ಸಿದ್ದಾಪುರ, ಏ. ೧೬: ವೀರಾಜಪೇಟೆ ತಾಲೂಕು ಅಟಲ್ ಜೀ ಸ್ನೇಹಿತರ ಬಳಗದ ವತಿಯಿಂದ ನಿರ್ಮಿಸಲಾದ ಮನೆಯನ್ನು ಶಾಸಕ ಕೆ.ಜಿ ಬೋಪಯ್ಯ ಉದ್ಘಾಟಿಸಿದರು.
ಮಾಲ್ದಾರೆ ಗ್ರಾಮದ ವಿಠಲ ಎಂಬುವವರು ಕಳೆದ ಹಲವು ವರ್ಷಗಳಿಂದ ಅಂಗ ವೈಫಲ್ಯದಿಂದ ಬಳಲುತ್ತಿದ್ದು, ಕುಟುಂಬದೊAದಿಗೆ ಪ್ಲಾಸ್ಟಿಕ್ ಹೊದಿಕೆಯ ಶೆಡ್ನಲ್ಲಿ ವಾಸವಾಗಿದ್ದರು. ಅಟಲ್ ಜೀ ಜನಸ್ನೇಹ ಕೇಂದ್ರದ ಪದಾಧಿಕಾರಿಗಳು ಕೋವಿಡ್ ಸಮಯದಲ್ಲಿ ಕಿಟ್ ವಿತರಿಸುವ ಸಂದರ್ಭ ವಿಠಲ ಅವರ ಪರಿಸ್ಥಿತಿಯನ್ನು ಗಮನಿಸಿದ್ದಾರೆ. ಬಳಿಕ ಸ್ನೇಹಿತರ ಬಳಗದ ಸದಸ್ಯರು ಸೇರಿ ವಿಠಲ ಅವರಿಗೆ ಮನೆ ನಿರ್ಮಿಸಲು ಮುಂದಾಗಿ ಇದೀಗ ನಿರ್ಮಿಸಿದ ಮನೆಯನ್ನು ಉದ್ಘಾಟಿಸಲಾಯಿತು.
ಈ ಸಂದರ್ಭ ಮಾತನಾಡಿದ ಶಾಸಕ ಕೆ.ಜಿ ಬೋಪಯ್ಯ, ಸಂಕಷ್ಟದಲ್ಲಿದ್ದ ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಸಮಿತಿಯು ಮಾದರಿಯಾಗಿದೆ. ಸಂಘಟನೆಯ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯ.ಮಾಲ್ದಾರೆ ವ್ಯಾಪ್ತಿಯಲ್ಲಿ ಹುಲಿ ಓಡಾಡುತ್ತಿದ್ದು, ಹಾಡಿಯ ನಿವಾಸಿಗಳು ಜಾಗೃತರಾಗಿರಬೇಕು ಎಂದರು.
ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಎಲ್ಲವನ್ನೂ ಜನಪ್ರತಿನಿಧಿಗಳು ಅಥವಾ ಸರಕಾರ ಮಾಡಲು ಸಾಧ್ಯವಿಲ್ಲ. ಕಡು ಬಡತನದಲ್ಲಿರುವವರನ್ನು ಗುರುತಿಸಿ, ಮನೆ ನಿರ್ಮಾಣ ಮಾಡಿರುವುದು ಮಾದರಿ ಕೆಲಸ. ವೀರಾಜಪೇಟೆ ಪಟ್ಟಣದಲ್ಲಿ ಡ್ರಗ್ಸ್ ಮಾಫಿಯ ಹೆಚ್ಚುತ್ತಿದ್ದು, ಯುವಕ ಸಂಘಗಳು ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದರು.
ಈ ಸಂದರ್ಭ ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಗಿರೀಶ್ ಗಣಪತಿ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಪಟ್ರಪಂಡ ರಘು ನಾಣಯ್ಯ, ಮಾಲ್ದಾರೆ ಗ್ರಾ.ಪಂ ಅಧ್ಯಕ್ಷ ಸಮೀರ್, ಅಟಲ್ ಜೀ ಸ್ನೇಹಿತರ ಬಳಗದ ಅಧ್ಯಕ್ಷ ಎಂ.ಬಿ ಚಂದ್ರ, ಪದಾಧಿಕಾರಿಗಳಾದ ವಿನು, ಕೆ.ಕೆ ಚಂದ್ರ, ಸುರೇಶ್, ಪ್ರದೀಪ್, ನಿತಿನ್ ಸೇರಿದಂತೆ ಇನ್ನಿತರರು ಇದ್ದರು.