ಗೋಣಿಕೊಪ್ಪಲು, ಏ. ೮: ಕಾರ್ಮಿಕನನ್ನು ಬಲಿ ತೆಗೆದುಕೊಂಡ ಒಂದನೆ ರುದ್ರಗುಪ್ಪೆ ಸುತ್ತಮುತ್ತಲಿನ ಪ್ರದೇಶದಲ್ಲಿ ಈಗಾಗಲೇ ನಾಲ್ಕು ಹುಲಿಗಳ ಸಂಚಾರವಿರುವುದು ದೃಢಪಟ್ಟಿದೆ. ಇಲಾಖೆಯ ಸಿಬ್ಬಂದಿಗಳು ಹುಲಿಯನ್ನು ಕಂಡು ಹಿಡಿಯಲು ಪ್ರಯತ್ನಗಳು ನಡೆಸಿದ್ದಾರೆ. ಆದಷ್ಟು ಬೇಗನೇ ಹುಲಿಯನ್ನು ಪತ್ತೆಹಚ್ಚಿ ಸೆರೆ ಹಿಡಿಯಲಾಗುವುದು ಎಂದು ಅರಣ್ಯ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವ ಉಮೇಶ್ ಕತ್ತಿ ಭರವಸೆ ನೀಡಿದರು.
ಒಂದನೇ ರುದ್ರಗುಪ್ಪೆಯಲ್ಲಿ ಹುಲಿ ದಾಳಿಯಿಂದ ಮೃತಪಟ್ಟ ಗೋಣಿಕೊಪ್ಪ ಸಮೀಪದ ಗದ್ದೆಮನೆಯ ಲೈನ್ ಮನೆಯಲ್ಲಿ ವಾಸವಿದ್ದ ಕಾರ್ಮಿಕ ಗಣೇಶ್ ಮನೆಗೆ ಅರಣ್ಯ ಸಚಿವ ಉಮೇಶ್ ಕತ್ತಿ ಭೇಟಿ ನೀಡಿ ಇವರ ಪತ್ನಿ ಜ್ಯೋತಿ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೆ ಸರ್ಕಾರದ ವತಿಯಿಂದ ರೂ.೫.೫೦ ಲಕ್ಷದ ಚೆಕ್‌ನ್ನು ಮೃತರ ಪತ್ನಿಗೆ ಈ ಸಂದರ್ಭ ಹಸ್ತಾಂತರ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸುಪ್ರೀಂಕೋರ್ಟಿನ ಆದೇಶದಂತೆ ಯಾವುದೇ ಪ್ರಾಣಿಯನ್ನು ಗುಂಡು ಹೊಡೆದು ಕೊಲ್ಲುವ ಆಗಿಲ್ಲ. ಹುಲಿಯ ಸಂತತಿಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಕೊಡಗು ಜಿಲ್ಲೆಯ ಜನತೆ ಸೂಕ್ತ ಸಲಹೆ ನೀಡಿದ್ದಲ್ಲಿ ಇದನ್ನು ಪರಿಗಣಿಸಿ ಹುಲಿ ಹಾವಳಿಗೆ ಕ್ರಮ ಕೈಗೊಳ್ಳಲಾಗುವುದು. ಅರಣ್ಯದಿಂದ ರೈತರ ತೋಟಗಳಿಗೆ ಬರುವ ಕಾಡಾನೆಯನ್ನು
ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗುವುದು. ಹೀಗಾಗಲೇ ಇವುಗಳ ಕಾಮಗಾರಿ ಕೆಲಸ ಪ್ರಗತಿಯಲ್ಲಿದೆ. ೧ ಕಿ.ಮೀ. ಬ್ಯಾರಿಕ್ಯಾಡ್ ಅಳವಡಿಸಲು ೧.೫೦ ಕೋಟಿ ಖರ್ಚಾಗುತ್ತಿದೆ. ಕಳೆದ ಮೂರು ವರ್ಷದಿಂದ ಅನುದಾನದಲ್ಲಿ ಕೊರತೆ ಉಂಟಾಗಿತ್ತು. ಇದೀಗ ಅನುದಾನ ಲಭ್ಯವಿದ್ದು ಕೊಡಗಿಗೆ ವಿಶೇಷ ಆಸಕ್ತಿ ವಹಿಸಿ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ೩ ಕೋಟಿ ಅನುದಾನವನ್ನು ಹೆಚ್ಚುವರಿಯಾಗಿ ನೀಡಿದ್ದೇವೆ. ಮುಂದೆ ಸಮಸ್ಯೆ ಬಗೆ ಹರಿಯುವ ವಿಶ್ವಾಸವಿದೆ ಎಂದರು.
ಜಿಲ್ಲೆಯ ವಿವಿಧೆಡೆ ವನ್ಯಜೀವಿ ಮಾನವ ಸಂಘರ್ಷದಿAದ ಜನರು ಹೈರಾಣಾಗಿದ್ದು ಈ ಬಗ್ಗೆ ಅರಣ್ಯ ಸಚಿವರು ಜಿಲ್ಲೆಗೆ ಆಗಮಿಸುವಂತೆ ಹಲವು ಸಂಘ ಸಂಸ್ಥೆಗಳು ಒತ್ತಾಯ ಹೇರಿದ್ದವು. ವಿಧಾನ ಪರಿಷತ್ತು ಹಾಗೂ ವಿಧಾನ ಮಂಡಲದಲ್ಲಿ ಇಲ್ಲಿನ ಶಾಸಕರು ಈ ಬಗ್ಗೆ ಬೆಳಕು ಚೆಲ್ಲಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದ ಅರಣ್ಯ ಸಚಿವ ಉಮೇಶ್ ಕತ್ತಿ ಮೊದಲ ಬಾರಿಗೆ ಭೇಟಿ ನೀಡಿ ಇಲ್ಲಿಯ ವಿದ್ಯಾಮಾನಗಳ ಬಗ್ಗೆ ಮಾಹಿತಿ ಪಡೆದರು.
ಕೊಡಗು ಜಿಲ್ಲೆಗೆ ಕರ್ನಾಟಕ ರಾಜ್ಯದ ಅರಣ್ಯ ಸಚಿವ ಉಮೇಶ್ ಕತ್ತಿ ಮೊದಲ ಬಾರಿಗೆ ಭೇಟಿ ನೀಡಿ ಜಿಲ್ಲೆಯ ಆನೆ-ಮಾನವ ಸಂಘರ್ಷ ತಡೆಯಲು ಬೇಕಾದ ಅವಶ್ಯ ಕ್ರಮಗಳ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
(ಮೊದಲ ಪುಟದಿಂದ) ಈಗಾಗಲೇ ದಕ್ಷಿಣ ಕೊಡಗಿನ ವಿವಿಧ ಭಾಗದಲ್ಲಿ ಆನೆ-ಮಾನವ ಸಂಘರ್ಷ ಹಾಗೂ ಹುಲಿ ಹಾವಳಿಯ ಬಗ್ಗೆ ಮಾಹಿತಿ ತಿಳಿದಿದ್ದೇನೆ. ಆನೆ ಹಾವಳಿಯನ್ನು ತಡೆಗಟ್ಟುವ ಸಲುವಾಗಿ ರೈಲ್ವೆ ಬ್ಯಾರಿಕೇಡ್, ಸೋಲಾರ್ ತಂತಿ, ಕಂದಕ ನಿರ್ಮಾಣ ಹಾಗೂ ತೂಗು ಸೋಲಾರ್ ತಂತಿ ಅಳವಡಿಸಲಾಗಿದೆ. ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕೆಲಸವು ಪ್ರಗತಿಯಲ್ಲಿದ್ದು ಮುಂದಿನ ದಿನಗಳಲ್ಲಿ ಆನೆ ಹಾವಳಿ ಕಡಿಮೆಯಾಗುವ ಲಕ್ಷಣಗಳು ಇವೆ ಎಂದು ಸಚಿವ ಉಮೇಶ್ ಕತ್ತಿ ಸುದ್ದಿಗಾರರಿಗೆ ಮಾಹಿತಿ ಒದಗಿಸಿದರು.
ಸಲಹೆಗಳಿಗೆೆ ಆಹ್ವಾನ
ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡರು ವನ್ಯಜೀವಿ ಹಾವಳಿ ಹಾಗೂ ಆನೆ ಹಾವಳಿ ತಡೆಗಟ್ಟಲು ವಿಫಲವಾಗಿದೆ ಎಂದು ಸುದ್ದಿಗಾರರು ಅರಣ್ಯ ಸಚಿವರನ್ನು ಪ್ರಶ್ನಿಸಿದರು. ಈ ವೇಳೆ ಮಾತನಾಡಿದ ಉಮೇಶ್ ಕತ್ತಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಮುಂದೆ ಇಲ್ಲಿನ ಜನತೆ ಸೂಕ್ತ ಸಲಹೆ ನೀಡಿದರೆ ಇದನ್ನು ಪರಿಗಣಿಸಿ ಅನುಷ್ಠಾನಕ್ಕೆ ತರಲಾಗುವುದು ಇಲಾಖೆಯ ಮೂಲಕ ಅಗತ್ಯ ಕ್ರಮಗಳನ್ನು ಕೈಗೊಂಡು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದೆಂದರು.
ಭೇಟಿಯ ವೇಳೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಕರ್ನಾಟಕ ರಾಜ್ಯ ಪಶ್ಚಿಮಘಟ್ಟ ಸಂರಕ್ಷಣೆ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಅರಣ್ಯ ಇಲಾಖೆಯ ರಾಜ್ಯ ವನ್ಯಜೀವಿ ವಿಭಾಗದ ಪಿಸಿಸಿಎಫ್ ವಿಜಯ್‌ಗೋಗಿ, ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯ, ನಾಗರಹೊಳೆ ಡಿಎಫ್‌ಒ ಮಹೇಶ್ ಕುಮಾರ್, ಕೊಡಗು ಜಿಲ್ಲೆಯ ಅರಣ್ಯ ಇಲಾಖೆಯ ಅಧಿಕಾರಿಗಳಾದ ಮಡಿಕೇರಿ ಡಿಎಫ್‌ಒ ಎ.ಟಿ. ಪೂವಯ್ಯ, ವೀರಾಜಪೇಟೆ ಡಿಎಫ್‌ಒ ಚಕ್ರಪಾಣಿ, ನಾಗರಹೊಳೆ ಡಿಎಫ್‌ಓ ಶಿವರಾಮ್ ಬಾಬು ಸೇರಿದಂತೆ ವಿವಿಧ ಅಧಿಕಾರಿಗಳಾದ ಎಸಿಎಫ್ ಗೋಪಾಲ್, ಎಸಿಎಫ್ ಉತ್ತಪ್ಪ, ಹುಣಸೂರು ಎಸಿಎಫ್ ಸತೀಶ್, ಆರ್‌ಎಫ್‌ಒಗಳಾದ ಅಶೋಕ್ ಹುನಗುಂದ ಕಿರಣ್ ಕುಮಾರ್, ಸೇರಿದಂತೆ ಇನ್ನಿತರ ಪ್ರಮುಖರು ಹಾಜರಿದ್ದರು.
-ಹೆಚ್.ಕೆ. ಜಗದೀಶ್