'ಮಡಿಕೇರಿ, ಏ. ೧೬ : ವೀರಾಜಪೇಟೆಯಲ್ಲಿ ವಿಶ್ವಕಲಾ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ವೀರಾಜಪೇಟೆಯ ತೆಲುಗರ ಬೀದಿಯ ಶಿಶುವಿಹಾರದ ಮುಂಬಾಗದಲ್ಲಿ ವೀರಾಜಪೇಟೆಯ ವಕೀಲ ಟಿ.ಪಿ. ಕೃಷ್ಣ ಮತ್ತು ಉದ್ಯಮಿ ಅರುಣ್ ಅವರು, ಲಿಯಾನಾರ್ಡೋ ಡಾ. ವಿನ್ಸಿಯ ಚಿತ್ರಕ್ಕೆ ಬಣ್ಣ ಹಚ್ಚುವ ಮೂಲಕ ವಿಶ್ವ ಕಲಾ ದಿನಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಟಿ.ಪಿ. ಕೃಷ್ಣ, ವಿಶ್ವಕಲಾ ದಿನದ ಆಚರಣೆಯ ಮೂಲಕ ಚಿತ್ರಕಲೆಯ ದಿಗ್ಗಜ ಲಿಯಾನಾರ್ಡೋ ಡಾ. ವಿನ್ಸಿ ಸ್ಮರಣೆ ಶ್ಲಾಘನೀಯ ಎಂದರು. ಕಾರ್ಯಕ್ರಮದ ಆಯೋಜಕ ಚಿತ್ರಕಲಾವಿದ ಬಿ.ಆರ್. ಸತೀಶ್ ಮಾತನಾಡಿ, ಚಿತ್ರಕಲೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಾನಸಿಕ ನೆಮ್ಮದಿ ದೊರಕುತ್ತದೆ. ಹಲವಾರು ಭಾವಾಭಿವ್ಯಕ್ತಿಗೆ ಕಲೆ ಸಹಕಾರಿ ಎಂದರು.
ಬಹತ್ ಕ್ಯಾನ್ವಸ್‌ನಲ್ಲಿ ಅಕ್ರಿಲಿಕ್ ಮಾಧ್ಯಮದಲ್ಲಿ ಬಣ್ಣವನ್ನು ಎರಚುವ ಮೂಲಕ ಸುಂದರವಾದ ಪ್ರಕೃತಿ ಚಿತ್ರವನ್ನು ಬಿ.ಆರ್. ಸತೀಶ್ ಕೇವಲ ೧೦ ನಿಮಿಷದಲ್ಲಿಯೇ ಚಿತ್ರಿಸಿ ಶ್ಲಾಘನೆಗೆ ಪಾತ್ರರಾದರು.
ಮಾರಿಯಮ್ಮ ದೇವಸ್ಥಾನದ ಅರ್ಚಕ ರವಿಕುಮಾರ್, ಚಿತ್ರ ಕಲಾವಿದ, ಶಿಕ್ಷಕ ಕ್ಲಿಫರ್ಡ್ ಡಿ ಮೆಲ್ಲೊ, ಪತ್ರಕರ್ತರಾದ ಕಿಶೋರ್, ಯುವರಾಜ್ ಕೃಷ್ಣ, ರಂಜಿತ್, ಚಿತ್ರಕಲಾವಿದರಾದ ಯಶಸ್ವಿನಿ, ಪಯಸ್ವಿನಿ, ಕೆ.ಎನ್. ದಮಯಂತಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಚಿತ್ರ ರಚನೆಯಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳಿಗೆ ಚಿತ್ರಕಲಾ ದಿನದ ಪ್ರಯುಕ್ತ ಡ್ರಾಯಿಂಗ್ ಶೀಟ್, ಕ್ರಯೋನ್ಸ್, ಪೆನ್ಸಿಲ್ ನೀಡಲಾಯಿತು.