ಸೋಮವಾರಪೇಟೆ, ಏ. ೧೭: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮರಣ ಬಾವಿಯಂತೆ ನಿರ್ಮಾಣ ಗೊಂಡಿದ್ದ ಹೊಂಡಾಗುAಡಿಗಳಿಗೆ ಕೊನೆಗೂ ಪಟ್ಟಣ ಪಂಚಾಯಿತಿ ಮುಕ್ತಿ ನೀಡಿದೆ. ಪಂಚಾಯಿತಿ ಕಚೇರಿಯ ಮುಂಭಾಗ ಹಾಗೂ ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿ ನಿರ್ಮಾಣಗೊಂಡಿದ್ದ ಗುಂಡಿಗಳ ಬಗ್ಗೆ ಪಟ್ಟಣ ಪಂಚಾಯಿತಿ ತನ್ನ ಕುರುಡುತನ ಪ್ರದರ್ಶಿಸಿತ್ತು. ಸಾರ್ವಜನಿಕರು ಅನೇಕ ಬಾರಿ ಪಂಚಾಯಿತಿಯ ಗಮನ ಸೆಳೆದಿದ್ದರೂ ಸ್ಪಂದಿಸಿರಲಿಲ್ಲ. ಪರಿಣಾಮ ಗುಂಡಿಗಳಲ್ಲಿ ಬಿದ್ದು ಹಲವರು ಗಾಯಗೊಳ್ಳುತ್ತಿದ್ದರು.
ಇದೀಗ ಪಂಚಾಯಿತಿ ಈ ಬಗ್ಗೆ ಕಣ್ಣು ಬಿಟ್ಟಿದ್ದು, ಮರಣ ಬಾವಿಯಂತಿದ್ದ ಗುಂಡಿಗಳನ್ನು ಕಾಂಕ್ರಿಟ್ ಹಾಕಿ ಮುಚ್ಚಲಾಗಿದೆ. ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಸದಸ್ಯರುಗಳಾದ ಬಿ.ಆರ್. ಮಹೇಶ್, ಬಿ. ಸಂಜೀವ ಅವರುಗಳು ಪ.ಪಂ. ಕಾರ್ಮಿಕರನ್ನು ಬಳಸಿಕೊಂಡು ಗುಂಡಿಗಳನ್ನು ಮುಚ್ಚಿಸಿದ್ದು, ಪಾದಚಾರಿಗಳು ಹಾಗೂ ಬೈಕ್ ಸವಾರರಲ್ಲಿ ನೆಮ್ಮದಿ ಮೂಡಿಸಿದೆ.