ಪೆರಾಜೆ, ಏ. ೮: ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವದ ಅಂಗವಾಗಿ ಶ್ರೀ ಭಗವತಿ ದೊಡ್ಡಮುಡಿ ನಡೆಯಿತು.

ಸುಮಾರು ೩೦ ಅಡಿ ಎತ್ತರದ ವೈವಿಧ್ಯಮಯ ಅಲಂಕಾರಗಳಿAದ ಕೂಡಿದ ಭಗವತಿಯ ವಿರಾಟ್ ರೂಪದ ಮುಡಿಯ ದರ್ಶನಕ್ಕೆ ರಾಜ್ಯದ ವಿವಿಧೆಡೆ ಹಾಗೂ ಕೇರಳದಿಂದಲೂ ಭಕ್ತರು ಆಗಮಿಸಿದ್ದರು.

ಭಾಗಮಂಡಲ ಶ್ರೀ ಭಗಂಡೇಶ್ವರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪೆರಾಜೆ ಶಾಸ್ತಾವು ದೇವಸ್ಥಾನವು ತಲಕಾವೇರಿ ಶ್ರೀ ಕಾವೇರಿ ಕ್ಷೇತ್ರದೊಂದಿಗೂ ಧಾರ್ಮಿಕ ನಂಟು ಇದ್ದು ನೂರೊಂದು ದೈವಗಳ ನೆಲೆವೀಡಾಗಿರುವ ಪೆರಾಜೆಯಲ್ಲಿ ಭಗವತಿಯ ದೊಡ್ಡಮುಡಿ ಪ್ರಮುಖ ಆಕರ್ಷಣೆಯಾಗಿದೆ. ಬೆಳಿಗ್ಗೆಯಿಂದ ಪೊಟ್ಟನ್ ದೈವ, ರಕ್ತೇಶ್ವರಿ,ಆಯರ್ ಭಗವತಿ, ಪುಲ್ಲೂರ್ ಕಾಳಿ, ಪುಲ್ಲೂರು ಕಣ್ಣನ್, ವಿಷ್ಣು ಮೂರ್ತಿ ಹಾಗೂ ಬೇಟೆ ಕರಿಮಗನ್ ಈಶ್ವರನ್ ದೈವಗಳ ಕೋಲಗಳು ನಡೆದವು. ಸಂಜೆ ಶ್ರೀ ಭಗವತಿ ದೊಡ್ಡಮುಡಿ ನಂತರ ಪಯ್ಯೊಳಿ ಕಾರ್ಯಕ್ರಮ ನಡೆದವು. ಮಾರ್ಚ್ ೯ ರಿಂದ ಗೊನೆ ಮುಹೂರ್ತದಿಂದ ಪ್ರಾರಂಭಗೊAಡ ಜಾತ್ರ ಉತ್ಸವವು ಪ್ರಮುಖ ಆಕರ್ಷಣೆಯಾಗಿರುವ ದೇವರ ಬಲಿ, ನೃತ್ಯ ಬಲಿ, ದೊಡ್ಡ ಮುಡಿ, ಶ್ರೀ ಕರಿಭೂತ ಕೋಲಗಳು, ಶ್ರೀ ವಿಷ್ಣು ಮೂರ್ತಿ ಒತ್ತೆಕೋಲದೊಂದಿಗೆ ತಾ. ೧೦ಕ್ಕೆ ಸಂಪನ್ನಗೊಳ್ಳಲಿದೆ.

ಶ್ರೀ ಭಗವತಿ ದೇವಿಗೆ ಕಂಕಣ ಭಾಗ್ಯ, ಸಂತಾನ ಭಾಗ್ಯ ಹಾಗೂ ಇತರ ಕಾರ್ಯಗಳಿಗೆ ಹರಿಕೆ ಹೊತ್ತ ಭಕ್ತರು ಸೀರೆ, ಚಿನ್ನ, ಬೆಳ್ಳಿಗಳನ್ನು ಹರಕೆ ರೂಪದಲ್ಲಿ ಅರ್ಪಿಸಿದರು. ದೇವಾಲಯದ ಪ್ರಧಾನ ಅರ್ಚಕ ವೆಂಕಟರಮಣ ಕೆ. ಪಾಂಙಣ್ಣಾಯ, ಆಡಳಿತ ಮೊಕ್ತೇಸರ ವಿಶ್ವನಾಥ ಕುಂಬಳಚೇರಿ, ಕಾರ್ಯದರ್ಶಿ ಹೊನ್ನಪ್ಪ ಕೊಳಂಗಾಯ, ಸಹ ಕಾರ್ಯದರ್ಶಿ ಜೋಯಪ್ಪ ನಿಡ್ಯಮಲೆ, ತಕ್ಕಮುಖ್ಯಸ್ಥರು ಗಳಾದ ಭಾಸ್ಕರ ಕೋಡಿ, ವಿಶ್ವನಾಥ ಮೂಲೆಮಜಲು, ಪ್ರಭಾಕರ ಕೋಡಿ, ಗಣಪತಿ ಕುಂಬಳಚೇರಿ, ಪುರುಷೋತ್ತಮ ನಿಡ್ಯಮಲೆ, ಮಾಜಿ ಮೊಕ್ತೇಸರುಗಳು ಇದ್ದರು.