ನಾಪೋಕ್ಲು, ಏ. ೯: ಜಿಲ್ಲೆಯ ಸುಮಾರು ೧೨ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಎ.ಟಿ.ಎಂ. ಕೇಂದ್ರವನ್ನು ಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ಸ್ಥಾಪಿಸಲಾಗಿದೆ ಎಂದು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕೊಡಗು ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಹೇಳಿದರು. ಅವರು ನಾಪೋಕ್ಲು ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದಲ್ಲಿ ನೂತನವಾಗಿ ಪ್ರಾರಂಭಿಸಲಾದ ಎ.ಟಿ.ಎಂ. ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಈ ಎ.ಟಿ.ಎಂ. ಸ್ಥಾಪಿಸಲು ಕೇಟೋಳಿರ ಹರೀಶ್ ಪೂವಯ್ಯ ಕಾರಣ ರಾಗಿದ್ದಾರೆ ಎಂದ ಅವರು, ಮುಂದೆ ಜಿಲ್ಲೆಯ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸುವುದರೊಂದಿಗೆ, ಪೇಟಿಎಂ ವ್ಯವಸ್ಥೆಯನ್ನು ಮಾಡಲು ಚಿಂತನೆ ನಡೆಸಲಾಗಿದೆ ಎಂದರು. ಜಿಲ್ಲೆಯಲ್ಲಿ ಸುಮಾರು ೧೩ ಸಹಕಾರ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸ್ವಂತ ಕಟ್ಟಡ ಇದ್ದು ಮುಂದೆ ಜಿಲ್ಲೆಯ ಎಲ್ಲಾ ಸಹಕಾರಿ ಸಂಘಗಳಿಗೆ ಸ್ವಂತ ಕಟ್ಟಡವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಠೇವಣಾತಿ ಹೆಚ್ಚಿಸಲು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು. ಕಕ್ಕಬ್ಬೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಎ.ಟಿ.ಎಂ.ನ್ನು ಕಕ್ಕಬ್ಬೆಯಲ್ಲಿ ಸ್ಥಾಪಿಸು ವಂತೆ ಕೋರಿದಾಗ ಪ್ರತಿಕ್ರಿಯಿಸಿದ ಅವರು, ಮುಂದೆ ಕಕ್ಕಬ್ಬೆಯಲ್ಲಿ ಎ.ಟಿ.ಎಂ. ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ವೇದಿಕೆಯಲ್ಲಿ ನಾಪೋಕ್ಲು ಕೊಡವ ಸಮಾಜದ ಸ್ಥಾಪಕ ಅಧ್ಯಕ್ಷ ಮಣವಟ್ಟೀರ ಬಿ. ಮಾಚಯ್ಯ, ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಕೊಂಡೀರ ನಾಣಯ್ಯ, ಹಿರಿಯರಾದ ಕಲಿಯಂಡ ಹ್ಯಾರಿ ಮಂದಣ್ಣ, ಕಾಂಡAಡ ಜಯ ಕರುಂಬಯ್ಯ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅರೆಯಡ ಅಶೋಕ ಮಾತ ನಾಡಿದರು. ಈ ಸಂದರ್ಭ ಡಿಸಿಸಿ ಬ್ಯಾಂಕ್, ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ, ನಿರ್ದೇಶಕರು, ವ್ಯವಸ್ಥಾಪಕ, ಸಿಬ್ಬಂದಿಗಳು, ಊರ ಪ್ರಮುಖರು ಮತ್ತಿತರರು ಉಪಸ್ಥಿತರಿದ್ದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ ಸ್ವಾಗತಿಸಿ, ಮಾಜಿ ಅಧ್ಯಕ್ಷ ನೂರಂಬಡ ಉದಯ ಶಂಕರ್ ವಂದಿಸಿದರು.