ಪ್ರಧಾನಿ ಮೋದಿಗೆ ಲತಾ ಮಂಗೇಶ್ಕರ್ ಪ್ರಶಸ್ತಿ

ನವದೆಹಲಿ, ಏ. ೧೨: ಪ್ರಧಾನಿ ನರೇಂದ್ರ ಮೋದಿ ಅವರು ಲತಾ ದೀನನಾಥ್ ಮಂಗೇಶ್ವರ್ ಪ್ರಶಸ್ತಿ ಗೌರವ ಪಡೆಯುವ ಪ್ರಥಮ ವ್ಯಕ್ತಿಯಾಗಲಿದ್ದಾರೆ. ತಾ. ೨೪ ರಂದು ನಡೆಯಲಿರುವ ೮೦ನೇ ವಾರ್ಷಿಕ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೊದಲ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಇತ್ತೀಚೆಗೆ ಮುಂಬೈನಲ್ಲಿ ತಮ್ಮ ೯೨ನೇ ವಯಸ್ಸಿನಲ್ಲಿ ನಿಧನರಾದ ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರ ಸ್ಮರಣಾರ್ಥ ಮತ್ತು ಗೌರವಾರ್ಥವಾಗಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಮಾಸ್ಟರ್ ದೀನನಾಥ್ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ ಚಾರಿಟಬಲ್ ಟ್ರಸ್ಟ್, ನಮ್ಮ ರಾಷ್ಟç, ಜನರು, ನಮ್ಮ ಸಮಾಜಕ್ಕೆ ಅದ್ಭುತ ಮತ್ತು ಅನುಕರಣೀಯ ಕೊಡುಗೆಗಳನ್ನು ನೀಡಿದ ಓರ್ವ ವ್ಯಕ್ತಿಗೆ ಈ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ರಾಷ್ಟç ಮತ್ತು ಸಮಾಜಕ್ಕೆ ನಿಸ್ವಾರ್ಥ ಸೇವೆಗಾಗಿ ಪ್ರಧಾನಿ ಮೋದಿ ಮೊದಲಿಗರಾಗಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದು ಮಾಸ್ಟರ್ ದೀನನಾಥ್ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ ಚಾರಿಟಬಲ್ ಟ್ರಸ್ಟ್ ತಿಳಿಸಿದೆ.

ತಿರುಪತಿ ತಿರುಮಲದಲ್ಲಿ ಕಾಲ್ತುಳಿತ ; ಮೂವರಿಗೆ ಗಾಯ

ತಿರುಮಲ, ಏ. ೧೨: ಆಂಧ್ರಪ್ರದೇಶದ ಖ್ಯಾತ ಧಾರ್ಮಿಕ ಯಾತ್ರಾತಾಣ ತಿರುಪತಿಯ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಟ ಮೂವರು ಭಕ್ತರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ತಿರುಮಲ ವೆಂಕಟೇಶ್ವರಸ್ವಾಮಿ ದರ್ಶನಕ್ಕಾಗಿ ಟಿಕೆಟ್ ವಿತರಣೆ ಮಾಡುವ ಸರ್ವದರ್ಶನ ಟಿಕೆಟ್ ಪಡೆಯಲು ದೇಗುಲದ ಟಿಕೆಟ್ ಕೌಂಟರ್‌ನಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಜಮಾಯಿಸಿದ್ದ ಸಂದರ್ಭದಲ್ಲಿ ಏಕಾಏಕಿ ಸಂಭವಿಸಿದ ನೂಕು ನುಗ್ಗಲಿನಲ್ಲಿ ಕನಿಷ್ಟ ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಟಿಕೆಟ್ ಕೌಂಟರ್ ಬಳಿ ಕನಿಷ್ಟ ಸುಮಾರು ೬೦ ಸಾವಿರ ಜನ ಸರ್ವದರ್ಶನ ಟಿಕೆಟ್ ಕೌಂಟರ್ ಬಳಿ ಜಮಾಯಿಸಿದ್ದರು. ಕೌಂಟರ್ ತೆರೆಯುತ್ತಿದ್ದಂತೆಯೇ ಏಕಾಏಕಿ ನೂಕುನುಗ್ಗಲು ಸಂಭವಿಸಿದೆ. ಈ ವೇಳೆ ಭಕ್ತರಿಗೆ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ರೂ. ೭೫ ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶ

ಬೆಂಗಳೂರು, ಏ. ೧೨: ಅಕ್ರಮ ಅತಿಕ್ರಮಣದ ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮಂಗಳವಾರ ಸುಮಾರು ೭೫ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅತಿಕ್ರಮಣಕಾರರಿಂದ ತನ್ನ ಆಸ್ತಿಯನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಮುಂದುವರಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಂಗಳವಾರ ಸುಮಾರು ೭೫ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದು, ಬಿಟಿಎಂ ಬಡಾವಣೆಯ ೪ನೇ ಹಂತದ ೨ನೇ ಬ್ಲಾಕ್‌ನ ದೇವರಚಿಕ್ಕನಹಳ್ಳಿಯ ಸರ್ವೆ ಸಂಖ್ಯೆ ೪೧ ರಲ್ಲಿ ಶಾಲಾ ಉದ್ದೇಶಕ್ಕಾಗಿ ೨೩ ಗುಂಟೆ ಜಾಗವನ್ನು ಮತ್ತು ಇದೇ ಸರ್ವೇ ಸಂಖ್ಯೆಯಲ್ಲಿನ ೩೬ ೧/೨ ಗುಂಟೆ ಜಾಗವನ್ನು ಬಿಎಂಟಿಸಿ ಬಸ್ ಡಿಪೋಗೆ ಮಂಜೂರು ಮಾಡಲಾಗಿತ್ತು. ಆದರೆ, ಕಳೆದ ಒಂದು ದಶಕದಿಂದ ಖಾಸಗಿ ವ್ಯಕ್ತಿಗಳು ಈ ಎರಡೂ ಜಾಗಗಳನ್ನು ಅತಿಕ್ರಮಿಸಿಕೊಂಡು ಅಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದರು.

ನ್ಯೂಯಾರ್ಕ್ : ಸುರಂಗಮಾರ್ಗ ನಿಲ್ದಾಣದಲ್ಲಿ ಶೂಟೌಟ್

ನ್ಯೂಯಾರ್ಕ್, ಏ. ೧೨: ಅಮೆರಿಕದ ನ್ಯೂಯಾರ್ಕ್ನ ಬ್ರೂಕ್ಲಿನ್‌ನಲ್ಲಿರುವ ಸುರಂಗಮಾರ್ಗ ನಿಲ್ದಾಣದಲ್ಲಿ ಮಂಗಳವಾರ ಸಂಭವಿಸಿದ ಶೂಟೌಟ್‌ನಲ್ಲಿ ಕನಿಷ್ಟ ಐವರಿಗೆ ಗುಂಡೇಟು ತಗುಲಿದ್ದು, ಹಲವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ನ್ಯೂಯಾರ್ಕ್ನ ಬ್ರೂಕ್ಲಿನ್‌ನಲ್ಲಿರುವ ಸನ್‌ಸೆಟ್ ಪಾರ್ಕ್ನ ೩೬ನೇ ಸ್ಟಿçÃಟ್‌ನ ಸುರಂಗಮಾರ್ಗ ನಿಲ್ದಾಣದಲ್ಲಿ ಅನೇಕ ಜನರು ಗುಂಡು ಹಾರಿಸಿದ್ದು, ಪ್ರಾಥಮಿಕ ವರದಿಗಳ ಪ್ರಕಾರ ಈ ಶೂಟೌಟ್‌ನಲ್ಲಿ ಕನಿಷ್ಟ ಐವರಿಗೆ ಗುಂಡೇಟು ತಗುಲಿದೆ ಎಂದು ನ್ಯೂಯಾರ್ಕ್ ಅಗ್ನಿಶಾಮಕ ಇಲಾಖೆ ಮಾಹಿತಿ ನೀಡಿದೆ. ಮಂಗಳವಾರ ಬೆಳಿಗ್ಗೆ ನಿಲ್ದಾಣದಲ್ಲಿ ಅತೀ ಹೆಚ್ಚು ಪ್ರಯಾಣಿಕರಿದ್ದ ಸಂದರ್ಭದಲ್ಲಿ ಮಾಸ್ಕ್ ಧರಿಸಿದ್ದ ವ್ಯಕ್ತಿ ಏಕಾಏಕಿ ಗುಂಡಿನ ದಾಳಿ ಆರಂಭಿಸಿದ್ದಾನೆ. ಈ ವೇಳೆ ಪ್ರಯಾಣಿಕರಿಗೆ ಗುಂಡೇಟು ತಗುಲಿದೆ ಎನ್ನಲಾಗಿದೆ. ಮತ್ತೊಂದು ಮೂಲದ ಪ್ರಕಾರ ಈ ಶೂಟೌಟ್‌ನಲ್ಲಿ ಕನಿಷ್ಟ ೧೩ ಮಂದಿಗೆ ಗಾಯಗಳಾಗಿವೆ ಎನ್ನಲಾಗಿದೆ.

ರಾಡ್‌ನಿಂದ ಹೊಡೆದು ಪತ್ನಿಯಿಂದಲೇ ಪತಿಯ ಹತ್ಯೆ

ಬೆಂಗಳೂರು, ಏ. ೧೨: ಪದೇ ಪದೇ ಜಗಳವಾಡುತ್ತಿದ್ದ ಎಂಬ ಕಾರಣಕ್ಕೆ ೫೨ ವರ್ಷದ ವ್ಯಕ್ತಿಯೊಬ್ಬನನ್ನು ಆತನೇ ಹೆಂಡತಿಯೇ ಕಬ್ಬಿಣದ ರಾಡ್‌ನಿಂದ ಹೊಡೆದು ಸಾಯಿಸಿದ್ದಾಳೆ. ಮೃತನನ್ನು ರಿಯಲ್ ಎಸ್ಟೇಟ್ ಏಜೆಂಟ್ ಜೆಎಂ ಉಮೇಶ್ ಎಂದು ಗುರುತಿಸಲಾಗಿದೆ. ಕೊಲೆ ಆರೋಪದ ಮೇರೆಗೆ ಆತನ ಪತ್ನಿ ವರಲಕ್ಷಿö್ಮ(೪೮)ಯನ್ನು ಪೊಲೀಸರು ಬಂಧಿಸಿದ್ದಾರೆ. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಆಂಧ್ರಹಳ್ಳಿ ಮುಖ್ಯರಸ್ತೆಯ ಸಾಯಿ ಬಾಬಾ ನಗರದಲ್ಲಿ ವಾಸವಾಗಿದ್ದರು. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಅಮೃತೂರಿನ ಜಿನ್ನಾಗರ ಗ್ರಾಮದ ಉಮೇಶ್ ಅವರು ಸುಮಾರು ೨೮ ವರ್ಷಗಳ ಹಿಂದೆ ವರಲಕ್ಷಿö್ಮ ಅವರನ್ನು ವಿವಾಹವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಕ್ಷುಲಕ ವಿಚಾರಕ್ಕೆ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದರು. ಆಕೆಯ ಕುಟುಂಬದವರು ಆರ್ಥಿಕವಾಗಿ ಸಹಾಯ ಮಾಡದ ಕಾರಣ ಬೇಸತ್ತು ಆಗಾಗ್ಗೆ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದರು. ತನ್ನ ಹೆಣ್ಣು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸುತ್ತಿದ್ದರು ಎನ್ನಲಾಗಿದೆ. ಭಾನುವಾರ ರಾತ್ರಿ ದಂಪತಿ ನಡುವೆ ಜಗಳವಾಗಿತ್ತು. ಸೋಮವಾರ ಬೆಳಗ್ಗೆ ಎದ್ದಾಗ ಉಮೇಶ್ ಮತ್ತೆ ಆಕೆಯೊಂದಿಗೆ ಜಗಳವಾಡಿ ಒದ್ದಿದ್ದಾನೆ ಎನ್ನಲಾಗಿದೆ ಮತ್ತೆ ನಿದ್ದೆಗೆ ಜಾರಿದ ಬಳಿಕ ವರಲಕ್ಷಿö್ಮ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದಿದ್ದಾರೆ. ಇದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಳಿಗ್ಗೆ ೭ ಗಂಟೆ ಸುಮಾರಿಗೆ ಎದ್ದ ಹೆಣ್ಣು ಮಕ್ಕಳು ರಕ್ತದ ಮಡುವಿನಲ್ಲಿ ಬಿದ್ದಿದ್ದ ತಂದೆಯನ್ನು ಕಂಡು ಏನಾಯಿತು ಎಂದು ಕೇಳಿದ್ದಾರೆ. ಕೂಡಲೇ ಅವರನ್ನು ಸುಂಕದಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬ್ಯಾಡರಹಳ್ಳಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.

ಜಗತ್ತಿಗೆ ಆಹಾರ ಪೂರೈಕೆಗೆ ಸಿದ್ಧ - ಮೋದಿ

ಅಹಮದಾಬಾದ್, ಏ. ೧೨: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರೊಂದಿಗೆ ನಡೆದ ಮಾತುಕತೆ ವೇಳೆ, ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯುಟಿಒ) ಅನುಮತಿ ನೀಡಿದರೆ ಜಗತ್ತಿಗೆ ಭಾರತ ಆಹಾರ ದಾಸ್ತಾನು ಪೂರೈಸಲಿದೆ ಎಂದು ಹೇಳಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಿಳಿಸಿದ್ದಾರೆ. ಇಂದು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋದಿ, ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ವಿಶ್ವದ ವಿವಿಧ ಭಾಗಗಳಲ್ಲಿ ಆಹಾರ ದಾಸ್ತಾನು ಕ್ಷೀಣಿಸುತ್ತಿದೆ. ಜಗತ್ತು ಅನಿಶ್ಚಿತ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಜನ ಬಯಸಿದ್ದನ್ನು ಪಡೆಯಲಾಗುತ್ತಿಲ್ಲ ಎಂದರು. ಕೋವಿಡ್ ಕಾಣಿಸಿಕೊಂಡ ನಂತರ ಭಾರತ ತನ್ನ ಸುಮಾರು ೮೦ ಕೋಟಿ ಜನರಿಗೆ ಎರಡು ವರ್ಷಗಳಿಂದ ಉಚಿತ ಪಡಿತರವನ್ನು ನೀಡುತ್ತಿದೆ ಎಂದು ತಿಳಿದು ಜಗತ್ತು ಆಶ್ಚರ್ಯಚಕಿತವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಎಲ್ಲಾ ಬಾಗಿಲುಗಳು ಮುಚ್ಚಿರುವುದರಿಂದ ಪೆಟ್ರೋಲ್, ಡಿಸೇಲ್ ಸೇರಿದಂತೆ ತೈಲ ಹಾಗೂ ರಸಗೊಬ್ಬರಗಳನ್ನು ಖರೀದಿಸುವುದು ಕಷ್ಟಕರವಾಗಿದೆ. ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ ಪ್ರತಿಯೊಬ್ಬರೂ ತಮ್ಮ ಷೇರುಗಳನ್ನು ಭದ್ರಪಡಿಸಿಕೊಳ್ಳಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ. ಜಗತ್ತು ಈಗ ಹೊಸ ಸಮಸ್ಯೆಯನ್ನು ಎದುರಿಸುತ್ತಿದೆ. ಪ್ರಪಂಚದ ಆಹಾರ ಸಂಗ್ರಹ ಖಾಲಿಯಾಗುತ್ತಿದೆ, ಅಮೆರಿಕಾ ಅಧ್ಯಕ್ಷರೊಂದಿಗೆ ಮಾತನಾಡುವ ವೇಳೆ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು. ಡಬ್ಲ್ಯುಟಿಒ ಅನುಮತಿ ನೀಡಿದರೆ, ನಾಳೆಯಿಂದಲೇ ವಿಶ್ವಕ್ಕೆ ಆಹಾರ ದಾಸ್ತಾನು ಪೂರೈಸಲು ಭಾರತ ಬದ್ಧವಾಗಿದೆ ಎಂದು ನಾನು ಸಲಹೆ ನೀಡಿದ್ದೇನೆ ಎಂದು ಮೋದಿ ಹೇಳಿದ್ದಾರೆ.