ಸುAಟಿಕೊಪ್ಪ, ಏ. ೧೭: ಸುಂಟಿಕೊಪ್ಪ ಪನ್ಯ ಗ್ರಾಮದಲ್ಲಿ ನೆಲೆನಿಂತಿರುವ ಗ್ರಾಮ ದೇವತೆಯಾದ ಶ್ರೀ ಬೆಳ್ಳಾರಿಕ್ಕಮ್ಮ ದೇವರ ವಾರ್ಷಿಕೋತ್ಸವ ಅಂಗವಾಗಿ ಎತ್ತು ಪೋರಾಟ್, ಚೌರಿಕುಣಿತ ಹಾಗೂ ವಿಶೇಷಪೂಜಾ ಕೈಂಕರ್ಯಗಳು ಭಕ್ತಾದಿಗಳ ಸಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊAಡಿತು.

ಉಲುಗುಲಿ ಪನ್ಯ ಗ್ರಾಮದ ಗ್ರಾಮ ದೇವತೆಯಾದ ಬೆಳ್ಳಾರಿಕ್ಕಮ್ಮ ಉತ್ಸವದ ಅಂಗವಾಗಿ ಕಳೆದ ೭ ದಿನಗಳ ಕಾಲ ಸುಂಟಿಕೊಪ್ಪ, ಉಲುಗುಲಿ, ಆಂಜನಗೇರಿ ಬೆಟ್ಟಗೇರಿ, ಹರದೂರು ಗ್ರಾಮದ ಗ್ರಾಮಸ್ಥರು ಕೊನೆಯ ದಿನವಾದ ಸೋಮವಾರ ಕೊಡವ ಮತ್ತು ಗೌಡ ಮನೆತನದ ಪುರುಷರು ಮತ್ತು ಯುವಕರು ಕೊಡಗಿನ ಸಾಂಪ್ರದಾಯಿಕ ಕೊಡವರ ಉಡುಪು ಕುಪ್ಯಚಾಲೆ ಮತ್ತು ಗೌಡ ಜನಾಂಗದ ಕುಪ್ಪಸ ದಟ್ಟಿ ಬಿಳಿ ಉಡುಪು ಧರಿಸಿ ದೇವಾಲಯದ ಭಂಡಾರವನ್ನು ಗ್ರಾಮದ ಮಂದನ ರಮೇಶ್ ಅವರ ಮನೆಯಿಂದ ಎತ್ತಿನ ಮೇಲೆ ಇರಿಸುವ ಮೂಲಕ ವಾದ್ಯಗೋಷ್ಠಿಯೊಂದಿಗೆ ದೇವಾಲಯಕ್ಕೆ ಮೆರವಣಿಗೆಯೊಂದಿಗೆ ತಂದು ದೇವಾಲಯದಲ್ಲಿ ಭಂಡಾರವನ್ನು ಸಮರ್ಪಿಸಿ, ನಂತರ ಗ್ರಾಮದ ಜನತೆಯಿಂದ ಈಡುಗಾಯಿ, ಎತ್ತು ಪೋರಾಟ್, ಚೌರಿಕುಣಿತದಲ್ಲಿ ಪಾಲ್ಗೊಂಡರು. ನಂತರ ಬೆಳ್ಳಾರಿಕ್ಕಮ್ಮ ಉತ್ಸವ ಮೂರ್ತಿಯನ್ನು ದೇವಸ್ಥಾನಕ್ಕೆ ಪ್ರದಕ್ಷಿಣೆ ನಡೆಸಿ ದೇವಿಗೆ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆಯನ್ನು ನಡೆಸಲಾಯಿತು. ದಿನದ ಪೂಜಾ ಕೈಂಕರ್ಯವನ್ನು ಅರ್ಚಕ ಗಣೇಶ್ ಶರ್ಮ, ಮಂಜುನಾಥ ಉಡುಪ, ಉದಯ ಭಟ್ ನೆರವೇರಿಸಿದರು. ಸುತ್ತ ಮುತ್ತಲ್ಲ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಗ್ರಾಮದ ಜನತೆ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.