ಪೆರಾಜೆ, ಏ. ೧೫: ರೈತರ ಬೇಡಿಕೆಗಳು, ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಲು ಜಿಲ್ಲೆಯ ನಾನಾ ಭಾಗದಲ್ಲಿ ಘಟಕಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ ಗಡಿಭಾಗವಾದ ಪೆರಾಜೆ ಯಲ್ಲಿ ನೂತನವಾಗಿ ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಘಟಕ ಅಸ್ತಿತ್ವಕ್ಕೆ ಬಂದಿದೆ.
ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕ ಮತ್ತು ಪೆರಾಜೆ ಗ್ರಾಮ ಘಟಕದ ಸಂಯುಕ್ತ ಆಶ್ರಯದಲ್ಲಿ ಪೆರಾಜೆಯ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ರೈತ ಸಭೆ ಮತ್ತು ಸದಸ್ಯತ್ವ ಹಾಗೂ ಘಟಕ ಸ್ಥಾಪನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರು ರೈತರು ಅನ್ನದಾತರು, ಭೂತಾಯಿಯನ್ನು ನಂಬಿಕೊAಡು ಜೀವನ ಸಾಗಿಸುತ್ತಿ ದ್ದಾರೆ. ಪರಿಸರದಲ್ಲಾಗುವ ಏರುಪೇರುಗಳು, ವನ್ಯಮೃಗಗಳ ಹಾವಳಿ, ಬೆಳೆ ಹಾನಿ, ಬೆಂಬಲ ಬೆಲೆ ಹೀಗೆ ನಾನಾತರಹದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ರಾಜಕೀಯ ರಹಿತವಾದ ಹೋರಾಟದಿಂದ ಮಾತ್ರ ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳ ಬಹುದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಭಾಗದಲ್ಲೂ ರೈತ ಸಂಘದ ಘಟಕಗಳ ಸ್ಥಾಪನೆಯಾಗುತ್ತಿದೆ. ರೈತರ ಬೆಳೆಗಾರರ ಸಂಘಟಿತ ಹೋರಾಟ ದಿಂದ ರೈತ ಸಮಸ್ಯೆಗಳಿಗೆ ಉತ್ತರವನ್ನು ನಿರೀಕ್ಷಿಸಬಹುದಾಗಿದೆ ಎಂದರು. ಜಿಲ್ಲೆಯ ರೈತರ ಬಹುಕಾಲದ ಬೇಡಿಕೆಯಾದ ಪಂಪ್ಸೆಟ್ಗಳಿಗೆ ೧೦ ಹೆಚ್.ಪಿ. ವಿದ್ಯುತ್ ಉಚಿತವಾಗಿ ಪೂರೈಕೆ ಗೊಳಿಸಲು ಅನೇಕ ಹೋರಾಟ ಗಳನ್ನು ಮಾಡಬೇಕಾಗಿ ಬಂದಿತ್ತು. ರಾಜ್ಯ ಸರ್ಕಾರವು ಇತ್ತೀಚೆಗೆ ರೈತರ ಬೇಡಿಕೆಯನ್ನು ಸಾಕಾರ ಗೊಳಿಸಿದೆ. ಇದು ಕರ್ನಾಟಕ ರಾಜ್ಯ ರೈತ ಸಂಘದ ಸಂಘಟಿತ ಹೋರಾಟಕ್ಕೆ ಸಂದ ಪ್ರತಿಫಲವಾಗಿದೆ. ಸಂಘಕ್ಕೆ ಹೆಚ್ಚು ಸದಸ್ಯರು ಸೇರ್ಪಡೆಯಾಗ ಬೇಕು; ಸಂಘವು ಬಲವರ್ಧನೆ ಯಾಗಬೇಕು ಎಂದು ಹೇಳಿದರು.
ದ.ಕ. ಜಿಲ್ಲಾ ರೈತ ಸಂಘದ ಅಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್ ಮಾತನಾಡಿ, ರಾಜ್ಯದಲ್ಲಿ ಚುನಾವಣೆ ಗಳು ನಡೆದರೂ ನಾಯಕರುಗಳು ಮಾತ್ರ ರೈತ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ್ಲ. ಇಂದು ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ದೊರಕದೆ ಸಂಕಷ್ಟದಲ್ಲಿ ಜೀವನ ಸಾಗಿಸುವ ಮಟ್ಟಕ್ಕೆ ಮರಳಿದ್ದಾನೆ. ರೈತರು ಭೂತಾಯಿಯ ಒಡಲು ನಂಬಿ ಬದುಕು ಸಾಗಿಸುವ ಬದಲು ಭೂಮಿ ಬಿಟ್ಟು ಕೂಲಿ ಕೆಲಸದತ್ತ ಮುಖ ಮಾಡಿದ್ದಾರೆ. ಈ ಭಾಗದಲ್ಲಿ ಎಲೆ ರೋಗ ಕಾಣಿಸಿಕೊಂಡು ಇಂದಿನ ವರೆಗೆ ಯಾವುದೇ ರೀತಿಯ ರೋಗಕ್ಕೆ ಜೌಷಧಿ ಕಂಡುಕೊಳ್ಳುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಫಲ ವಾಗಿದೆ. ಬಜೆಟ್ ಮಂಡನೆ ಯಲ್ಲಿಯೂ ಸಂಶೋಧನೆಗೆ ಸೀಮಿತ ಗೊಳಿಸುವಂತೆ ಅನುದಾನಗಳನ್ನು ಬಿಡುಗೊಳಿಸಿದೆ. ನಲ್ವತ್ತು ವರ್ಷಗಳು ಕಳೆದರೂ ಸಂಶೋಧನೆ ಮುಂದುವರೆದಿದೆ. ಆದರೆ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇಲ್ಲಿ ರೈತನ ಬಾಳು ಶೂನ್ಯದತ್ತ ತೆರಳಿದೆ. ಮುಂದಿನ ದಿನಗಳಲ್ಲಿ ದ.ಕ ಜಿಲ್ಲೆ ಮತ್ತು ಕೊಡಗು ಜಿಲ್ಲಾ ಘಟಕಗಳ ಆಶ್ರಯದಲ್ಲಿ ಸಂಘಟಿತ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಹೇಳಿದರು.
ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ ಪ್ರಾಸ್ತಾವಿಕ ಭಾಷಣದಲ್ಲಿ ರೈತಪರ ಸಮಸ್ಯೆಗಳಿಗೆ ಸಂಘಟಿತ ಹೋರಾಟದಿಂದ ಮುಕ್ತಿ ಸಾಧ್ಯ. ರೈತ, ಬೆಳೆಗಾರರ ಸಮಸ್ಯೆಗಳನ್ನು ಗ್ರಾಮೀಣ ಮಟ್ಟದಿಂದ ತಾಲೂಕು ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಚರ್ಚೆ ಮಾಡಲು ಮತ್ತು ಪರಿಹಾರ ಕಂಡುಕೊಳ್ಳಲು ರೈತ ಸಂಘವು ಸಹಕಾರಿಯಾಗಿದೆ. ರೈತರ ಪ್ರತಿಯೊಂದು ಸಮಸ್ಯೆಗಳ ಬಗ್ಗೆ ಸಂಘದ ಕಚೇರಿಗೆ ಅರ್ಜಿ ಸಲ್ಲಿಸಿದಲ್ಲಿ ಸಂಘವು ಅರ್ಜಿಯನ್ನು ವಿಲೇವಾರಿ ಮಾಡಲು ಸ್ಪಂದಿಸುತ್ತದೆ. ಈ ನಿಟ್ಟಿನಲ್ಲಿ ಈ ಭಾಗದಲ್ಲಿ ಹೆಚ್ಚು ರೈತರು ಸಂಘದ ಸದಸ್ಯತ್ವ ಪಡೆದು ಸಂಘವನ್ನು ಬಲಪಡಿಸಿ. ಪ್ರಸ್ತುತ ಭಾಗದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಘಟಿತ ಹೋರಾಟಕ್ಕೆ ಮುಂದಾಗ ಬೇಕೆಂದು ಹೇಳಿದರು.
ಸಭೆಯನ್ನು ಉದ್ದೇಶಿಸಿ ಪೆರಾಜೆ ರೈತ ಸಂಘದ ಉಪಾಧ್ಯಕ್ಷ ಗೋಪಾಲ್ ಕೆ.ಸಿ. ಮಾತನಾಡಿ, ಈ ಭಾಗದಲ್ಲಿ ಹಳದಿ ರೋಗ ಕಾಣಿಸಿಕೊಂಡಿದ್ದು ರೈತರಿಂದ ಸ್ವಯಂ ಘೋಷಣಾ ಅರ್ಜಿ ಪಡೆದು ಕೃಷಿ ತಜ್ಞ ಪ್ರಕಾಶ್ ಕರಮುಡಿ ಅವರ ನಿರ್ದೇಶನದ ಮೇರೆಗೆ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಬೇಕು. ರಬ್ಬರ್ ಕೃಷಿಯನ್ನು ವಾಣಿಜ್ಯ ಬೆಳೆಯಿಂದ ಕೃಷಿ ಬೆಳೆಯಾಗಿ ಪರಿವರ್ತನೆ ಮಾಡಬೇಕು. ರಾಜ್ಯ ಸರ್ಕಾರವು ನೀಡಿರುವ ಹವಾಮಾನ ಆಧರಿಸಿ ಬೆಳೆ ನಷ್ಟ ಪರಿಹಾರ ಹಣ ಮತ್ತು ವಿಮಾ ಯೋಜನೆಯ ಹಣವು ಅತಿ ಕಡಿಮೆಯಾಗಿದೆ. ಪರಿಷ್ಕರಣೆ ಮಾಡುವ ಅಗತ್ಯತೆಯಿದೆ. ಗ್ರಾಮದ ರೈತರು ಎದುರಿಸುತ್ತಿರುವ ಕಾಡು ಪ್ರಾಣಿಗಳ ಹಾವಳಿಯಿಂದ ನಷ್ಟವಾದ ಕೃಷಿಗೆ ರಾಜ್ಯ ಸರ್ಕಾರವು ಸೂಕ್ತ ಪರಿಹಾರಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಸಂಚಾಲಕರಾದ ಸುಭಾಶ್ ಸುಬ್ಬಯ್ಯ ಅವರು ಸಂಘದ ತತ್ವ ಸಿದ್ಧಾಂತಗಳು ಹಾಗೂ ಪ್ರತಿಜ್ಞಾವಿಧಿ ಬೋಧನೆ ಮಾಡಿದರು. ಕಾರ್ಯಕ್ರಮದಲ್ಲಿ ಅಡಿಕೆೆ ಹಳದಿ ರೋಗದ ಸ್ವಯಂ ಘೋಷಿತ ಅರ್ಜಿಯನ್ನು ಬಿಡುಗಡೆಗೊಳಿಸ ಲಾಯಿತು. ಪೆರಾಜೆ ಗ್ರಾಮದ ೫೦ ಕ್ಕೂ ಅಧಿಕ ಮಂದಿ ಸದಸ್ಯತ್ವ ಪಡೆದು ಕೊಂಡರು. ಸಂಘ ಸೇರ್ಪಡೆಗೊಂಡ ರೈತರಿಗೆ ಸಂಘದ ವತಿಯಿಂದ ಹಸಿರು ಶಾಲು ಹೊದಿಸಿ ಬರಮಾಡಿ ಕೊಳ್ಳಲಾಯಿತು. ಕರ್ನಾಟಕ ರಾಜ್ಯ ರೈತ ಸಂಘ ಪೆರಾಜೆ ಗ್ರಾಮದ ನೂತನ ಆಡಳಿತ ಮಂಡಳಿಗೆ ಜಿಲ್ಲಾಧ್ಯಕ್ಷರು ಹಸಿರು ಭಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು.
ವೇದಿಕೆಯಲ್ಲಿ ಕ.ರಾ.ರೈತ ಸಂಘ ಪೆರಾಜೆ ಅಧ್ಯಕ್ಷ ಬಾಲಕೃಷ್ಣ ನಿಡ್ಯಮಲೆ, ಗೌರವಾಧ್ಯಕ್ಷ ಹರಿಶ್ಚಂದ್ರ ಮುಡ್ಕಜೆ, ಉಪಾಧ್ಯಕ್ಷ ಕೆ.ಸಿ. ಉಮೇಶ್ ಕುಂಬಳಚೇರಿ, ಕಾರ್ಯದರ್ಶಿ ಪುರುಷೋತ್ತಮ ಬಂಗಾರಕೋಡಿ, ಖಜಾಂಚಿ ಗಂಗಾಧರ ನೆಕ್ಕಿಲ ಅವರುಗಳು ಉಪಸ್ಥಿತರಿದ್ದರು.