ಸೋಮವಾರಪೇಟೆ, ಏ. ೧೭: ಕಾರ್ಮಿಕ ಇಲಾಖೆಯ ಮೂಲಕ ನೀಡಲಾಗುವ ವೃತ್ತಿಪರಿಕರ ಕಿಟ್‌ಗಳನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಫಲಾನಿಭವಿಗಳಿಗೆ ವಿತರಿಸಿದರು.

ತಮ್ಮ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಮಿಕರು ಸಮಾಜದ ಜೀವಾಳವಾಗಿದ್ದು, ಅವರುಗಳೂ ಸಹ ಸ್ವಾಯತ್ತ ಜೀವನ ನಡೆಸಬೇಕು, ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ರಾಜ್ಯಸರ್ಕಾರ ಹಲವು ಯೋಜನೆಯ ಮೂಲಕ ನೆರವಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು ೧೬,೯೯೧ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ವಿವಿಧ ಕಿಟ್ಟ್ ಗಳನ್ನು ವಿತರಿಸಲಾಗಿದೆ. ಮಾರ್ಚ್ ಅಂತ್ಯಕ್ಕೆ ೪೩೫ ಮಂದಿ ಫಲಾನು ಭವಿಗಳಿಗೆ ವಿವಾಹ, ವಿದ್ಯಾಭ್ಯಾಸ ಸೇರಿದಂತೆ ವಿವಿಧ ಯೋಜನೆಗಳಿಂದ ರೂ. ೭೮ ಲಕ್ಷ ವಿತರಿಸಲಾಗಿದೆ ಎಂದರು. ಈ ಸಂದರ್ಭ ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ, ತಾಲೂಕು ಕಾರ್ಮಿಕ ನಿರೀಕ್ಷಕಿ ಲೀನಾ ಸೇರಿದಂತೆ ಇತರರು ಹಾಜರಿದ್ದರು.