ಮಡಿಕೇರಿ, ಏ. ೧೫: ಏಕಾಗ್ರತೆ ಯಿಂದ ಮನ ಪರಿವರ್ತನೆಯೊಂದಿಗೆ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹಿರಿಯ ಕ್ರೀಡಾಪಟು ಜಿ.ಟಿ. ರಾಘವೇಂದ್ರ ಹೇಳಿದರು.
ವಾಂಡರ್ಸ್ ವತಿಯಿಂದ ದಿ. ಸಿ.ವಿ. ಶಂಕರ್ ಸ್ಮರಣಾರ್ಥ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಕ್ಕಳ ಉಚಿತ ಬೇಸಿಗೆ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಹಿತವಚನ ಹೇಳಿದರು. ಪ್ರಾಣಾಯಾಮ ದೇಹಾರೋಗ್ಯಕ್ಕೆ ಬಹು ಉಪಕಾರಿ, ಇದನ್ನು ಬಾಲ್ಯಾವಸ್ಥೆಯಿಂದಲೇ ಅಭ್ಯಸಿಸಿದರೆ ಏಕಾಗ್ರತೆ ವೃದ್ಧಿಸುತ್ತದೆ. ಅಲ್ಲದೆ, ಪ್ರಾಣಾಯಾಮ ಮಾಡುವದರಿಂದ ಎಂದಿಗೂ ಶೀತ, ನೆಗಡಿ, ಮೂಗು ಕಟ್ಟಿಕೊಳ್ಳುವಂತಹ ಯಾವದೇ ಅಪಾಯಗಳು ಎದುರಾಗುವದಿಲ್ಲವೆಂದು ಹೇಳಿದರು. ಗುರುಗಳು ಹೇಳಿಕೊಟ್ಟಿದ್ದನ್ನು ಚಾಚೂ ತಪ್ಪದೆ ಪಾಲಿಸಬೇಕು, ಗುರುಗಳಿಂದ ಎಂತಹವರ ಮನ ಕೂಡ ಪರಿವರ್ತನೆ ಮಾಡಲು ಸಾಧ್ಯವಿದೆ ಎಂದು ಉದಾಹರಣೆ ಸಹಿತ ವಿವರಿಸಿದರು. ಏಕಾಗ್ರತೆಯಿಂದ ಮನ ಪರಿವರ್ತನೆ ಮಾಡಿಕೊಂಡಲ್ಲಿ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವೆಂಬುದನ್ನು ಸಂದರ್ಭ ಸಹಿತ ತಿಳಿ ಹೇಳಿದರು. ಶಿಬಿರದಲ್ಲಿ ಉತ್ತಮ ಗುರುಗಳು ಸಿಕ್ಕಿದ್ದು ಗುರುಗಳು ಕಲಿಸುವದನ್ನು ಮನನ ಮಾಡಿಕೊಂಡು ಜೀವನದಲ್ಲಿ ಮುಂದೆ ಬರುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ವಾಂಡರ್ಸ್ ಅಧ್ಯಕ್ಷ ಕೋಟೇರ ಮುದ್ದಯ್ಯ, ಕಾರ್ಯದರ್ಶಿ ಬಾಬು ಸೋಮಯ್ಯ, ಶಾಂ ಪೂಣಚ್ಚ, ಕುಡೆಕಲ್ ಸಂತೋಷ್, ಅಶೋಕ್ ಇದ್ದರು.