ಗಾಳಿಬೀಡು, ಏ. ೯: ಮಡಿಕೇರಿ ಸಮೀಪದ ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ನರೇಂದ್ರ ಮೋದಿ ಅವರ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವನ್ನು ಅರ್ಥ ಪೂರ್ಣವಾಗಿ ನೆರವೇರಿಸಲಾಯ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲೆಯ ಭಾರತ್ ಸ್ಕೌಟ್ ಮತ್ತು ಗೈಡ್ನ ಪ್ರಧಾನ ಆಯುಕ್ತರಾದ ಕೆ.ಟಿ. ಬೇಬಿ ಮ್ಯಾಥ್ಯೂ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಪರೀಕ್ಷೆ ಎಂದರೆ ಮಕ್ಕಳು ಭಯಪಡಬಾರದು, ಅದರೊಂದಿಗೆ ಸಖ್ಯ ಬೆಳೆಸಿಕೊಳ್ಳಬೇಕು. ಪರೀಕ್ಷೆಯ ಕುರಿತ ಭಯವನ್ನು ಮಕ್ಕಳ ಮನಸ್ಸಿನಿಂದ ದೂರ ಮಾಡುವುದೇ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನವೋದಯ ಶಾಲೆಯ ಸುಮಾರು ೫೦೦ ವಿದ್ಯಾರ್ಥಿಗಳು ಅಲ್ಲದೆ, ಗಾಳಿಬೀಡಿನ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳೂ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾಲಯದ ಪ್ರಾಂಶುಪಾಲ ಪಂಕಜಾಕ್ಷನ್, ಉಪಪ್ರಾಂಶುಪಾಲೆ ಸುಧಾಮಣಿ, ಹಿರಿಯ ಶಿಕ್ಷಕರಾದ ಗಂಗಾಧರನ್, ಆಶಿಶ್ ಜೋಹರಿ ಮುಂತಾದವರು ಉಪಸ್ಥಿತರಿದ್ದರು.
ಕನ್ನಡ ಅಧ್ಯಾಪಕರಾದ ಮಾರುತಿ ದಾಸಣ್ಣವರ್ ಸ್ವಾಗತಿಸಿ, ಕಾರ್ಯಕ್ರಮದ ಔಚಿತ್ಯ ಮತ್ತು ಉದ್ದೇಶವನ್ನು ವಿವರಿಸಿದರು.