ಮಡಿಕೇರಿ, ಏ. ೧೬: ಭಾರತೀಯ ಜನತಾ ಪಾರ್ಟಿ ಮುಖಂಡ ಬಾಲಚಂದ್ರ ಕಳಗಿ ಸ್ಮರಣಾರ್ಥ ಸಂಪಾಜೆಯ ಆದರ್ಶ ಫ್ರೆಂಡ್ಸ್ ಚೆಡಾವು ಇವರ ಆಶ್ರಯದಲ್ಲಿ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ದೊರೆಯಿತು.

ಸಂಪಾಜೆ ಪಯಸ್ವಿನಿ ಸಹಕಾರಿ ಸಂಘದ ಬಾಲಚಂದ್ರ ಕಳಗಿ ವೇದಿಕೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಆದರ್ಶ ಫ್ರೆಂಡ್ಸ್ ಚೆಡಾವು ಇದರ ಅಧ್ಯಕ್ಷ ಉದಯ ಹನಿಯಡ್ಕ ಅಧ್ಯಕ್ಷತೆಯಲ್ಲಿ ವೆಂಕಪ್ಪ ಕಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಶ್ಚಿಮ ಘಟ್ಟ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ, ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಬಿಜೆಪಿ ವಕ್ತಾರ ಮಹೇಶ್ ಜೈನಿ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನಿರ್ಮಲಾ ಭರತ್, ಸಂಪಾಜೆ ಪಯಸ್ವಿನಿ ಸಹಕಾರಿ ಸಂಘದ ಅಧ್ಯಕ್ಷರಾದ ಎನ್.ಸಿ. ಅನಂತ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಜಯಾನಂದ ಸಂಪಾಜೆ ಮತ್ತು ಕೊರೊನಾ ವಾರಿಯರ್ಸ್ ಆಗಿ ಶ್ರಮಿಸಿದ ಲೀಲಾಧರ ನೂಜೆಲು ಅವರನ್ನು ಸನ್ಮಾನಿಸಲಾಯಿತು. ಲೀಲಾವತಿ ಕಲಾಯಿ ಪ್ರಾರ್ಥಿಸಿದರು. ಯಶೋಧರ ಬಿ.ಜೆ. ಸ್ವಾಗತಿಸಿದರು. ನಿರಂತ್ ದೇವಸ್ಯ ನಿರೂಪಿಸಿ, ಹರೀಶ್ ನೂಜೇಲು ವಂದಿಸಿದರು. ಸಂಪಾಜೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಲ್ಪಟ್ಟಿರುವ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಸಮಾರೋಪ ತಾ. ೧೭ ರಂದು (ಇಂದು) ನಡೆಯಲಿದೆ.