ಸುಂಟಿಕೊಪ್ಪ, ಏ. ೧೬: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೋರ್ವರು ವಾಹನ ಚಾಲನೆ ಕಲಿಯುವ ಧಾವಂತದಲ್ಲಿ ಕಸವಿಲೇವಾರಿ ವಾಹನವನ್ನು ಹಳ್ಳಕ್ಕುರುಳಿಸಿ ಗಾಯಗೊಂಡ ಘಟನೆ ನಡೆದಿದೆ.
ಐಗೂರು ಗ್ರಾಮ ಪಂಚಾಯಿತಿಯ ಪಿಡಿಓ ಯಾದವ್ ಅವರು ಪಂಚಾಯಿತಿಯ ಕಸವಿಲೇವಾರಿ ಮಾಡುವ ‘ಸ್ವಚ್ಛ’ ವಾಹಿನಿ ಗಾಡಿಯನ್ನು ಚಾಲಕ ರಮೇಶ ಅವರು ಯಡವನಾಡಿಗೆ ಕೊಂಡೊಯ್ಯುವಾಗ ಅವರೊಂದಿಗೆ ತೆರಳಿ ಕಸವಿಲೇವಾರಿ ಮಾಡಿ ಹಿಂತಿರುಗುತ್ತಿದ್ದ ವೇಳೆ ಚಾಲಕನನ್ನು ಬದಿಗೆ ಕೂರಿಸಿ ತಾನು ವಾಹನ ಚಾಲನೆ ಕಲಿಯುವ ಭರದಲ್ಲಿ ವಾಹನ ಚಾಲನೆಗೆ ಮುಂದಾಗಿ ಕಸವಿಲೇವಾರಿ ಗಾಡಿಯನ್ನು ಐಗೂರು ಮುತ್ತಪ್ಪ ದೇವಾಲಯದ ಹಳ್ಳಕ್ಕೆ ಬೀಳಿಸಿ ಗಾಯಗೊಂಡಿದ್ದಾರೆ. ಪಂಚಾಯಿತಿಯ ಸ್ವಚ್ಛ ವಾಹಿನಿ (ಕೆಎ೧೨.ಜಿ.೧೦೬೧) ವಾಹನಕ್ಕೆ ಹಾನಿಯಾಗಿದ್ದು, ಅಂದಾಜು ರೂ. ೫೦,೦೦೦ ನಷ್ಟವಾಗಿದೆ ಎನ್ನಲಾಗಿದೆ. -ಜಿ.ಕೆ. ಬಾಲಕೃಷ್ಣ