ಸೇನಾ ಮುಖ್ಯಸ್ಥರಾಗಿ ನೇಮಕ
ಬೆಂಗಳೂರು, ಏ. ೧೮: ಭಾರತೀಯ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವರನ್ನು ಕೇಂದ್ರ ಸರ್ಕಾರ ಸೋಮವಾರ ನೇಮಕ ಮಾಡಿದೆ. ಹಾಲಿ ಸೇನಾ ಮುಖ್ಯಸ್ಥ ಜನರಲ್ ಎಂ.ಎA. ನರವಾಣೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ಹುದ್ದೆಯಿಂದ ಈ ತಿಂಗಳ ಅಂತ್ಯಕ್ಕೆ ನಿವೃತ್ತಿಯಾಗಲಿದ್ದಾರೆ.
ದೆಹಲಿಯಲ್ಲಿ ಹಿಂಸಾಚಾರ; ಕಲ್ಲು ತೂರಾಟ
ನವದೆಹಲಿ, ಏ. ೧೮: ದೆಹಲಿಯ ಜಹಾಂಗೀರಪುರಿಯಲ್ಲಿ ಹನುಮ ಜಯಂತಿ ಮೆರವಣಿಗೆ ವೇಳೆ ಕೋಮು ಘರ್ಷಣೆ ಸಂಭವಿಸಿದ ಬೆನ್ನಲ್ಲೇ ಸೋಮವಾರ ಮತ್ತೆ ರಾಷ್ಟ್ರ ರಾಜಧಾನಿಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಕಲ್ಲು ತೂರಾಟ ನಡೆದಿದೆ. ಶನಿವಾರದ ಘರ್ಷಣೆಗೆ ಸಂಬAಧಿಸಿದAತೆ ಮಹಿಳೆಯೊಬ್ಬರನ್ನು ವಿಚಾರಣೆಗೆ ಕರೆದೊಯ್ದ ನಂತರ, ಆ ಪ್ರದೇಶದಲ್ಲಿ ಸುಮಾರು ೫೦ ಮಹಿಳೆಯರು ಸೋಮವಾರ ದೆಹಲಿಯ ಜಹಾಂಗೀರ್ ಪುರಿಯಲ್ಲಿ ಪ್ರತಿಭಟನೆ ನಡೆಸಿ ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ. ಘರ್ಷಣೆ ವೇಳೆ ಗುಂಡು ಹಾರಿಸಿದ ಆರೋಪಿ ಸೋನು ಅವರ ಪತ್ನಿಯನ್ನು ಪೊಲೀಸರು ವಿಚಾರಣೆಗೆ ಕರೆದೊಯ್ಯುತ್ತಿದ್ದಂತೆ ವಿವಿಧ ಮನೆಗಳ ಮೇಲ್ಛಾವಣಿಯಿಂದ ಕಲ್ಲು ತೂರಾಟ ನಡೆದಿದೆ. ಈ ವೇಳೆ ದೆಹಲಿ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ಗಾಯಗೊಂಡಿದ್ದಾರೆ. ಪ್ರಸ್ತುತ ತಲೆಮರೆಸಿಕೊಂಡಿರುವ ಸೋನು ಅವರನ್ನು ಹುಡುಕಲು ಪೊಲೀಸರು ಅವರ ಮನೆಗೆ ಹೋದಾಗ ಸೋನು ಕುಟುಂಬ ಸದಸ್ಯರು ಪೊಲೀಸರ ಮೇಲೆ ಕಲ್ಲು ತೂರಿದರು. ಘಟನೆಗೆ ಸಂಬAಧಿಸಿದAತೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ವಾಯವ್ಯ ದೆಹಲಿಯ ಡೆಪ್ಯುಟಿ ಕಮಿಷನರ್ ಆಫ್ ಪೋಲಿಸ್ ತಿಳಿಸಿದ್ದಾರೆ.
ಗೋವಾ ಗಡಿ ದಾಟಲು ಕರ್ನಾಟಕ ಪ್ರವಾಸಿಗರಿಗೆ ೧೦ ಸಾವಿರ ದಂಡ
ಪಣಜಿ, ಏ. ೧೮: ಗೋವಾಗೆ ಟ್ಯಾಕ್ಸಿಯಲ್ಲಿ ಹೋಗುವ ಕರ್ನಾಟಕದ ಪ್ರವಾಸಿಗರು ಗಡಿ ದಾಟುವುದಕ್ಕೆ ವಿಶೇಷ ಪರವಾನಗಿ ಪಡೆಯಲು ಪ್ರತಿ ವಾಹನಕ್ಕೆ ೧೦,೨೬೨ ರೂ. ದಂಡ ಪಾವತಿಸಬೇಕಾಗಿದೆ. ಗೋವಾ ಸರ್ಕಾರದ ಈ ನಡೆಯಿಂದ ಕರ್ನಾಟಕದ ಪ್ರವಾಸಿಗರು ಗೋವಾಗೆ ತೆರಳದೆ ರಾಜ್ಯಕ್ಕೆ ವಾಪಸಾಗುತ್ತಿದ್ದಾರೆ. ಗೋವಾದ ಮೊಲ್ಲೆಮ್ ಚೆಕ್ಪೋಸ್ಟ್ನಲ್ಲಿ ಗುರುವಾರದಿಂದ ಶನಿವಾರ ರಾತ್ರಿಯವರೆಗೆ ೪೦ ಟ್ಯಾಕ್ಸಿಗಳನ್ನು ತಡೆಹಿಡಿಯಲಾಗಿದೆ ಎಂದು ಕರ್ನಾಟಕ ಪ್ರವಾಸೋದ್ಯಮ ವೇದಿಕೆಯ ಉಪಾಧ್ಯಕ್ಷ ಎಂ ರವಿ ತಿಳಿಸಿದ್ದಾರೆ. ಸಾಮಾನ್ಯವಾಗಿ, ವಿಶೇಷ ಪರವಾನಗಿ ಪಡೆಯಲು ರೂ. ೧೦೦ ಅಥವಾ ರೂ. ೨೦೦ ವೆಚ್ಚವಾಗುತ್ತದೆ. ಆ ಹಣವನ್ನು ಬೆಂಗಳೂರಿನ ಶಾಂತಿನಗರದಲ್ಲಿರುವ ರಾಜ್ಯ ಸಾರಿಗೆ ಪ್ರಾಧಿಕಾರ (ಆರ್ಟಿಒ) ಕಚೇರಿ ಮತ್ತು ರಾಜ್ಯದ ಇತರ ಭಾಗಗಳಲ್ಲಿನ ಆರ್ಟಿಒಗಳಲ್ಲಿ ಪಾವತಿಸಲಾಗುತ್ತದೆ. ಆದರೆ, ಗುರುವಾರದಿಂದ ನಾಲ್ಕು ದಿನಗಳ ಕಾಲ ರಜೆ ಇರುವ ಕಾರಣ ಆರ್ಟಿಒ ಕಚೇರಿಗಳು ಕಾರ್ಯನಿರ್ವಹಿಸುತ್ತಿಲ್ಲ. ರಾಜ್ಯದಲ್ಲಿ ಆನ್ಲೈನ್ನಲ್ಲಿ ಪರವಾನಗಿ ಪಡೆಯುವ ವ್ಯವಸ್ಥೆಯೂ ಇಲ್ಲ. ಇದರಿಂದಾಗಿ, ಟ್ಯಾಕ್ಸಿ ಚಾಲಕರು ಈ ಪರವಾನಗಿಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಅಲ್ಲದೆ, ಚೆಕ್ಪೋಸ್ಟ್ಗಳಲ್ಲಿ ವಿಶೇಷ ಪರವಾನಗಿ ಪಡೆಯುವ ಸೌಲಭ್ಯವಿತ್ತು. ಹೀಗಾಗಿ ಟ್ಯಾಕ್ಸಿ ಚಾಲಕರು ಗೋವಾ ಗಡಿಯಲ್ಲಿಯೇ ಲೈಸೆನ್ಸ್ ಪಡೆಯಲು ತೆರಳಿದ್ದರು. ಆದರೆ, ಅಲ್ಲಿ ಏಪ್ರಿಲ್ ೧ರಿಂದ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಗಳಲ್ಲಿ ಆನ್ಲೈನ್ ಮೂಲಕ ವಿಶೇಷ ಪರವಾನಗಿಗಳನ್ನು ನೀಡಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಇನ್ನೂ ಆ ಸೌಲಭ್ಯ ಜಾರಿಗೆ ಬಂದಿಲ್ಲ. ಪ್ರವಾಸಿಗರು ಗೋವಾಕ್ಕೆ ಪ್ರವೇಶಿಸಲು ದಂಡದAತಹ ದೊಡ್ಡ ಮೊತ್ತವನ್ನು ಪಾವತಿಸಬೇಕಾಗಿದೆ.
ಮೀನು ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ: ಐವರು ಸಾವು
ಮಂಗಳೂರು, ಏ. ೧೮: ಎಸ್ಇಝೆಡ್ (ವಿಶೇಷ ಆರ್ಥಿಕ ವಲಯ) ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೀನಿನ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿ ಐವರು ಕಾರ್ಮಿಕರು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮಂಗಳೂರಿನಲ್ಲಿ ಭಾನುವಾರ ರಾತ್ರಿ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಮಹಮ್ಮದ್ ಸಮೀರುಲ್ಲಾ, ಉಮರ್ ಫಾರೂಕ್, ನಿಜಾಮುದ್ದೀನ್ ಅಲಿಸ್, ಮಿರಾಜುಲ್ ಇಸ್ಲಾಂ ಮತ್ತು ಸರಾಫತ್ ಅಲಿ ಮೃತಪಟ್ಟ ಐವರು ವ್ಯಕ್ತಿಗಳಾಗಿದ್ದಾರೆ. ಹಸನ್ ಅಲಿ, ಕರಿಬುಲ್ಲಾ ಮತ್ತು ಅಫ್ತಲ್ ಮಲಿಕ್ ಸೇರಿದಂತೆ ಹಲವು ಕಾರ್ಮಿಕರ ಸ್ಥಿತಿ ಗಂಭೀರವಾಗಿದ್ದು, ಅಸ್ವಸ್ಥ ಕಾರ್ಮಿಕರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದುರಂತ ನಡೆದ ಪ್ರದೇಶವು ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಗೆ ಬರಲಿದ್ದು, ಸ್ಥಳಕ್ಕೆ ಡಿಸಿಪಿ ಹರಿರಾಂ ಶಂಕರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಭಾನುವಾರ ರಾತ್ರಿ ಕಾರ್ಮಿಕನೊಬ್ಬ ಮೀನಿನ ತ್ಯಾಜ್ಯದ ಟ್ಯಾಂಕ್ ಶುಚಿಗೊಳಿಸಲು ಕೆಳಗಿಳಿದಿದ್ದು, ಈ ವೇಳೆ ಅಸ್ವಸ್ಥಗೊಂಡು ಬಿದ್ದಿದ್ದಾನೆ. ಆತನನ್ನು ರಕ್ಷಣೆ ಮಾಡಲೆಂದು ಹೋದ ೮ ಮಂದಿಯ ಉಸಿರಾಟ ಕೂಡ ಏರುಪೇರಾಗಿದೆ ಎನ್ನಲಾಗಿದೆ. ಕಾರ್ಖಾನೆಗೆ ವಿವಿಧೆಡೆಯಿಂದ ಬರುವ ಮೀನಿನ ತ್ಯಾಜ್ಯವನ್ನು ಈ ಬೃಹತ್ ಟ್ಯಾಂಕ್ನಲ್ಲಿ ಮೊದಲು ಇರಿಸಿ, ಶುದ್ಧೀಕರಿಸಲಾಗುತ್ತಿತ್ತು. ಇದು ಸುಮಾರು ೨೦ ಅಡಿ ಆಳವಾಗಿದೆ. ಮೀನಿನ ತ್ಯಾಜ್ಯವನ್ನು ಸಂಸ್ಕರಿಸುವಾಗ ಬಳಕೆ ಮಾಡುವ ವಿಷಾನಿಲ ಸೋರಿಕೆಯಿಂದ ಈ ದುರ್ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಕೋಮು ಉದ್ವಿಗ್ನತೆಯ ನಡುವೆ ಸಿಎಂ ಬೊಮ್ಮಾಯಿಗೆ ಮೀಸಲಾತಿ ಬಿಸಿ
ಬೆಂಗಳೂರು, ಏ. ೧೮: ರಾಜ್ಯದಲ್ಲಿ ಕೋಮುಗಲಭೆ, ಉದ್ವಿಗ್ನತೆ, ಸಚಿವ ಸಂಪುಟ ವಿಸ್ತರಣೆಯ ಗದ್ದಲದ ಜತೆಗೆ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ೨ಎ ಮೀಸಲಾತಿ ನೀಡುವ ಭರವಸೆ ವಿಚಾರವನ್ನು ನಿಭಾಯಿಸುವ ಸವಾಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮುಂದಿದ್ದು, ತಾ. ೨೧ ಅಂತಿಮ ಗಡುವು ಎಂದು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೋಮವಾರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಗಡುವು ಮುಗಿದಿದ್ದು, ತಾ. ೨೧ ರೊಳಗೆ ಭರವಸೆ ಈಡೇರಿಸದಿದ್ದರೆ ಅಂದಿನಿAದ ಮತ್ತೆ ಧರಣಿ ಆರಂಭಿಸುವುದಾಗಿ ಘೋಷಿಸಿದ್ದಾರೆ. ೨ಎ ಮೀಸಲಾತಿ ನೀಡಲು ಸರ್ಕಾರಕ್ಕೆ ಏಪ್ರಿಲ್ ೨೧ರ ಅಂತಿಮ ಗಡುವು ನೀಡಲಾಗಿದೆ. ಇದು ಮಾಡು ಇಲ್ಲವೇ ಮಡಿ ಹೋರಾಟ. ಸ್ಪಂದಿಸದಿದ್ದರೆ, ಮುಂದಾಗುವ ಅನಾಹುತಗಳಿಗೆ ರಾಜ್ಯ ಸರ್ಕಾರವೇ ಹೊಣೆ ಎಂದೂ ಎಚ್ಚರಿಸಿದರು.