ಕಾನೂರು, ಏ. ೯: ಪೊನ್ನಂಪೇಟೆ ತಾಲೂಕಿನ ಕಾನೂರು ಗ್ರಾಮದ ಬ್ರಹ್ಮಗಿರಿಪುರದ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಮುತ್ತಪ್ಪ ದೇವರ ಉತ್ಸವ ನಡೆಯಿತು.
ಸೋಮವಾರ ಸಂಜೆ ೬ ಗಂಟೆಗೆ ಮುತ್ತಪ್ಪನ್ ವೆಳ್ಳಾಟಂ, ಶಾಸ್ತಪ್ಪನ್ ವೆಳ್ಳಾಟಂ ಮೂಲಕ ಚಾಲನೆ ನೀಡಲಾಯಿತು. ನಂತರ ಮಧ್ಯರಾತ್ರಿ ೨ ಗಂಟೆಗೆ ಬಸರಿಮಲೆ ತೆರೆ ನಡೆಯಿತು. ಚಂಡೆ ವಾದ್ಯಗಳೊಂದಿಗೆ ನೃತ್ಯ ಮಾಡುತ್ತಾ, ಚೀರಿಡುತ್ತಿದ್ದ ಭಕ್ತರನ್ನು ಹಿಮ್ಮೆಟ್ಟಿಸುವ ದೃಶ್ಯ ಮನರಂಜಿಸುತ್ತಿತ್ತು.
೨೦ ಅಡಿ ಎತ್ತರದ ತೆಂಗಿನ ಗರಿಯ ಮುಡಿಯನ್ನು ಗುಳಿಗ ಹೊತ್ತು ಮಾಡಿದ ನೃತ್ಯ ಗಮನ ಸೆಳೆಯಿತು. ಮುಂಜಾನೆ ೭ ಗಂಟೆಗೆ ಬೆಂಕಿ ಹೊತ್ತು ಬಂದ ಕಂಡಕರ್ಣ ಎಲ್ಲರ ಮೈ ನಡುಗಿಸಿತು.
ಕೇರಳ ಮೂಲದ ತಂಡದ ಚಂಡೆ ವಾದ್ಯ ಭಕ್ತಾದಿಗಳನ್ನು ಕುಣಿಯುವಂತೆ ಮಾಡಿತ್ತು. ಮುತ್ತಪ್ಪ, ತಿರುವಪ್ಪ, ಗುಳಿಗ, ಕಂಡಕರ್ಣ, ಕುಟ್ಟಿಚಾತ, ಭಗವತಿ, ಬಸರಿಮಲೆ ದೈವಗಳ ತೆರೆ ನಡೆಯಿತು. ಸುತ್ತಮುತ್ತಲಿನ ಕಾನೂರು, ಕೋತೂರು ಗ್ರಾಮ ಸೇರಿದಂತೆ, ವಡ್ರಮಾಡು, ಚೈನ್ ಗೇಟ್, ಕಪ್ಪರಮನೆ ವ್ಯಾಪ್ತಿಯ ೧೦೦೦ಕ್ಕೂ ಅಧಿಕ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಮಂಗಳವಾರ ಮಧ್ಯಾಹ್ನ ಕಂಡಕರ್ಣ ಮತ್ತು ಭಗವತಿಗೆ ಬಲಿ ನೀಡುವ ಮೂಲಕ ಉತ್ಸವಕ್ಕೆ ತೆರೆ ಎಳೆಯಲಾಯಿತು. ಉತ್ಸವದ ನೇತೃತ್ವವನ್ನು ಶ್ರೀ ಮುತ್ತಪ್ಪ ದೇವಾಲಯ ಸಮಿತಿಯ ಪದಾಧಿಕಾರಿಗಳು ವಹಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.