*ಸಿದ್ದಾಪುರ, ಏ. ೧೪: ವಾಲ್ನೂರು, ತ್ಯಾಗತ್ತೂರು ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಅವೈಜ್ಞಾನಿಕವಾಗಿರುವ ರೈಲ್ವೆ ಕಂಬಿ ಬೇಲಿಯನ್ನು ದಾಟಿ ಬರುತ್ತಿರುವ ಕಾಡಾನೆಗಳು ಸುತ್ತಮುತ್ತಲ ತೋಟಗಳನ್ನು ನಾಶ ಮಾಡಿವೆ.
ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನೆಪ ಮಾತ್ರಕ್ಕೆ ನಡೆಯುತ್ತಿದೆ. ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಗಜ ಹಿಂಡು ಸ್ಥಳಾಂತರಗೊಳ್ಳುತ್ತಿವೆಯೇ ಹೊರತು ಕಾಡು ಸೇರುತ್ತಿಲ್ಲ. ರೈಲ್ವೆ ಕಂಬಿ ಬೇಲಿ ಕಾಡಾನೆಗಳಿಗೆ ವರದಾನವಾಗಿದೆ, ಬೇಲಿಯ ಮೂಲಕವೇ ತೋಟಗಳಿಗೆ ನುಗ್ಗುತ್ತಿವೆ. ಮೇಲೆ ಮತ್ತು ಕೆಳಗೆ ಮಾತ್ರ ಕಂಬಿ ಅಳವಡಿಸಲಾಗಿದ್ದು, ಮಧ್ಯ ಭಾಗದಿಂದ ನುಸುಳಿ ಊರು ಸೇರುತ್ತಿವೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ವಾರದಿಂದ ಈ ಭಾಗದ ತೋಟಗಳಲ್ಲಿ ಅಡಿಕೆ ಮತ್ತು ಬಾಳೆ ಕೃಷಿಯನ್ನು ಕಾಡಾನೆಗಳು ನಾಶ ಮಾಡಿವೆ ಎಂದು ತಿಳಿಸಿರುವ ಗ್ರಾ.ಪಂ ಸದಸ್ಯ ಹಾಗೂ ಕೃಷಿಕ ಭುವನೇಂದ್ರ ಬೇಲಿಯ ಮಧ್ಯ ಭಾಗಕ್ಕೂ ಅಡ್ಡಲಾಗಿ ಕಂಬಿ ಅಳವಡಿಸಿದರೆ ಮಾತ್ರ ಕಾಡಾನೆ ದಾಳಿಯನ್ನು ತಡೆಯಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.