ಗೋಣಿಕೊಪ್ಪಲು, ಏ. ೮: ಯರವ ಜನಾಂಗ ಕುಟುಂಬಗಳ ನಡುವೆ ವರ್ಷಂಪ್ರತಿ ನಡೆಯುವಂತೆ ಕ್ರೀಡಾಕೂಟವು ಈ ಬಾರಿ ಮೇ ತಿಂಗಳ ಎರಡನೇ ವಾರದಲ್ಲಿ ನಡೆಸಲು ಯರವ ಸಮಾಜ ನಿರ್ಧಾರ ಕೈಗೊಂಡಿದೆ. ಸಮಾಜದ ಅಧ್ಯಕ್ಷ ವೈ.ಯಂ. ರವಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಕಳೆದ ೯ ವರ್ಷಗಳಿಂದ ಕ್ರಿಕೆಟ್ ಹಬ್ಬವನ್ನು ಅತ್ಯಂತ ಯಶಸ್ವಿಯಾಗಿ ಆಯೋಜನೆ ಮಾಡಿಕೊಂಡು ಬಂದಿರುವ ಸಮಾಜವು ಈ ಬಾರಿ ಎವುಲಾತ್ಲೇರಂಡಾ ಕುಟುಂಬದ ಹೆಸರಿನಲ್ಲಿ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಜಿಲ್ಲೆಯ ವಿವಿಧೆಡೆಯಿಂದ ಯರವ ಜನಾಂಗದ ೬೪ ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದೆ.

ತಿತಿಮತಿ ಪ್ರೌಢಶಾಲಾ ಮೈದಾನದಲ್ಲಿ ಕ್ರೀಡಾಕೂಟ ನಡೆಯಲಿದ್ದು, ೫ ದಿನಗಳ ಕಾಲ ಪಂದ್ಯಾಟವು ನಡೆಯಲಿದೆ. ಸಮಾರೋಪ ಸಮಾರಂಭದAದು ಮಹಿಳೆಯರಿಗಾಗಿ ಹಗ್ಗಜಗ್ಗಾಟ, ತಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸುವ ಪ್ರಯತ್ನವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ರವಿ ತಿಳಿಸಿದರು. ಯರವ ಕುಟುಂಬಗಳ ನಡುವೆ ನಡೆಯುತ್ತಿರುವ ಈ ಕ್ರೀಡೆಯಲ್ಲಿ ಜಿಲ್ಲೆಯ ಮೂಲೆ-ಮೂಲೆಯಿಂದ ಆದಿವಾಸಿಗಳು ಬಂದು ಒಂದೆಡೆ ಸೇರುವ ಪ್ರಯತ್ನ ಮಾಡಲಾಗುತ್ತಿದೆ. ೩ ಲಕ್ಷ ಅಂದಾಜು ವೆಚ್ಚದಲ್ಲಿ ಕ್ರೀಡಾಕೂಟ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಜನಾಂಗದ ಪ್ರಮುಖ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ನಡೆಯಲಿದೆ ಎಂದರು. ಕ್ರೀಡಾ ಸಂಚಾಲಕ ವೈ.ಕೆ. ಮಲ್ಲಪ್ಪ ಕ್ರೀಡಾಕೂಟ ನಡೆಸುವ ಬಗ್ಗೆ ವಿವರ ನೀಡಿದರು.

ಸಭೆಯಲ್ಲಿ ಯರವ ಸಮಾಜದ ಉಪಾಧ್ಯಕ್ಷ ಪಿ.ಎಸ್. ಕಾಳ, ಖಜಾಂಚಿ ಪಿ.ಎಂ. ಗಣೇಶ, ಕಾರ್ಯದರ್ಶಿ ಪಿ.ಆರ್. ಮಂಜು, ನಿರ್ದೇಶಕರುಗಳಾದ ಪಿ.ಎಸ್. ಶಶಿ, ಪಿ.ಆರ್. ಸಂಜು, ಪಿ.ಎ. ದಿನೇಶ್, ವೈ.ಎಂ. ರೂಪೇಶ್, ವೈ.ಟಿ. ಪವಿ, ಪಿ.ಎಂ. ಪ್ರವೀಣ, ವೈ.ಬಿ. ಅಶೋಕ್, ಪಿ.ಎಂ. ನಿತೀನ್, ಹಾಗೂ ಪಿ.ಎಂ. ರಘು, ಉಪಸ್ಥಿತರಿದ್ದರು.