ಮಡಿಕೇರಿ, ಏ. ೮: ಜಿಂಕೆ ಕೊಂಬನ್ನು ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನು ಬಂಧಿಸುವಲ್ಲಿ ಸಿ.ಐ.ಡಿ. ಅರಣ್ಯ ಸಂಚಾರಿ ದಳ ಯಶಸ್ವಿಯಾಗಿದೆ.
ಮೂಲತಃ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆಯ ರವಿ ಅಲಿಯಾಸ್ ಮಂಜು ಹುಣಸೆಕುಪ್ಪೆ ಬಂಧಿತ ಆರೋಪಿ. ತಾ. ೮ ರಂದು ವೀರಾಜಪೇಟೆ ನಗರದ ಪಂಜರ್ಪೇಟೆ ಸಮೀಪದ ಕಾವೇರಿ ಪದವಿ ಪೂರ್ವ ಕಾಲೇಜಿನ ಮುಖ್ಯದ್ವಾರದ ಮುಂಭಾಗದ ಬಸ್ಸು ತಂಗುದಾಣದಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಜಿಂಕೆಯ ಮೂರು ಕೊಂಬುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಕಾಯುತ್ತಿರುವ ಸಂಬAಧ ಖಚಿತ ಮಾಹಿತಿ ಹಿನ್ನೆಲೆ ದಾಳಿ ನಡೆಸಿದ ಅರಣ್ಯ ಸಂಚಾರಿ ದಳ ಮಾಲು ಸಹಿತ ಆರೋಪಿಯನ್ನು ವಶಕ್ಕೆ ಪಡೆದು ಕೊಂಡಿದೆ. ಬಳಿಕ ವೀರಾಜಪೇಟೆ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ನ್ಯಾಯಾಲಯವು ೧೫ ದಿನಗಳ ನ್ಯಾಯಾಂಗ ಬಂಧಕ್ಕೆ ಆದೇಶಿಸಿದೆ. ಆರೋಪಿ ರವಿಗೆ ಹೆಚ್.ಡಿ. ಕೋಟೆಯ
(ಮೊದಲ ಪುಟದಿಂದ) ತನ್ನ ಜಮೀನಿನಲ್ಲಿ ಕೊಂಬುಗಳು ದೊರೆತಿವೆ. ಬಳಿಕ ಮಾರಾಟಕ್ಕೆಂದು ವೀರಾಜಪೇಟೆಗೆ ತಂದಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ಪೊಲೀಸ್ ಮಹಾನಿರೀಕ್ಷಕರಾದ ಕೆ.ವಿ.ಶರತ್ ಚಂದ್ರ ನಿರ್ದೇಶನದ, ಸಿಐಡಿ ಪೊಲೀಸ್ ಅರಣ್ಯ ಘಟಕದ ಅಧೀಕ್ಷಕ ಎನ್.ಟಿ.ಶ್ರೀನಿವಾಸ ರೆಡ್ಡಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪ್ರಭಾರ ಆರಕ್ಷಕ ಉಪನಿರೀಕ್ಷಕ ಸಿ.ಯು. ಸವಿ, ಸಿಬ್ಬಂದಿಗಳಾದ ಟಿ.ಪಿ. ಮಂಜುನಾಥ್, ಕೆ.ಎಸ್. ದೇವಯ್ಯ, ಸಿ.ಬಿ.ಬೀನ, ಎಸ್.ಎಂ. ಯೋಗೇಶ್, ಪಿ.ಯು. ಮುನೀರ್, ಆರ್. ನಂದಕುಮಾರ್ ಇದ್ದರು.