ಮಡಿಕೇರಿ, ಏ. ೧೭: ಮಡಿಕೇರಿ ತಾಲೂಕಿನ ಅರ್ವತ್ತೋಕ್ಲು ಗ್ರಾಮದಲ್ಲಿ ವರ್ಷಂಪ್ರತಿ ನಡೆಯುವ ಚೌಂಡಿಯಮ್ಮೆ ಉತ್ಸವ ಶ್ರದ್ಧಾಭಕ್ತಿ ಮತ್ತು ಸಡಗರದಿಂದ ತಾ. ೯ ಮತ್ತು ೧೦ ರಂದು ಜರುಗಿತು.

ತಾ. ೯ ರಂದು ಜಬ್ಬಂಡ ವಾಡೆಯಿಂದ ಶಾಸ್ತಾವು ಮತ್ತು ತೆನ್ನಿರಾ ವಾಡೆಯಿಂದ ಅಯ್ಯಪ್ಪ ಮುಡಿ ತೆರೆಗಳು ಚಂಡೆ, ವಾಲಗ, ಒಡ್ಡೋಲಗದ ಸಮೇತ ವಿರುದ್ಧ ದಿಕ್ಕಿನಿಂದ ತೆರಳಿ ದೇವರ ಬನದ ಸಮೀಪ ಜೋಡಿಯಾಗಿ ಬನ ಪ್ರವೇಶಿಸಿ ದೈವಿಕ ಕಾರ್ಯಗಳನ್ನು ಪೂರ್ಣಗೊಳಿಸಲಾಯಿತು.

ತಾ. ೧೦ ರಂದು ಬೆಳಿಗ್ಗೆ ಅಪ್ಪಚ್ಚು ಮಂದಣ್ಣ ತೆರೆ, ನುಚ್ಚಟ ತೆರೆ, ನರಿಪೂದ ತೆರೆ ಆದ ನಂತರ ಐತಿಹಾಸಿಕ ಮತ್ತು ಪಾರಂಪರಿಕ ಕಲಿಯಾಟ ಅಜ್ಜಪ್ಪ ತೆರೆ ನಡೆಯಿತು. ಕಲಿಯಾಟ ಅಜ್ಜಪ್ಪ ತೆರೆ ತಾನು ಹುಟ್ಟಿ ಬೆಳೆದು ಅರುವತ್ತನಾಲ್ಕು ಕಲೆಗಳಲ್ಲಿ ಪಾರಂಗತನಾಗಿ ಅಪ್ರಮಿತ ಸಾಹಸಿಯಾಗಿದ್ದು, ಯುದ್ಧದಲ್ಲಿ ಶತ್ರುಪಡೆಗಳನ್ನು ಸಂಹರಿಸಿದ್ದು. ಕೊನೆಯಲ್ಲಿ ಕರ್ಣೆಂಬಾಹು ರಾಜನ ಆಮಿಷಕ್ಕೆ ಒಳಗಾಗಿ ಕೀಕಂಡ ಅಜ್ಜಿ ಮೋಸದಿಂದ ವಿಷ ಕುಡಿಸಿದ ಸ್ವಾರಸ್ಯಕರ ಕತೆಯನ್ನು ಗ್ರಾಮಸ್ಥರಿಗೆ ಹೇಳಿ ಪೌರಾಣಿಕತೆಯ ಬಗ್ಗೆ ಬೆಳಕು ಚೆಲ್ಲಲಾಯಿತು.

ಕೊನೆಗೆ ಮೇಲೇರಿ ಚೌಂಡಿ ತೆರೆ ಉತ್ಸವ ನಡೆಯಿತು. ಮಧ್ಯಾಹ್ನ ಅನ್ನದಾನ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಚೌAಡಿಯಮ್ಮೆಯ ಕಾವುಕಾರರಾಗಿ ಪುತ್ತೇರಿರ ಕುಟುಂಬದವರು ಮತ್ತು ದೇಕಬ್ಬೆ ಕುಟುಂಬಸ್ಥರು. ಕಲಿಯಾಟ ಅಜ್ಜಪ್ಪನ ಕಾವುಕಾರರಾಗಿ ಕೋಳುಮಾಡಂಡ ಕುಟುಂಬಸ್ಥರು ಧಾರ್ಮಿಕ ಕಾರ್ಯ ನಿರ್ವಹಿಸಿದರು.