾಲಯಕ್ಕೆ ತರಲಾಯಿತು.

ಅರ್ಚಕರಾದ ಸೋಮಶೇಖರ ಶಾಸ್ತಿç ಹಾಗೂ ತಂಡದ ಪೌರೋಹಿತ್ಯದಲ್ಲಿ ಮಹಾರುದ್ರ ಹೋಮ, ರುದ್ರಪಾರಾಯಣದೊಂದಿಗೆ ಮಹಾಲಿಂಗೇಶ್ವರ, ಗಣಪತಿ, ದುರ್ಗಾಪರಮೇಶ್ವರಿ, ಕಾಲಭೈರವೇಶ್ವರ, ಭದ್ರಕಾಳೇಶ್ವರಿ, ವೀರಭದ್ರೇಶ್ವರ, ನಾಗದೇವತೆ, ಅವಲಕ್ಕಿ ಬಸವಣ್ಣ, ಜಟಿಗ ದೇವರುಗಳ ಮೂರ್ತಿ ಪ್ರತಿಷ್ಠಾಪನೆ ನೆರವೇರಿತು. ರುದ್ರಾಭಿಷೇಕ ಅಷ್ಟೋತ್ತರದ ನಂತರ ರುದ್ರಹೋಮದ ಪೂರ್ಣಾಹುತಿ ಅರ್ಪಿಸಲಾಯಿತು. ಮಹಾಮಂಗಳಾರತಿಯ ನಂತರ ಪ್ರಸಾದ, ದಾಸೋಹ ವಿನಿಯೋಗ ನೆರವೇರಿತು.

ದೇವಾಲಯಗಳು ಒಗ್ಗಟ್ಟಿನ ಸಂಕೇತ: ಗ್ರಾಮಗಳಲ್ಲಿ ನಿರ್ಮಾಣಗೊಳ್ಳುವ ದೇವಾಲಯಗಳು ಒಗ್ಗಟ್ಟಿನ ಸಂಕೇತ ಎಂದು ಮಾದ್ರೆ ಗ್ರಾಮದ ಮುದ್ದಿನಕಟ್ಟೆ ಮಠಾಧೀಶರಾದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಇಂದು ಗ್ರಾಮೀಣ ಭಾಗಗಳಲ್ಲಿ ಪ್ರತಿಗ್ರಾಮಗಳಲ್ಲೂ ದೇವಾಲಯಗಳು ನಿರ್ಮಾಣಗೊಳ್ಳುತ್ತಿವೆ. ದೇವಾಲಯಗಳು ಆ ಗ್ರಾಮದ ಒಗ್ಗಟ್ಟಿನ ಸಂಕೇತವಾಗಿದೆ ಎಂದರು.

ಆಧುನಿಕತೆ ಎಷ್ಟೇ ಬೆಳೆದರೂ ಸಹ ಮನುಷ್ಯ ಆಧ್ಯಾತ್ಮಿಕತೆಯಿಂದ ಮಾತ್ರ ನೆಮ್ಮದಿ ಕಾಣಲು ಸಾಧ್ಯ. ದೇವಾಲಯಗಳ ಪೂಜೆ, ಪುನಸ್ಕಾರಗಳಲ್ಲಿ ಪಾಲ್ಗೊಳ್ಳುವ ಮೂಲಕ ಎಲ್ಲಾರು ಒಟ್ಟಿಗೆ ಸೇರಬಹುದು. ಪರಸ್ಪರ ಬಾಂಧವ್ಯ ವೃದ್ಧಿಸಿಕೊಳ್ಳಬಹುದು ಎಂದು ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಾಜಿ ಸಚಿವ ಬಿ.ಎ. ಜೀವಿಜಯ ಮಾತನಾಡಿ, ಯಾವುದೇ ಗ್ರಾಮವಾದರೂ ಅಲ್ಲಿ ದೇವಾಲಯ, ಶಾಲೆ ಇರಲೇಬೇಕು. ಆಗ ಮಾತ್ರ ಗ್ರಾಮ ಪರಿಪೂರ್ಣವಾಗುತ್ತದೆ ಎಂದರು.

ಇಂದು ಜನತೆ ಮಾನಸಿಕ ನೆಮ್ಮದಿಗಾಗಿ ದೇವರ ಮೊರೆ ಹೋಗುತ್ತಿದ್ದಾರೆ. ದೇವರು ಒಂದು ಅಗೋಚರ ಶಕ್ತಿಯಾಗಿದ್ದು, ಜೀವನದ ನೆಮ್ಮದಿಗೆ ದೇವಾಲಯಗಳು ಅವಶ್ಯ ಎಂದರು.

ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿದ ಗ್ರಾಮದ ಗೌರವಾಧ್ಯಕ್ಷ ದಿಲೀಪ್ ಮಾತನಾಡಿ, ೪೫ ಕುಟುಂಬಗಳಿರುವ ಪುಟ್ಟ ಗ್ರಾಮದಲ್ಲಿ ರೂ. ೮೫ ಲಕ್ಷ ವೆಚ್ಚದಲ್ಲಿ ದೇವಾಲಯ ನಿರ್ಮಿಸಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ದೇವಾಲಯ ಸಮಿತಿ ಹಾಗೂ ಗ್ರಾಮ ಸಮಿತಿಯ ಅಧ್ಯಕ್ಷ ಶಿವಾನಂದ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ಎಸ್.ಮಹೇಶ್, ನೆರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪ, ಗ್ರಾಮದ ಮಾಜಿ ಅಧ್ಯಕ್ಷ ಚನ್ನಬಸಪ್ಪ, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವ, ಪ್ರಮುಖರುಗಳಾದ ವಿನೋದ್ ಕುಮಾರ್, ಸುಮಿ, ಪ್ರಭಾಕರ್, ಶಿವದಾಸ್, ರಮೇಶ್, ಭರತ್ ಮೋಹನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ದೇವಾಲಯ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ಸವಿತಾ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು, ನೇತ್ರಾವತಿ, ಶಿಕ್ಷಕರಾದ ಬಸವರಾಜು, ವೈ.ಸಿ. ಕುಮಾರ್ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು. ಸ್ವಾಗತಿಸಿದರು.