ಮಡಿಕೇರಿ, ಏ. ೮: ವನ್ಯಪ್ರಾಣಿ - ಮಾನವ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ರೂ. ೧೦೦ ಕೋಟಿ ಮೀಸಲಿಟ್ಟಿದ್ದು, ಇದರಲ್ಲಿ ಕಾಡಾನೆಗಳು ಕಾಡಿನಿಂದ ನಾಡಿಗೆ ನುಸುಳುವದನ್ನು ತಡೆಗಟ್ಟಲು ೬೦೦ ಕಿ.ಮೀ.ವರೆಗೆ ರೈಲ್ವೇ ಕಂಬಿಯಿAದ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುವುದೆಂದು ಅರಣ್ಯ ಇಲಾಖಾ ಸಚಿವ ಉಮೇಶ್ ಕತ್ತಿ ಹೇಳಿದರು.

ಇಲ್ಲಿನ ಅರಣ್ಯ ಭವನದಲ್ಲಿ ಏರ್ಪಡಿಸಲಾಗಿದ್ದ ಮಾನವ - ವನ್ಯಜೀವಿ ಸಂಘರ್ಷದ ಕುರಿತು ಜನಪ್ರತಿನಿಧಿ ಹಾಗೂ ಅಧಿಕಾರಿ ಗಳೊಂದಿಗಿನ ಸಭೆಯಲ್ಲಿ ಪಾಲ್ಗೊಂಡು ಸಂಘ - ಸಂಸ್ಥೆಗಳ ಪ್ರತಿನಿಧಿಗಳಿಂದ ಸಮಸ್ಯೆ, ಅಹವಾಲುಗಳನ್ನು ಆಲಿಸಿ ಸಚಿವರು ಮಾತನಾಡಿದರು. ಮಲೆನಾಡು ಪ್ರದೇಶಗಳನ್ನೊಳಗೊಂಡ ಜಿಲ್ಲೆಗಳಲ್ಲಿ ಮಾನವ - ವನ್ಯಜೀವಿ ಸಂಘರ್ಷ ತಡೆಗೆ ಸರಕಾರ ರೂ ೧೦೦ ಕೋಟಿ ಮೀಸಲಿರಿಸಿದೆ.

ಇದರಲ್ಲಿ ಪ್ರಮುಖವಾಗಿ ಕಾಡಾನೆಗಳ ನುಸುಳದಂತೆ ತಡೆಯಲು ೬೦೦ ಕಿ.ಮೀ. ನಷ್ಟು ರೈಲ್ವೇ ಕಂಬಿಗಳಿAದ ಬ್ಯಾರಿಕೇಡ್ ಅಳವಡಿಸಲಾಗುವುದು. ಈಗಾಗಲೇ ೨೦೦ ಕಿ.ಮೀ.ನಷ್ಟು ಬ್ಯಾರಿಕೇಡ್ ಅಳವಡಿಸಲಾಗಿದೆ. ಇನ್ನು ೪೦೦ ಕಿ.ಮೀ. ನಷ್ಟು ಆಗಬೇಕಿದ್ದು, ೨-೩ ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದೆಂದು ಹೇಳಿದರು.

ರೂ. ೬.೪೫ ಕೋಟಿ ಪರಿಹಾರ

ವನ್ಯಪ್ರಾಣಿಗಳ ಧಾಳಿಗೆ ತುತ್ತಾಗಿ ಸಾವನ್ನಪ್ಪುವ ರೈತರ ಕುಟುಂಬಗಳಿಗೆ ರೂ. ೭.೫೦ ಲಕ್ಷ ಪರಿಹಾರ ವಿತರಣೆ ಮಾಡಲಾಗುವುದು. ೨೦೧೯ ರಿಂದ ೨೨ರ ಅವಧಿಯಲ್ಲಿ ಮಾನವ - ಪ್ರಾಣಿ ಸಂಘರ್ಷ ಹಾಗೂ ಬೆಳೆ ಪರಿಹಾರಾರ್ಥವಾಗಿ ಒಟ್ಟು ರೂ. ೬.೪೫ ಕೋಟಿ ಪರಿಹಾರ

(ಮೊದಲ ಪುಟದಿಂದ) ವಿತರಣೆ ಮಾಡಲಾಗಿದೆ. ೨೦೧೯ -೨೦ರಲ್ಲಿ ರೂ. ೨.೮೯ ಕೋಟಿ ಹಾಗೂ ೨೧-೨೨ರಲ್ಲಿ ರೂ. ೩.೫೬ ಕೋಟಿಯಷ್ಟು ಪರಿಹಾರ ವಿತರಣೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಅಧಿಕಾರಿಗಳಿಗೆ ತಿಳುವಳಿಕೆ

ಜಿಲ್ಲೆಯಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳ ವರ್ತನೆ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಾತನಾಡಿದ ಸಚಿವರು, ಕಾಡು ಕಾಪಾಡಲು ಐಎಫ್‌ಎಸ್ ಅಧಿಕಾರಿಗಳು ಬೇಕು. ಅಧಿಕಾರಿಗಳನ್ನು ಸರಿಪಡಿಸುವ ಕೆಲಸ ಸರಕಾರ ಮಾಡಲಿದೆ. ಅಧಿಕಾರಿಗಳಿಗೆ ತಿಳುವಳಿಕೆ ನೀಡಲಾಗುವುದು ಎಂದು ಹೇಳಿದರು.

ಆರ್‌ಎಫ್‌ಓ ಮಟ್ಟದಲ್ಲಿ ಅನುಮತಿ

ಸ್ವಂತ ಉಪಯೋಗಕ್ಕೆ ಮರಕಡಿಯಲು ಅನುಮತಿಗಾಗಿ ಅಧಿಕಾರಿಗಳು ಸತಾಯಿಸುತ್ತಿರುವ ಬಗ್ಗೆ ರೈತರ ಅಹವಾಲಿಗೆ ಪೂರಕವಾಗಿ ಮಾತನಾಡಿದ ಅರಣ್ಯ ಸಚಿವರು; ಕಚೇರಿಯಿಂದ ಕಚೇರಿಗೆ ಅಲೆದಾಡುವದನ್ನು ತಪ್ಪಿಸಲು ತಹಶೀಲ್ದಾರ್ ಹಾಗೂ ವಲಯ ಅರಣ್ಯಾಧಿಕಾರಿಗಳ ಮಟ್ಟದಲ್ಲಿ ಅನುಮತಿ ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಸಚಿವರು ಹೇಳಿದರು.

ಸಭೆಯ ಆರಂಭದಲ್ಲಿ ಮಾತನಾಡಿದ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಾದ ವಿಜಯ್ ಕುಮಾರ್ ಗೋಗಿ ಅವರು ವನ್ಯಜೀವಿಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ಸಮಗ್ರವಾದ ಡಿಪಿಆರ್ ತಯಾರಿಸಲಾಗಿದೆ. ಆ ನಿಟ್ಟಿನಲ್ಲಿ ೭೦೦ ಕೋಟಿ ರೂ. ಅನುದಾನ ದೊರೆತಲ್ಲಿ ರೈಲು ಬ್ಯಾರಿಕೇಡ್ ನಿರ್ಮಾಣ ಮಾಡಿ ಕಾಡಾನೆ ಹಾವಳಿಯನ್ನು ಶೇ.೯೦ರಷ್ಟು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ ಎಂದು ಅವರು ಹೇಳಿದರು.

ಈ ಹಿಂದೆ ಸರ್ಕಾರ ವನ್ಯಪ್ರಾಣಿಗಳ ಹಾವಳಿ ನಿಯಂತ್ರಿಸಲು ಪ್ರತೀ ವರ್ಷ ೫೦ ಕೋಟಿ ರೂ. ಒದಗಿಸುತ್ತಿತ್ತು, ಈ ಬಾರಿ ೧೦೦ ಕೋಟಿಯನ್ನು ಬಜೆಟಿನಲ್ಲಿ ಘೋಷಿಸಿದೆ. ಆ ನಿಟ್ಟಿನಲ್ಲಿ ವನ್ಯಪ್ರಾಣಿಗಳ ಹಾವಳಿ ತಡೆಯಲು ಶ್ರಮಿಸಲಾಗುವುದು. ಇದೇ ರೀತಿ ಇನ್ನೂ ಏಳು-ಎಂಟು ವರ್ಷಗಳ ಕಾಲ ಅನುದಾನ ಒದಗಿಸಿದಲ್ಲಿ ವನ್ಯಪ್ರಾಣಿಗಳ ನಿಯಂತ್ರಣಕ್ಕೆ ಕ್ರಮವಹಿಸಲಾಗುವುದು ಎಂದರು.

ಸಭೆಯಲ್ಲಿ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚುರಂಜನ್, ವೀಣಾ ಅಚ್ಚಯ್ಯ, ಕರ್ನಾಟಕ ಪಶ್ಚಿಮಘಟ್ಟ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ರವಿಕುಶಾಲಪ್ಪ, ಮಾಜಿ ಸಚಿವ ಯಂ.ಸಿ. ನಾಣಯ್ಯ, ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಪೊಲೀಸ್ ವರಿಷ್ಠಾಧಿಕಾರಿ ಅಯ್ಯಪ್ಪ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್ ಗೋಗಿ, ಅರಣ್ಯ ಸಂರಕ್ಷಣಾಧಿಕಾರಿ ಶಾಶ್ವತಿಮಿಶ್ರ, ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಇತರರಿದ್ದರು.