ಮಡಿಕೇರಿ, ಏ. ೧೦: ಯುವ ತುಳುವೆರ ಸಮಿತಿ ವತಿಯಿಂದ ಮೇ ೧೨ ರಿಂದ ೧೫ ರವರೆಗೆ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಕೊಡಗು ತುಳುವೆರ ಕ್ರಿಕೆಟ್ ಪ್ರೀಮಿಯರ್ ಲೀಗ್ ಆಯೋಜಿಸ ಲಾಗಿದೆ ಎಂದು ಆಯೋಜಕ ವಿವೇಕ್ ಮೊಗೇರ ತಿಳಿಸಿದರು.

ಜಿಲ್ಲೆಯಲ್ಲಿ ಬಂಟ, ಬಿಲ್ಲವ, ಮೊಗೇರ, ಆದಿ ದ್ರಾವಿಡ, ಕುಲಾಲ, ಪರಿವಾರ ಬಂಟ, ವಿಶ್ವ ಕರ್ಮ, ಮುರಾಠ/ಮರಾಠಿ (ನಾಯ್ಕ), ತುಳುವ ಬ್ರಾಹ್ಮಣ, ಪದಾರ್ಥಿ, ಗಾನಿಗ ಸಮುದಾಯ ಸೇರಿ ಸುಮಾರು ತುಳು ಜನಾಂಗ ನೆಲೆಸಿದೆ. ಇವರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಮತ್ತು ಯುವ ಜನಾಂಗವನ್ನು ಸಂಘಟಿಸುವ ಸಲುವಾಗಿ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಐಪಿಎಲ್ ಮಾದರಿಯಲ್ಲಿ ನಡೆಯುವ ಪಂದ್ಯಾಟದಲ್ಲಿ ೧೨ ಫ್ರಾಂಚೈಸಿಗಳು ಒಟ್ಟು ೩೦೦ ಆಟಗಾರರನ್ನು ಬಿಡ್ಡಿಂಗ್ ಮುಖಾಂತರ ಖರೀದಿಸಲಿದ್ದಾರೆ. ಆಸಕ್ತ ಆಟಗಾರರು ಒಂದು ವಾರದೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.

ಪ್ರಥಮ ಸ್ಥಾನ ಪಡೆದ ತಂಡಕ್ಕೆ ೧,೨೩,೩೩೩ ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ೬೬,೭೭೭ ನಗದು ಮತ್ತು ಆಕರ್ಷಕ ಟ್ರೋಫಿ, ತೃತೀಯ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಗುವುದು. ಅಲ್ಲದೇ ವೈಯಕ್ತಿಕವಾಗಿ ಪಂದ್ಯ ಪುರುಷೋತ್ತಮ, ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟ್ಸ್ಮನ್ ಇತ್ಯಾದಿ ಪ್ರಶಸ್ತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೀಪಕ್ ರೈ ೯೯೦೦೧೦೨೬೪೬, ವಿವೇಕ್ ಮೊಗೇರ ೮೧೯೭೮೭೫೦೪೩, ಬಬಿತ್ ಪೂಜಾರಿ ೭೪೮೩೫೮೭೨೭೩ಸಂಪರ್ಕಿಸಬಹುದು ಎಂದು ತಿಳಿಸಿದರು.

ಪುರುಷರಿಗೆ ಹಗ್ಗಜಗ್ಗಾಟ ಮತ್ತು ಮಹಿಳೆಯರಿಗೆ ಥ್ರೋಬಾಲ್ ಮೇ ೧೪ ಮತ್ತು ೧೫ ರಂದು ನಡೆಯಲಿದೆ. ಮೇ ೧೨ ರಂದು ತುಳುನಾಡಿನ ವೇಷಭೂಷಣ, ನೃತ್ಯ, ವಾದ್ಯದೊಂದಿಗೆ ಮೈದಾನಕ್ಕೆ ಮೆರವಣಿಗೆ ನಡೆಯಲಿದೆ. ಕ್ರೀಡಾಕೂಟದಲ್ಲಿ ಅರವಿಂದ್ ಬೊಲಾರ್, ಸ್ಯಾಂಡಲ್‌ವುಡ್‌ನ ನಟರಾದ ರಕ್ಷಿತ್ ಶೆಟ್ಟಿ, ರಾಜು ಬಿ. ಶೆಟ್ಟಿ, ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ, ಎಸ್. ಅಂಗಾರ, ಸಂಸದ ಪ್ರತಾಪ್ ಸಿಂಹ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಆಯೋಜಕರಾದ ದೀಪಕ್ ರೈ, ಕೇಶವ್ ಶೆಟ್ಟಿ, ಚೇತನ್ ಪೂಜಾರಿ ಇದ್ದರು.