ಮಡಿಕೇರಿ,ಏ.೧೬; ಶ್ರೀರಾಮನ ಪರಮ ಭಕ್ತನಾಗಿರುವ ಶ್ರೀ ಆಂಜನೇಯನ ಜಯಂತಿಯನ್ನಿAದು ನಾಡಿನಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಶ್ರೀರಾಮ, ಆಂಜನೇಯ ದೇವಾಲಯ ಸೇರಿದಂತೆ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಗಳನ್ನು ಹಮ್ಮಿಕೊಳ್ಳಲಾಗಿತ್ತು. ಆಂಜನೇಯ ದೇವಾಲಯಗಳಲ್ಲಿ ಜಪ, ಹೋಮ, ಹವನಾದಿ ಕಾರ್ಯಗಳನ್ನು ನೆರವೇರಿಸಲಾಯಿತು.
ಜಿಲ್ಲಾ ಕೇಂದ್ರ ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದ ಬಳಿ ಇರುವ ಶ್ರಿ ಆಂಜನೇಯ ದೇವಾಲಯದಲ್ಲಿ ವಿಶ್ವ ಹಿಂದೂ ಪರಿಷದ್, ಭಜರಂಗದಳ, ದುರ್ಗಾವಾಹಿನಿ ಹಾಗೂ ಕೊಡಗು ಜಿಲ್ಲಾ ಮಾತೃ ಮಂಡಳಿ ವತಿಯಿಂದ ಹನುಮ ಜಯಂತಿ ಪ್ರಯುಕ್ತ ರಾಮತಾರಕ, ಹವನ, ಪವಮಾನ ಕಲಶಾಭಿಷೇಕ, ಭಜನಾ ಕಾರ್ಯಗಳು ನೆರವೇರಿದವು. ಮಧ್ಯಾಹ್ನ ಮಹಾಪೂಜೆಯ ಬಳಿಕ ನೆರೆದಿದ್ದ ಭಕ್ತರಿಗೆ ತೀರ್ಥ ವಿನಿಯೋಗ ಹಾಗೂ ಪ್ರಸಾದವಾಗಿ ಪುಳಿಯೊಗರೆ, ಕೋಸಂಬರಿ, ಮಜ್ಜಿಗೆ ವಿತರಣೆ ಮಾಡಲಾಯಿತು. ನಗರ ಸಭಾ ಪೌರಾಯುಕ್ತ ಹೆಚ್.ವಿ. ರಾಮದಾಸ್ ಮಹಾಪೂಜೆಯಲ್ಲಿ ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿದರು. ಭಜನೆಯಲ್ಲಿ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.
ಶ್ರೀ ಓಂಕಾರೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ರಮೇಶ್ ಹೊಳ್ಳ, ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ, ಪ್ರಮುಖರುಗಳಾದ ಸುರೇಶ್ ಮುತ್ತಪ್ಪ, ಪುದಿಯೊಕ್ಕಡ ರಮೇಶ್, ಕವನ್ ಕಾವೇರಪ್ಪ, ಎಸ್.ಎಸ್. ಸಂಪತ್ಕುಮಾರ್, ಬಿ.ಕೆ.ಜಗದೀಶ್ ಇನ್ನಿತರರು ಉಸ್ತುವಾರಿ ವಹಿಸಿದ್ದರು.
ವೀರಾಜಪೇಟೆ: ನಗರದ ಛತ್ರಕೆರೆ ಬಳಿಯ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಆಚರಿಸಲಾಯಿತು. ಇಂದು ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು. ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ನಡೆಯಿತು. ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.