ಕೂಡಿಗೆ, ಏ. ೧೩: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ಕ್ಷೇತ್ರದ ವಾರ್ಷಿಕ ವಿಶೇಷ ಪೂಜೋತ್ಸವ ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ ವಿವಿಧ ಹೋಮ ಹವನಗಳೊಂದಿಗೆ ನಡೆಯಿತು.
ಶ್ರೀ ಗಣಪತಿ ಹೋಮ, ಮೃತ್ಯುಂಜಯ ಹೋಮ, ಪ್ರಧಾನ ದೇವರಿಗೆ ಹಾಗೂ ಇತರೆ ಉಪದೇವತೆಗಳಿಗೆ ವಿಶೇಷ ಅಭಿಷೇಕ, ಅರ್ಚನೆ ,ಇತ್ಯಾದಿ ಪೂಜಾ ಕೈಂಕರ್ಯಗಳು ಕೇರಳ ಸಜಿ ಪಣಿಕರ್ ತಂಡದ ನೇತೃತ್ವದಲ್ಲಿ ನಡೆದವು. ಪೂಜಾ ಕಾರ್ಯಕ್ರಮದಲ್ಲಿ ಹುದುಗೂರು, ಹಾರಂಗಿ, ಮದಲಾಪುರ, ಕೂಡಿಗೆ, ಸೀಗೆಹೊಸೂರು ಸೇರಿದಂತೆ ಸುತ್ತಮುತ್ತಲಿನ ನೂರಾರು ಭಕ್ತಾದಿಗಳು ಭಾಗವಹಿಸಿದರು. ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಹಾಗೂ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಅನ್ನಸಂತರ್ಪಣೆ, ಕಾರ್ಯಕ್ರಮ ನಡೆಯಿತು. ಸಂಜೆ ದೀಪಾಲಂಕಾರ ವಿಶೇಷ ಪೂಜೆ , ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಸೇರಿದಂತೆ ವಿಶೇಷ ಪೂಜೆ ನಡೆಯಿತು.
ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ. ಚಾಮಿ, ಕಾರ್ಯದರ್ಶಿ ಸುರೇಶ್ ಸೇರಿದಂತೆ ಸಮಿತಿಯ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದರು.