ಕುಶಾಲನಗರ, ಏ. ೮: ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮಾಡಲು ವಾರ್ಷಿಕ ಲೈಸೆನ್ಸ್ ಪದ್ಧತಿ ಮುಂದುವರಿಸುವAತೆ ಮಾಂಸ ಮಾರಾಟದ ವ್ಯಾಪಾರಿಗಳ ಸಂಘ ಪಂಚಾಯಿತಿ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ೨೦೧೪ ರಿಂದ ಇದುವರೆಗೆ ಲೈಸೆನ್ಸ್ ಆಧಾರದಲ್ಲಿ ಕೋಳಿ ಕುರಿ ಮಾಂಸ ಮಾರಾಟಕ್ಕೆ ಪಂಚಾಯಿತಿ ಲೈಸೆನ್ಸ್ ನೀಡುತ್ತಿದ್ದು, ಈಗಾಗಲೇ ಖಾಸಗಿ ಕಟ್ಟಡಗಳಲ್ಲಿ ಮಾಂಸ ಮಾರಾಟ ನಡೆಯುತ್ತಿದೆ. ಪ್ರತಿ ಮಳಿಗೆಯಲ್ಲಿ ಹಲವು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು ಕಳೆದ ಮೂರು ವರ್ಷಗಳಿಂದ ಕೊರೊನಾ ಹಿನ್ನೆಲೆ ವ್ಯಾಪಾರಸ್ಥರು ಬಹುತೇಕ ನಷ್ಟಕ್ಕೆ ಒಳಗಾಗಿದ್ದರು. ಇದೀಗ ಲೈಸನ್ಸ್ ಆಧಾರದಲ್ಲಿ ನಡೆಯುತ್ತಿರುವ ಅಂಗಡಿಗಳು ಪ್ರತ್ಯೇಕವಾಗಿ ಪಂಚಾಯಿತಿಯ ನಿಯಮದಂತೆ ವ್ಯಾಪಾರ ನಡೆಸುತ್ತಿದೆ. ಈ ಹಿನ್ನೆಲೆ ಈ ಸಾಲಿನಲ್ಲಿ ಮಾಂಸ ಮಾರಾಟಕ್ಕೆ ಟೆಂಡರ್ ಕರೆಯುವ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕೆಂದು ಪಂಚಾಯಿತಿ ಅಧ್ಯಕ್ಷ ರೇಣುಕಾಸ್ವಾಮಿ ಅವರಿಗೆ ಮನವಿ ಪತ್ರದಲ್ಲಿ ಕೋರಿದ್ದಾರೆ.

ಈ ಸಂದರ್ಭ ಸಂಘದ ಅಧ್ಯಕ್ಷ ವಿನೋದ್‌ಕುಮಾರ್, ಕಾರ್ಯದರ್ಶಿ ವೀರ ಮೊಹಿದ್ದೀನ್, ಉಪಾಧ್ಯಕ್ಷ ಬಶೀರ್ ಅಹಮ್ಮದ್ ಪಂಚಾಯಿತಿ ಸದಸ್ಯರಾದ ಕೆ.ಕೆ. ನಾರಾಯಣ, ರಾಜಪ್ಪ, ವಕೀಲ ಕರುಣಾಕರನ್ ಇದ್ದರು.