*ಗೋಣಿಕೊಪ್ಪ, ಏ. ೮: ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಹಾಗೂ ಚೌಡಿಕಟ್ಟೆ ಸಂಪರ್ಕ ರಸ್ತೆಯಲ್ಲಿ ನಡೆಯುತ್ತಿರುವ ಮೋರಿ ನಿರ್ಮಾಣ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದೆ ಎಂಬ ಸ್ಥಳೀಯರ ಆರೋಪವನ್ನು ಗಂಭೀರವಾಗಿ ಪರಿಗಣಿಸಿ ಶಾಸಕ ಕೆ.ಜಿ. ಬೋಪಯ್ಯ ಅವರು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಕ್ಷಣವೇ ಲೋಪದೋಷದಿಂದ ನಡೆಯುತ್ತಿರುವ ಕಾಮಗಾರಿಯನ್ನು ಸರಿಪಡಿಸಿ ಸಂಪೂರ್ಣ ಅನುದಾನವನ್ನು ಬಳಸಿಕೊಂಡು ವ್ಯವಸ್ಥಿತ ರೂಪದಲ್ಲಿ ಮೋರಿ ನಿರ್ಮಿಸುವಂತೆ ಮತ್ತು ಎರಡೂ ಬದಿಗಳಲ್ಲಿ ತಡೆಗೋಡೆ ನಿರ್ಮಿಸಲು ಗುತ್ತಿಗೆದಾರನಿಗೆ ಎಚ್ಚರಿಕೆಯ ನೋಟೀಸ್ ನೀಡುವ ಮೂಲಕ ಕ್ರಮ ಕೈಗೊಳ್ಳಬೇಕೆಂದು ಲೋಕೋಪಯೋಗಿ ಇಂಜಿನಿಯರುಗಳಿಗೆ ಸೂಚಿಸಿದರು.

ಮರೂರು ಚೌಡಿಕಟ್ಟೆ ಸಂಪರ್ಕ ರಸ್ತೆಯಲ್ಲಿ ಮಳೆಗಾಲ ಸಂದರ್ಭ ಸಂಚರಿಸಲು ಸಾಧ್ಯವಾಗುತ್ತಿರಲಿಲ್ಲ. ಕೆರೆಯ ನೀರು ರಸ್ತೆಯ ಮೇಲ್ಭಾಗದಲ್ಲಿ ನಿಂತು ದ್ವೀಪವಾಗಿ ಪರಿವರ್ತನೆಗೊಳ್ಳುತ್ತಿತ್ತು. ಇದರಿಂದ ಈ ಭಾಗದ ಜನರಿಗೆ ಮಳೆಗಾಲದಲ್ಲಿ ರಸ್ತೆ ಸಂಪರ್ಕ ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮಾರ್ಗದ ನಡುವೆ ಮೋರಿ ನಿರ್ಮಿಸಲು ಮನವಿ ಸಲ್ಲಿಸಿದ್ದರು. ಸ್ಥಳೀಯರ ಮನವಿಗೆ ಸ್ಪಂದಿಸಿ ಶಾಸಕರು ಈ ಭಾಗದಲ್ಲಿ ಮೋರಿ ಮತ್ತು ಎರಡು ಬದಿಯಲ್ಲಿ ತಡೆಗೋಡೆ ನಿರ್ಮಿಸಲು ರೂ. ೫ ಲಕ್ಷ ಅನುದಾನ ಬಿಡುಗಡೆ ಮಾಡಿಸಿದ್ದರು. ಆದರೆ ಗುತ್ತಿಗೆದಾರ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳದೆ ಕೇವಲ ಒಂದು ಲಕ್ಷದ ವೆಚ್ಚದಲ್ಲಿ ಮೋರಿ ನಿರ್ಮಿಸಿ ಕಳಪೆ ಕಾಮಗಾರಿ ಮಾಡುವ ಮೂಲಕ ಗ್ರಾಮಸ್ಥರನ್ನು ವಂಚಿಸಲು ಮುಂದಾಗಿದ್ದರು.

ಈ ಬಗ್ಗೆ ಗ್ರಾಮಸ್ಥರು ಅಸಮಾಧಾನಗೊಂಡು ಶಾಸಕರಿಗೆ ಕಳಪೆ ಕಾಮಗಾರಿ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಆಶಾ, ಬಿಜೆಪಿ ಶಕ್ತಿ ಕೇಂದ್ರದ ಸಹ ಪ್ರಮುಖ್ ಗೋವಿಂದ, ಗೋಣಿಕೊಪ್ಪ ಠಾಣಾಧಿಕಾರಿ ಸುಬ್ಬಯ್ಯ ಹಾಗೂ ಇತರರು ಇದ್ದರು.