ದೆಹಲಿಯಲ್ಲಿ ಕೋವಿಡ್ ಪ್ರಮಾಣ ಹೆಚ್ಚಳ

ದೆಹಲಿ, ಏ. ೧೪: ಕೋವಿಡ್-೧೯ ಪ್ರಕರಣಗಳು ಸ್ವಲ್ಪ ಹೆಚ್ಚಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಸರ್ಕಾರ ಶೀಘ್ರದಲ್ಲೇ ಶಾಲೆಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಗುರುವಾರ ಹೇಳಿದ್ದಾರೆ. ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಾಗಿದೆ. ಆದರೆ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಏರಿಕೆಯಾಗಿಲ್ಲ. ಆದ್ದರಿಂದ ನಾವು ಆತಂಕಪಡುವ ಅಗತ್ಯವಿಲ್ಲ. ಆದರೆ ಎಚ್ಚರದಿಂದಿರಿ. ನಾವು ಕೋವಿಡ್‌ನೊಂದಿಗೆ ಬದುಕಲು ಕಲಿಯಬೇಕಾಗಿದೆ. ನಾವು ನಿರಂತರವಾಗಿ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದು ಸಿಸೋಡಿಯಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ನಾನು ಕೆಲವು ಶಾಲೆಗಳ ಬಗ್ಗೆ ವರದಿ ಪಡೆದುಕೊಂಡಿದ್ದೇನೆ. ಅಲ್ಲಿ ಪೋಷಕರು ತಮ್ಮ ಮಗುವಿಗೆ ಕೊರೊನಾ ಪಾಸಿಟಿವ್ ಬಂದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ನಾಳೆ ಶಾಲೆಗಳಿಗೆ ಹೊಸ ಮಾರ್ಗಸೂಚಿಗಳನ್ನು ನೀಡಲಿದೆ ಎಂದಿದ್ದಾರೆ. ದೆಹಲಿಯಲ್ಲಿ ಬುಧವಾರ ೨೯೯ ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಕಳೆದ ಎರಡು ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಶೇ.೧೧೮ರಷ್ಟು ಏರಿಕೆಯಾಗಿದೆ. ನಗರ ಆರೋಗ್ಯ ಇಲಾಖೆ ಹಂಚಿಕೊAಡಿರುವ ಅಂಕಿಅAಶಗಳ ಪ್ರಕಾರ ಪಾಸಿಟಿವ್ ಪ್ರಮಾಣ ಶೇಕಡಾ ೨.೪೯ ರಷ್ಟಿದೆ.

ಗುಂಡಿನ ಚಕಮಕಿ - ನಾಲ್ವರು ಉಗ್ರರು ಹತ

ಶ್ರೀನಗರ, ಏ. ೧೪: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುರುವಾರ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರನ್ನು ಭದ್ರತಾಪಡೆ ಹೊಡೆದುರುಳಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಬಡಿಗಮ್, ಝೈನಾಪೋರಾದಲ್ಲಿ ಉಗ್ರಗಾಮಿಗಳ ಉಪಸ್ಥಿತಿಯ ಬಗ್ಗೆ ಮಾಹಿತಿ ಪಡೆದ ನಂತರ ಶೋಧ ಕಾರ್ಯಾಚರಣೆಯ ಸಮಯದಲ್ಲಿ ಗುಂಡಿನ ಕಾಳಗ ನಡೆದಿದೆ ಎಂದು ಅವರು ಹೇಳಿದ್ದಾರೆ. ಪೊಲೀಸರು ಮತ್ತು ಭದ್ರತಾ ಪಡೆಗಳ ಜಂಟಿ ತಂಡವು ಶಂಕಿತ ಸ್ಥಳವನ್ನು ಸುತ್ತುವರೆದಿದ್ದರಿಂದ, ಅಡಗಿಕೊಂಡಿದ್ದ ಭಯೋತ್ಪಾದಕರು ಗುಂಡಿನ ಚಕಮಕಿಯನ್ನು ಪ್ರಾರಂಭಿಸಿದ್ದಾರೆ. ಕುಲ್ಗಾಮ್ ಜಿಲ್ಲೆಯಲ್ಲಿ ಸ್ಥಳೀಯ ಅಲ್ಪಸಂಖ್ಯಾತ ಸದಸ್ಯ ಸತೀಶ್ ಕುಮಾರ್ ಸಿಂಗ್ ಅವರನ್ನು ಗುಂಡಿಕ್ಕಿ ಕೊಂದ ಒಂದು ದಿನದ ನಂತರ ಶೋಪಿಯಾನ್‌ನಲ್ಲಿ ಈ ಎನ್‌ಕೌಂಟರ್ ನಡೆದಿದೆ.

ಸಿಲಿಂಡರ್ ಸ್ಫೋಟ - ೧೩ ಮಂದಿಗೆ ಗಾಯ

ನವದೆಹಲಿ, ಏ. ೧೪: ದೆಹಲಿಯ ಜಾಮಿಯಾ ನಗರದ ರೆಸ್ಟೋರೆಂಟ್‌ನಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ೧೩ ಜನರು ಗಾಯಗೊಂಡಿದ್ದಾರೆ. ವಿಷಯ ತಿಳಿದಾಕ್ಷಣ ಅಗ್ನಿಶಾಮಕ ವಾಹನಗಳು ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯ ಮುಂದುವರೆದಿದೆ. ಟಿಕೋನಾ ಪಾರ್ಕ್ ಪ್ರದೇಶದ ರೆಸ್ಟೋರೆಂಟ್‌ನ ನೆಲಮಾಳಿಗೆಯಲ್ಲಿ ಸ್ಫೋಟ ಸಂಭವಿಸಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಮೋದ್ ಮುತಾಲಿಕ್ ಉಡುಪಿ ಪ್ರವೇಶಕ್ಕೆ ನಿರ್ಬಂಧ

ಉಡುಪಿ, ಏ. ೧೪: ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಉಡುಪಿ ಜಿಲ್ಲೆಗೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಆದೇಶ ಹೊರಡಿಸಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಹಾಗೂ ಸಾರ್ವಜನಿಕರ ಹಿತ ಕಾಪಾಡುವ ದೃಷ್ಟಿಯಿಂದ ಏಪ್ರಿಲ್ ೧೫ ರಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಉಡುಪಿ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಸಿ.ಆರ್.ಪಿ.ಸಿ ಸೆಕ್ಷನ್ ೧೩೩, ೧೪೩ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ. ಕುಂದಾಪುರ ಸಮೀಪದ ಗಂಗೊಳ್ಳಿ ಪೇಟೆಯಲ್ಲಿ ಮುತಾಲಿಕ್ ಅವರು ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಪ್ರಚೋದನಕಾರಿ ಭಾಷಣ ಮಾಡಿ ಕೋಮುಗಲಭೆ ಉಂಟು ಮಾಡುವ ಸಾಧ್ಯತೆ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಅವರು ಹೇಳಿದ್ದಾರೆ. ಹಿಂದೂ ಜಾಗರಣಾ ವೇದಿಕೆಯು ಗಂಗೊಳ್ಳಿಯ ವೀರೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದೆ. ಈ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಪ್ರಮೋದ್ ಮುತಾಲಿಕ್ ಅವರಿಗೆ ಉಡುಪಿ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ.

ವೈದ್ಯಕೀಯ ಸೀಟ್ ಕೊಡಿಸುವುದಾಗಿ ವಂಚನೆ

ಬೆAಗಳೂರು, ಏ. ೧೪: ವೈದ್ಯಕೀಯ ಸೀಟು ಕೊಡಿಸುವ ನೆಪದಲ್ಲಿ ಸುಮಾರು ೧೦ ವಿದ್ಯಾರ್ಥಿಗಳ ಪೋಷಕರಿಗೆ ವಂಚಿಸಿರುವ ಸಂಸ್ಥೆಯೊAದು ಸುಮಾರು ರೂ. ೧.೮೧ ಕೋಟಿ ವಂಚಿಸಿದೆ. ಎಂ.ಜಿ. ರಸ್ತೆಯ ಬಾರ್ಟನ್ ಸೆಂಟರ್‌ನಲ್ಲಿರುವ ಹೆಲ್ಪ್ ಡೆಸ್ಕ್ ಫಾರ್ ಯೂ ಸರ್ವಿಸಸ್ ಸಂಸ್ಥೆಯು ತನ್ನ ಮಗಳಿಗೆ ವೈದ್ಯಕೀಯ ಸೀಟು ಕೊಡಿಸುವ ನೆಪದಲ್ಲಿ ವಂಚಿಸಿದೆ ಎಂದು ಉದ್ಯಮಿ ವೆಂಕಟೇಶ್ ಮೂರ್ತಿ ಆರೋಪಿಸಿದ್ದು, ತಮ್ಮ ಮಗಳು ೨೦೨೧ರಲ್ಲಿ ಎನ್‌ಇಇಟಿ ಪಾಸಾಗಿ ವೈದ್ಯಕೀಯ ಸೀಟಿಗೆ ಅರ್ಜಿ ಸಲ್ಲಿಸಿದ್ದರು ಎಂದು ಹೇಳಿದ್ದಾರೆ. ನವೆಂಬರ್‌ನಲ್ಲಿ ಈ ಸಂಸ್ಥೆಯ ಪ್ರತಿನಿಧಿಗಳು ತಮ್ಮ ಮಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಮೂಲಕ ವೈದ್ಯಕೀಯ ಸೀಟು ವ್ಯವಸ್ಥೆ ಮಾಡುವುದಾಗಿ ಅದಕ್ಕೆ ೬೦ ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಅದನ್ನು ಡ್ರಾಫ್ಟ್ಗಳ ಮೂಲಕ ಪಾವತಿಗಳನ್ನು ಮಾಡಬೇಕು ಎಂದು ಹೇಳಿದರು. ಅದರಂತೆ ಸಂಸ್ಥೆಯ ಕಚೇರಿಗೆ ತೆರಳಿ ೧೮ ಲಕ್ಷ ರೂಪಾಯಿ ಪಾವತಿಸಿದ್ದರು. ಮತ್ತೆ ಫೆಬ್ರವರಿಯಲ್ಲಿ ತಮ್ಮ ಮಗಳಿಗೆ ತುಮಕೂರಿನ ಶ್ರೀದೇವಿ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಕ್ಕಿದ್ದು ಅದಕ್ಕೆ ೧೫ ಲಕ್ಷ ಪಾವತಿಸುವಂತೆ ಸೂಚಿಸಿದ್ದರು. ಅದಕ್ಕೆ ತಾವು ೧೦ ಲಕ್ಷ ಪಾವತಿಸಿದ್ದಾಗಿ ಹೇಳಿದ್ದಾರೆ. ಇನ್ನು ಕೆಲ ದಿನಗಳಲ್ಲೇ ತಮ್ಮಗೆ ಇ-ಮೇಲ್ ಸಂದೇಶ ಬರುವುದಾಗಿ ತಿಳಿಸಿದ್ದರು. ಆದರೆ ಎಷ್ಟು ದಿನ ಕಳೆದರೂ ಯಾವುದೇ ಇ-ಮೇಲ್ ಬರದ ಹಿನ್ನೆಲೆಯಲ್ಲಿ ಕಚೇರಿಗೆ ಹೋಗಿ ಪರಿಶೀಲಿಸಿದಾಗ ಸಂಸ್ಥೆಗೆ ಬೀಗ ಜಡಿದಿದೆ ಎಂದಿದ್ದಾರೆ. ಇನ್ನು ಇದೇ ರೀತಿ ಹಲವರು ಕೂಡ ವಂಚನೆಗೊಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕ-ತಮಿಳುನಾಡಿಗೆ ಸುಪ್ರೀಂ ಕೋರ್ಟ್ ನೋಟೀಸ್

ನವದೆಹಲಿ, ಏ. ೧೪: ಹಿಜಾಬ್ ತೀರ್ಪು ಸಂಬAಧ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ ಒಡ್ಡಿದ ಆರೋಪದ ಮೇಲೆ ಬೆಂಗಳೂರಿನಲ್ಲಿ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆ ರದ್ದುಪಡಿಸಲು ಅಥವಾ ತಮ್ಮ ರಾಜ್ಯಕ್ಕೆ ಪ್ರಕರಣ ವರ್ಗಾಯಿಸುವಂತೆ ಚೆನ್ನೆöÊ ನಿವಾಸಿ, ಇಸ್ಲಾಮಿಕ್ ಧಾರ್ಮಿಕ ಸಂಘಟನೆಯ ಸದಸ್ಯ ಸಲ್ಲಿಸಿರುವ ಮನವಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳಿಗೆ ಬುಧವಾರ ನೋಟೀಸ್ ಜಾರಿ ಮಾಡಿದೆ. ನ್ಯಾಯ ಮೂರ್ತಿಗಳಿಗೆ ಬೆದರಿಕೆ ಹಾಕಿದ್ದಕ್ಕಾಗಿ ಇಸ್ಲಾಮಿಕ್ ಧಾರ್ಮಿಕ ಸಂಘಟನೆಯಾದ ತಮಿಳುನಾಡು ತೌಹೀದ್ ಜಮಾಅತ್(ಟಿಎನ್‌ಟಿಜೆ)ನ ರಹಮತ್ ಉಲ್ಲಾ ಮತ್ತು ಜಮಾಲ್ ಮೊಹಮ್ಮದ್ ಉಸ್ಮಾನಿ ವಿರುದ್ಧ ತಮಿಳುನಾಡು ಪೊಲೀಸರು ಮೊದಲು ಪ್ರಕರಣ ದಾಖಲಿಸಿಕೊಂಡು, ಬಂಧಿಸಿದ್ದರು. ನಂತರ ಇವರನ್ನು ಬೆಂಗಳೂರು ಪೊಲೀಸರು ವಶಕ್ಕೆ ತೆಗೆದುಕೊಂಡು, ತನಿಖೆ ಆರಂಭಿಸಿದ್ದಾರೆ. ಅರ್ಜಿದಾರರ ಮೇಲೆ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪ ಇದೆ. ಇದೇ ವರ್ಷದ ಮಾರ್ಚ್ ೧೮ ರಂದು ತಮಿಳುನಾಡಿನ ಮಧುರೈನಲ್ಲಿ ಇವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಮಾರ್ಚ್ ೧೯ ರಂದು ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅಪರಾಧಗಳಿಗಾಗಿ ಎರಡನೇ ಎಫ್‌ಐಆರ್ ದಾಖಲಾಗಿದೆ. ಎರಡು ಎಫ್‌ಐಆರ್‌ಗಳಿಗೆ ಸಂಬAಧಿಸಿ ಎರಡು ರಾಜ್ಯಗಳ ವಿವಿಧ ನ್ಯಾಯಾಲಯಗಳು ಮತ್ತು ಪೊಲೀಸ್ ಠಾಣೆಗಳನ್ನು ಸಂಪರ್ಕಿಸುವುದು ಅಸಾಧ್ಯ. ಇದರಿಂದ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಎರಡು ವಿಭಿನ್ನ ತನಿಖಾ ಸಂಸ್ಥೆಗಳು, ಎರಡೂ ಎಫ್‌ಐಆರ್‌ಗಳಲ್ಲಿ ಪರ್ಯಾಯ ತನಿಖೆ ನಡೆಸುವುದು ಸರಿಯಲ್ಲ. ಇದು ಕಾನೂನು ದುರುಪಯೋಗಕ್ಕೆ ಸಮಾನ ಎಂದು ಅರ್ಜಿದಾರರು ವಾದಿಸಿದ್ದರು. ವಾದ ಆಲಿಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಬೇಲಾ ಎಂ. ತ್ರಿವೇದಿ ಅವರಿದ್ದ ಪೀಠವು, ಈ ಸಂಬAಧ ಎರಡೂ ರಾಜ್ಯಗಳ ಸರ್ಕಾರಗಳಿಗೆ ನೋಟೀಸ್ ಜಾರಿ ಮಾಡಿದೆ.