ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ
ಬೆಂಗಳೂರು, ಏ. ೧೫: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಗೆ ಈಶ್ವರಪ್ಪ ಕಾರಣ ಎಂಬ ಆರೋಪದ ಹಿನ್ನೆಲೆ ಗ್ರಾಮೀಣಾಭಿವೃದ್ಧಿ ಸಚಿವ ಸ್ಥಾನಕ್ಕೆ ಕೆ.ಎಸ್. ಈಶ್ವರಪ್ಪ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಈ ಸಂದರ್ಭ ಈಶ್ವರಪ್ಪ ಅವರ ಅಪಾರ ಬೆಂಬಲಿಗರು ಘೋಷಣೆ ಕೂಗಿದರು. ಸಿಎಂ ನಿವಾಸದ ಎದುರು ರಾಜೀನಾಮೆ ನೀಡದಂತೆ ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು.
ಆರೋಪದಿಂದ ಹೊರಬರುವೆ - ಈಶ್ವರಪ್ಪ
ಶಿವಮೊಗ್ಗ, ಏ. ೧೫: ನನಗೆ ಇದೊಂದು ಅಗ್ನಿಪರೀಕ್ಷೆ, ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ, ನನ್ನ ಮೇಲೆ ಆಪಾದನೆ ಬಂದಿದೆ. ನನ್ನ ಮೇಲಿನ ಆಪಾದನೆಯಿಂದ ಮುಕ್ತವಾಗಿ ಹೊರಬರಬೇಕೆಂದು ನನ್ನ ಬೆಂಬಲಿಗರು ಒಪ್ಪಿಕೊಂಡಿದ್ದಾರೆ. ನನ್ನ ಅನುಯಾಯಿಗಳಿಗೆ ಬಹಳ ನೋವಾಗಿದೆ. ಅವರಿಗೆ ಮನವರಿಕೆ ಮಾಡಿದ್ದೇನೆ. ನಮ್ಮ ಕಾರ್ಯಕರ್ತರು, ಹಿರಿಯರು, ಸ್ವಾಮೀಜಿಗಳು, ಪಕ್ಷದ ನಾಯಕರ ಬೆಂಬಲದಿAದ ಈ ವಿಚಾರದಲ್ಲಿ ಗೆದ್ದು ಬರುತ್ತೇನೆ ಎಂಬ ವಿಶ್ವಾಸವಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾಗಿರುವ ಕೆ ಎಸ್ ಶಿವಮೊಗ್ಗ ಜಿಲ್ಲೆಯಲ್ಲಿ ಸಚಿವರಾಗಿ ಇಂದು ಕೊನೆಯ ದಿನ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದ ಎಲ್ಲಾ ಮಂತ್ರಿಗಳು, ಬಿಜೆಪಿ ಶಾಸಕರು ನನ್ನ ಮೇಲೆ ತೋರಿಸುತ್ತಿರುವ ಪ್ರೀತಿಯಿಂದ ಭಾವುಕನಾಗಿದ್ದೇನೆ, ಇವರೆಲ್ಲರ ಪ್ರೀತಿಯಿಂದ ನನ್ನ ವಿರುದ್ಧ ಷಡ್ಯಂತ್ರ ನಡೆಸಿದವರಿಗೆ ತಕ್ಕ ಪಾಠ ಸಿಗುತ್ತದೆ, ನನಗೆ ನ್ಯಾಯ ಸಿಗುತ್ತದೆ ಎಂದು ಭಾವಿಸಿದ್ದೇನೆ ಎಂದರು.
ಸAತೋಷ್ ಕುಟುಂಬಕ್ಕೆ ಪರಿಹಾರ ನೀಡುವ ಚಿಂತನೆ
ಗದಗ, ಏ. ೧೫: ಕೆ.ಎಸ್. ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಚಿಂತಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಗದಗ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಮೃತ ಸಂತೋಷ್ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕೆಂಬ ಬೇಡಿಕೆಗಳು ಬರುತ್ತಿದ್ದು, ಪರಿಹಾರ ನೀಡುವ ಬಗ್ಗೆ ಯೋಚಿಸುವುದಾಗಿ ತಿಳಿಸಿದರು. ಈಶ್ವರಪ್ಪ ಅವರ ಬಂಧನಕ್ಕೆ ಪಟ್ಟು ಹಿಡಿದಿರುವ ಕಾಂಗ್ರೆಸ್ ನಾಯಕರಿಗೆ ಚಾಟಿ ಬೀಸಿದ ಮುಖ್ಯಮಂತ್ರಿ, ಬಂಧನದ ಬಗ್ಗೆ ತನಿಖಾಧಿಕಾರಿಗಳು ತೀರ್ಮಾನಿಸುತ್ತಾರೆ. ಈ ಹಿಂದೆ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಕೇಸ್ನಲ್ಲಿ ಕೆ.ಜೆ. ಜಾರ್ಚ್ ಅವರನ್ನು ಬಂಧಿಸಲಿಲ್ಲ. ರಾಜ್ಯ ಪೊಲೀಸ್ ಆಗಲಿ, ಸಿಬಿಐ ಅಧಿಕಾರಿಗಳು ಕೂಡಾ ಜಾರ್ಜ್ ಅವರನ್ನು ಬಂಧಿಸಿರಲಿಲ್ಲ. ಕಾಂಗ್ರೆಸ್ನವರಿಗೆ ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆ ಕೇಳುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಭಾರತಕ್ಕೆ ಹಾನಿಯಾದರೆ ಯಾರನ್ನೂ ಬಿಡುವುದಿಲ್ಲ
ವಾಷಿಂಗ್ಟನ್, ಏ. ೧೫: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಪ್ರಬಲ ರಾಷ್ಟçವಾಗಿ ಹೊರಹೊಮ್ಮಿದೆ ಮತ್ತು ಆರ್ಥಿಕವಾಗಿ ಪ್ರಬಲವಾಗಿರುವ ವಿಶ್ವದ ಮೊದಲ ಮೂರು ದೇಶಗಳಲ್ಲಿ ಭಾರತವೂ ಒಂದು ಎಂದು ಪ್ರತಿಪಾದಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ದೇಶಕ್ಕೆ ಹಾನಿಯಾದರೆ ಯಾರನ್ನೂ ಬಿಡುವುದಿಲ್ಲ ಎಂದು ಶುಕ್ರವಾರ ಚೀನಾಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಇಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಭಾರತೀಯ-ಅಮೆರಿಕನ್ ಸಮುದಾಯವನ್ನುದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಭಾರತ ಶೂನ್ಯ ಮೊತ್ತದ ಆಟದ ರಾಜತಾಂತ್ರಿಕತೆಯನ್ನು ನಂಬುವುದಿಲ್ಲ ಮತ್ತು ಒಂದು ದೇಶದೊಂದಿಗಿನ ಸಂಬAಧವು ಮತ್ತೊಂದು ದೇಶದ ವೆಚ್ಚದ ಮೇಲೆ ಅವಲಂಬಿತವಾಗಿರುವುದಿಲ್ಲ ಎಂದು ಅಮೆರಿಕಗೆ ಸೂಕ್ಷ್ಮ ಸಂದೇಶ ಕಳುಹಿಸಿದ್ದಾರೆ. ಭಾರತ- ಅಮೆರಿಕ ೨+೨ ಸಚಿವರ ಮಟ್ಟದ ಮಾತುಕತೆಯ ನಾಲ್ಕನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲು ರಾಜನಾಥ್ ಸಿಂಗ್ ವಾಷಿಂಗ್ಟನ್ಗೆ ತೆರಳಿದ್ದು, ನಮ್ಮ ಸೈನಿಕರು ಏನು ಮಾಡಿದರು ಮತ್ತು ನಾವು (ಸರ್ಕಾರ) ಯಾವ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಎಂದು ನಾನು ಬಹಿರಂಗವಾಗಿ ಹೇಳಲಾರೆ. ಆದರೆ ಭಾರತಕ್ಕೆ ಹಾನಿಯಾದರೆ ಭಾರತ ಯಾರನ್ನೂ ಬಿಡುವುದಿಲ್ಲ ಎಂಬ ಸಂದೇಶಹೋಗಿದೆ ಎಂದು ನಾನು ಖಂಡಿತವಾಗಿ ಹೇಳಬಲ್ಲೆ ಎಂದರು. ಮೇ ೫, ೨೦೨೦ ರಂದು ಪ್ಯಾಂಗೊAಗ್ ಸರೋವರದ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ನಂತರ ಭಾರತ ಮತ್ತು ಚೀನಾ ನಡುವಿನ ಲಡಾಖ್ ಗಡಿ ಬಿಕ್ಕಟ್ಟು ಮತ್ತಷ್ಟು ಭುಗಿಲೆದ್ದಿತ್ತು.
ಭಾರತಕ್ಕೆ ಎಸ್-೪೦೦ ಕ್ಷಿಪಣಿ ವ್ಯವಸ್ಥೆಯ ಎರಡನೇ ಯುನಿಟ್ ಪೂರೈಕೆ
ನವದೆಹಲಿ, ಏ. ೧೫: ರಷ್ಯಾ ಭಾರತಕ್ಕೆ ಎಸ್-೪೦೦ ಕ್ಷಿಪಣಿ ವ್ಯವಸ್ಥೆಯ ಎರಡನೇ ಯುನಿಟ್ ಪೂರೈಕೆಯನ್ನು ಪ್ರಾರಂಭಿಸಿದೆ. ಉಕ್ರೇನ್-ರಷ್ಯಾ ಕದನದ ಹಿನ್ನೆಲೆಯಲ್ಲಿ ನ್ಯಾಟೋ ರಾಷ್ಟçಗಳು ವಿಧಿಸಿರುವ ನಡುವೆಯೇ ಭಾರತಕ್ಕೆ ಎಸ್-೪೦೦ ಕ್ಷಿಪಣಿ ವ್ಯವಸ್ಥೆ ಆಮದಾಗುತ್ತಿದೆ. ಎಸ್-೪೦೦ ಕ್ಷಿಪಣಿ ವ್ಯವಸ್ಥೆಯೊಂದಿಗೆ ಅದಕ್ಕೆ ಅಗತ್ಯವಿರುವ ವೈಮಾನಿಕ ಹಾಗೂ ಕಡಲ ಕಾಂಪೊನೆAಟ್ ಗಳನ್ನೂ ಪೂರೈಕೆ ಮಾಡಲಾಗುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಎಸ್-೪೦೦ ಮಿಸೈಲ್ಸ್ನ ಮೊದಲ ಯುನಿಟ್ ಡಿಸೆಂಬರ್ ೨೦೨೧ ರಲ್ಲಿ ಪೂರೈಕೆ ಮಾಡಲಾಗಿತ್ತು. ಅಮೆರಿಕ ಏನು ಹೇಳುತ್ತದೆಯೋ ಅದನ್ನು ಲೆಕ್ಕಿಸದೇ ಈ ವ್ಯವಸ್ಥೆಯನ್ನು ಭಾರತ ತರಿಸಿಕೊಳ್ಳಬೇಕಿತ್ತು ಅದು ಆಗಿದೆ ಎಂದು ರಕ್ಷಣಾ ವಿಶ್ಲೇಷಕ ಮೇಜರ್ ಜನರಲ್ (ನಿವೃತ್ತ) ಎಸ್.ಬಿ. ಆಸ್ಥಾನ ಹೇಳಿದ್ದಾರೆ. ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ವಿರುದ್ಧ ಮಾತನಾಡದ ಭಾರತದ ಮೇಲೆ ಅಮೆರಿಕ ಒತ್ತಡ ಹೇರಲು ಯತ್ನಿಸಿತ್ತು. ಆದರೂ ಭಾರತ ಜಗ್ಗಿರಲಿಲ್ಲ.
ರಿವರ್ ರ್ಯಾಫ್ಟಿಂಗ್ ಸಂದರ್ಭ ಮುಳುಗಿದ ದೋಣಿ
ಗಣೇಶಗುಡಿ, ಏ. ೧೫: ದಾಂಡೇಲಿ ಸಮೀಪದ ಗಣೇಶಗುಡಿಯಲ್ಲಿ ರಿವರ್ ರ್ಯಾಫ್ಟಿಂಗ್ ಸಂದರ್ಭ ದೋಣಿ ಮುಳುಗಿ ಕೆಲವೇ ಅಂತರದಲ್ಲಿ ಸಂಭವಿಸಬೇಕಿದ್ದ ದುರಂತವೊAದನ್ನು ಪ್ರವಾಸಿ ನಿರ್ವಾಹಕರು ತಪ್ಪಿಸಿದ್ದಾರೆ. ಈ ಘಟನೆಯು ಸ್ಥಳದಲ್ಲಿ ನಡೆಯುತ್ತಿದ್ದ ನಿಯಮ ಉಲ್ಲಂಘನೆಗಳು ಬಹಿರಂಗಗೊಳ್ಳುವAತೆ ಮಾಡಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೀಡಿಯೋದಲ್ಲಿ ಜನರು ಸಹಾಯಕ್ಕಾಗಿ ಕಿರುಚಾಡುತ್ತಿರುವುದು, ಮಕ್ಕಳನ್ನು ಮೊದಲು ರಕ್ಷಣೆ ಮಾಡುವಂತೆ ಒತ್ತಾಯಿಸುತ್ತಿರುವುದು ಕಂಡು ಬಂದಿದೆ. ಸಾಮರ್ಥ್ಯಕ್ಕೂ ಮೀರಿ ಹೆಚ್ಚಿನ ಜನರನ್ನು ದೋಣಿಯಲ್ಲಿ ಹತ್ತಿಸಿಕೊಂಡಿದ್ದು, ಘಟನೆಗೆ ಕಾರಣವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಪ್ರತೀ ದೋಣಿಯಲ್ಲಿ ೧೪ಕ್ಕೂ ಹೆಚ್ಚು ಜನರನ್ನು ಕರೆದೊಯ್ಯಲಾಗುತ್ತಿದೆ. ಅಲ್ಲದೆ, ಸುರಕ್ಷತಾ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ. ಈ ಕುರಿತು ಯಾವುದೇ ಅಧಿಕಾರಿಗಳೂ ಪರಿಶೀಲನೆ ನಡೆಸುತ್ತಿಲ್ಲ ಎಂದು ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಮಾತನಾಡಿ, ನಿಮಯ ಉಲ್ಲಂಘನೆಗಳ ಬಗ್ಗೆ ಆಘಾತವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದಾಗಿ ಹಾಗೂ ಸಂಭವನೀಯ ದೋಣಿ ದುರಂತ ಕುರಿತು ಪರಿಶೀಲನೆ ನಡೆಸಲು ತಂಡವೊAದನ್ನು ನಿಯೋಜಿಸುವುದಾಗಿ ಹೇಳಿದ್ದಾರೆ.
ಸಂಪುಟ ವಿಸ್ತರಣೆ ಕುರಿತು ಚರ್ಚೆ
ಇಳಕಲ್, ಏ. ೧೫: ಸಂಪುಟ ವಿಸ್ತರಣೆ ಬಗ್ಗೆ ರಾಷ್ಟಿçÃಯ ಅಧ್ಯಕ್ಷರು ರಾಜ್ಯಕ್ಕೆ ಆಗಮಿಸಿದಾಗ ಆ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಇಳಕಲ್ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ೨೦೨೩ರ ವಿಧಾನಸಭಾ ಚುನಾವಣೆಗೆ ಪಕ್ಷದ ಕಾರ್ಯತಂತ್ರದ ಕುರಿತು ಚರ್ಚಿಸಲು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ತಾ. ೧೭ ರಂದು ವಿಜಯನಗರ ಜಿಲ್ಲೆಯಲ್ಲಿ ನಡೆಯಲಿರುವ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.